ADVERTISEMENT

603 ಕೋಟಿ ವೆಚ್ಚದ ಕ್ರಿಯಾಯೋಜನೆ

ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 5:59 IST
Last Updated 16 ಜುಲೈ 2013, 5:59 IST

ಬಳ್ಳಾರಿ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಇಲಾಖೆಗಳ 2013-14ನೇ ಸಾಲಿನ ಲಿಂಕ್ ಡಾಕ್ಯುಮೆಂಟ್‌ನಲ್ಲಿ ಯೋಜನಾ ಶೀರ್ಷಿಕೆಯಡಿರೂ204 ಕೋಟಿ  ಹಾಗೂ ಯೋಜನೇತರ ಶೀರ್ಷಿಕೆಯಡಿರೂ399 ಕೋಟಿ ವೆಚ್ಚದ ವಾರ್ಷಿಕ ಕ್ರಿಯಾ ಯೋಜನೆಗೆ  ಸಾಮಾನ್ಯಸಭೆಯಲ್ಲಿ ಅನುಮೋದನೆ ನೀಡಲಾಯಿತು. 

ಜಿಲ್ಲಾ ಪಂಚಾಯತ್ ಅಧ್ಯಕ್ಷೆ  ಸುಮಂಗಳಮ್ಮ ಗುಬಾಜಿ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ  ಈ ಹಿಂದೆ ಸ್ಥಾಯಿ ಸಮಿತಿ ಸಭೆಗಳಲ್ಲಿ ಚರ್ಚಿಸಿ ಕೈಗೊಂಡ ವಾರ್ಷಿಕ ಕ್ರಿಯಾ ಯೋಜನೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ರೂ18 ಕೋಟಿ  ತಾಲ್ಲೂಕು ಪಂಚಾಯತಿ ವ್ಯಾಪ್ತಿಗೆ ರೂ 107 ಕೋಟಿ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆರೂ78 ಕೋಟಿ ಅನುದಾನವನ್ನು ವಿಂಗಡಿಸಲಾಗಿದೆ.  ಇಲಾಖಾವಾರು ಕ್ರಿಯಾ ಯೋಜನೆಗಳನ್ನು ಸ್ಥಾಯಿ ಸಮಿತಿ ಸಭೆಗಳಲ್ಲಿ ಅನುಮೋದಿಸಲಾಯಿತು.

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣವಾಗದಂತೆ ಮುಂಜಾಗ್ರತೆ ಕ್ರಮ ವಹಿಸಬೇಕು.  ವೈದ್ಯಾಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸಬೇಕು.   ಖಾಲಿಯಿರುವ ವೈದ್ಯರ ಸ್ಥಾನಗಳಿಗೆ ನೇಮಕಾತಿ ಮಾಡಿಕೊಂಡು ಸಾರ್ವಜನಿಕರ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಬೇಕು ಎಂದು ಅಧ್ಯಕ್ಷೆ ಸುಮಂಗಳಮ್ಮ ಗುಬಾಜಿ ಸೂಚಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳ ಆಯ್ಕೆ ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಲೋಪವೆಸಗಲಾಗಿದೆ. ತನಿಖೆ ನಡೆಸಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಸದಸ್ಯರು ಒತ್ತಾಯಿಸಿದರು.

  ನಿಗಮದ ಯೋಜನೆಗಳ ಅನುಷ್ಠಾನ ಕಾರ್ಯಕ್ರಮಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವುದಿಲ್ಲ, ತನಿಖೆ ಕೈಗೊಂಡು ಸಂಬಂಧಪಟ್ಟ ಜಿಲ್ಲಾ ವ್ಯವಸ್ಥಾಪಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಂಜುನಾಥ ನಾಯಕ್ ತಿಳಿಸಿದರು.

ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆ ಮಾಡಿರುವ ಫಲಾನುಭವಿಗಳ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿ ಎಲ್ಲ ಸದಸ್ಯರಿಗೆ ಕಳುಹಿಸಬೇಕು, ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆಯನ್ನು ಕ್ರಮಬದ್ಧವಾಗಿ ಕೈಗೊಳ್ಳಬೇಕು, ಮಂದಗತಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು.

  ಶಾಲಾ ಕೊಠಡಿಗಳ ನಿರ್ಮಾಣ ಸೇರಿದಂತೆ ಎಸ್‌ಡಿಎಂಸಿ ವ್ಯಾಪ್ತಿಯ ಕಾಮಗಾರಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೇಲುಸ್ತುವಾರಿ ಮಾಡಬೇಕು, ವೆಚ್ಚ ವಿವರವನ್ನು ಪಡೆದುಕೊಂಡು ಲೆಕ್ಕ ತಪಾಸಣೆಯನ್ನು ಕಾಲಕಾಲಕ್ಕೆ ನಡೆಸಬೇಕು.  ವಿದ್ಯಾರ್ಥಿನಿಲಯಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದು ಅವರು ಸೂಚಿಸಿದರು.

ವಿವಿಧ ಸ್ಥಾಯಿ ಸಮಿತಿಗಳ ಪದಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ವಿವಿಧ ವಿಷಯಗಳ ಕುರಿತು ಸಭೆಯ ಗಮನ ಸೆಳೆದರು.
ಉಪಾಧ್ಯಕ್ಷೆ ಮಮತಾ ಸುರೇಶ್ ಜಿ.ಪಂ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ ಗುಡಿ, ಉಪ ಕಾರ್ಯದರ್ಶಿಗಳಾದ ನಂದೀಶ, ಮಹೇಶ್ವರಯ್ಯ, ಮುಖ್ಯ ಲೆಕ್ಕಾಧಿಕಾರಿ ಚೆನ್ನಪ್ಪ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.