
ಸಿರುಗುಪ್ಪ: ಬಳ್ಳಾರಿಯ ಅಧಿದೇವತೆ ದುರ್ಗಮ್ಮ ದೇವಿಯ ಸಿಡಿಬಂಡಿ ರಥೋತ್ಸವಕ್ಕೆ ಸಿರುಗುಪ್ಪದ ಗಾಣಿಗರ ಸಮಾಜದಿಂದ ಕಳುಹಿಸಲಾಗುವ ಒಂದು ಜೊತೆ ಎತ್ತುಗಳ ಮೆರವಣಿಗೆಯನ್ನು ಸೋಮವಾರ ಪಟ್ಟಣದಲ್ಲಿ ನಡೆಸಲಾಯಿತು.
ಸಿಡಿಬಂಡಿ ರಥೋತ್ಸವ ಇಂದು ನಡೆಯಲಿದೆ. ಸಿಡಿಬಂಡಿಗೆ ಮೂರು ಜೋಡಿ ಎತ್ತುಗಳನ್ನು ಹೂಡಲಾಗುತ್ತದೆ. ಇದರಲ್ಲಿ ಎರಡು ಜೊತೆ ಬಳ್ಳಾರಿಯ ಗಾಣಿಗರ ಸಮುದಾಯದ್ದಾದರೆ, ಒಂದು ಜೊತೆ ಸಿರುಗುಪ್ಪ ಗಾಣಿಗರ ಸಮಾಜದ್ದಾಗಿರುತ್ತದೆ. ಇದು ಹಿಂದಿನಿಂದಲೂ ನಡೆದು ಬಂದಿರುವ ಪರಂಪರೆ.
ಸಿಡಿಬಂಡಿಗೆ ಒಂದು ತಿಂಗಳಿಗೆ ಮೊದಲೇ ಸಿರುಗುಪ್ಪದ ಗಾಣಿಗ ಸುಮುದಾಯದವರು ಬಾಗಲಕೋಟೆಯಿಂದ ಉತ್ತಮ, ಆರೋಗ್ಯಂಥ ಕಿಲಾರಿ ಎತ್ತುಗಳನ್ನು ತರುತ್ತಾರೆ. ಸಿಡಿಬಂಡಿ ಎಳೆಯಲು ಬೇಕಾದ ಎತ್ತರದ ನಿಲುವಿನೊಂದಿಗೆ ಆಕರ್ಷಕವಾಗಿ ಕಾಣುವ ಜೋಡಿ ಎತ್ತುಗಳನ್ನು ಈಗಾಗಲೇ ₹1.50 ಲಕ್ಷ ನೀಡಿ ಖರೀದಿಸಲಾಗಿದೆ. ಅವುಗಳಿಗೆ ತಾಲೀಮು ನೀಡಲಾಗಿದೆ.
ಸಿಡಿಬಂಡಿ ಒಂದು ದಿನ ಮುಂಚಿತವಾಗಿ ಜೋಡಿ ಎತ್ತುಗಳನ್ನು ಸಿಂಗರಿಸಿ, ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆರಾಧ್ಯಕರ ಮನೆಗಳಲ್ಲಿ ಪೂಜೆ ಮಾಡಿಸಿ, ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಂತರ ಬಳ್ಳಾರಿಗೆ ಲಾರಿ ಮೂಲಕ ಕಳುಹಿಸಲಾಗಿದೆ.
ಜೊಡಿ ಎತ್ತುಗಳು ಬಳ್ಳಾರಿಯ ಕೌಲ್ ಬಜಾರನ ದಿಗ್ಗಿ ಮಾಧವಯ್ಯ ರಸ್ತೆಯಿಂದ ಮೆರವಣಿಗೆ ಮೂಲಕ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಹೊರಡುತ್ತವೆ. 24ರಂದು ಸಿಡಿಬಂಡಿ ಎಳೆಯಲಿವೆ ಎಂದು ಗಾಣಿಗ ಸಮಾಜದ ರಮೇಶ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.