ADVERTISEMENT

ಶೇ. 3ರಿಂದ ಶೇ 7.5ಕ್ಕೆ ಮೀಸಲು ಹೆಚ್ಚಿಸಿ: ಇಲ್ಲವಾದರೆ ರಾಜ್ಯದಾದ್ಯಂತ ಹೋರಾಟ

ಸೆ. 21ರಂದು ಮುಖ್ಯಮಂತ್ರಿ ಬಳಿಗೆ ನಿಯೋಗ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 8:41 IST
Last Updated 7 ಸೆಪ್ಟೆಂಬರ್ 2020, 8:41 IST

ಹೊಸಪೇಟೆ: ‘ಹಿಂದುಳಿದ ವಾಲ್ಮೀಕಿ ನಾಯಕ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 7.5ರಷ್ಟು ಮೀಸಲಾತಿ ಕಲ್ಪಿಸಲು ಸರ್ಕಾರ ಬರುವ ವಿಧಾನಸಭೆಯ ಅಧಿವೇಶನದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಬಿ.ಎಸ್‌.ಜಂಬಯ್ಯ ನಾಯಕ ಎಚ್ಚರಿಕೆ ನೀಡಿದರು.

‘ಸದ್ಯ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 3ರಷ್ಟು ಮೀಸಲಾತಿ ಸೌಲಭ್ಯ ಇದೆ. ಸರ್ಕಾರ ರಚಿಸಿದ ನ್ಯಾ.ನಾಗಮೋಹನ್‌ ದಾಸ್‌ ವರದಿಯಲ್ಲಿ ಶೇ 5ರಷ್ಟು ಮೀಸಲಾತಿಗೆ ಶಿಫಾರಸು ಮಾಡಲಾಗಿದೆ. ವಾಲ್ಮೀಕಿ ಗುರುಪೀಠದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ವಾಲ್ಮೀಕಿ ಸಮುದಾಯಕ್ಕೆ ಶೇ 7.5ರಷ್ಟು ಮೀಸಲಾತಿ ಕಲ್ಪಿಸಲಾಗುವುದು ಎಂದು ಭರವಸೆ ಕೊಟ್ಟಿದ್ದರು. ಈಗ ಸಿ.ಎಂ. ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. ವರದಿ ಸಲ್ಲಿಕೆಯಾದ 24 ಗಂಟೆಯೊಳಗೆ ಹೊಸ ಮೀಸಲಾತಿ ಬಗ್ಗೆ ಆದೇಶ ಹೊರಡಿಸಲಾಗುವುದು ಎಂದೂ ಹೇಳಿದ್ದರು. ಆದರೆ, ಸರ್ಕಾರಕ್ಕೆ ವರದಿ ಸಲ್ಲಿಸಿ ಎರಡು ತಿಂಗಳಾದರೂ ಸಿ.ಎಂ. ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಬೇಸರ ಮೂಡಿಸಿದೆ’ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಇದು ವಾಲ್ಮೀಕಿ ಸಮುದಾಯದ ದಶಕಗಳ ಬೇಡಿಕೆಯಾಗಿದೆ. ಸಾಂವಿಧಾನಿಕ ಹಕ್ಕು ಕೂಡ ಹೌದು. ಸೆ. 21ರಂದು ಸಮಾಜದ ಮುಖಂಡರೂ ಆಗಿರುವ ಆರೋಗ್ಯ ಸಚಿವ ಬಿ. ಶ್ರೀರಾಮುಲು, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮಾಜದ ಶಾಸಕರು, ಸಂಸದರು, ಸಚಿವರು ಹಾಗೂ ಮುಖಂಡರನ್ನು ಒಳಗೊಂಡ ನಿಯೋಗವು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಲಿದೆ. ಅಧಿವೇಶನ ಮುಗಿಯುವುದರೊಳಗೆ ಮೀಸಲಾತಿ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಬೇಕು. ಇಲ್ಲವಾದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು’ ಎಂದು ಹೇಳಿದರು.

ADVERTISEMENT

‘ಭಾನುವಾರ (ಸೆ.6) ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಸಮಾಜದ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರೆಲ್ಲರೂ ಸಿ.ಎಂ. ಅವರನ್ನು ಭೇಟಿ ಮಾಡಿ ಒತ್ತಡ ಹೇರಲು ಒಮ್ಮತದ ತೀರ್ಮಾನ ತೆಗೆದುಕೊಂಡಿದ್ದಾರೆ. ಒಂದುವೇಳೆ ಬೇಡಿಕೆ ಈಡೇರದಿದ್ದರೆ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸುವ ಜವಾಬ್ದಾರಿ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರಿಗೆ ವಹಿಸಲಾಗಿದೆ. ನ್ಯಾಯಯುತವಾದ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಸಮಾಜ ಯಾವುದೇ ರೀತಿಯ ಹೋರಾಟ ನಡೆಸಲು ಸಿದ್ಧವಾಗಿದೆ’ ಎಂದು ತಿಳಿಸಿದರು.

‘ಯಾವುದೇ ಹೋರಾಟ ನಡೆಸದೇ, ರಾಜಕೀಯ ಪಿತೂರಿಯಿಂದ ಮುಂದುವರಿದ ಜನಾಂಗದವರು ಶೇ 10ರಷ್ಟು ಮೀಸಲಾತಿ ಸೌಲಭ್ಯ ಪಡೆದುಕೊಂಡಿದ್ದಾರೆ. 50 ವರ್ಷಗಳಿಂದ ವಾಲ್ಮೀಕಿ ಸಮಾಜದವರು ಮೀಸಲಾತಿ ಹೆಚ್ಚಿಸಲು ಹೋರಾಟ ನಡೆಸುತ್ತಿದ್ದರೂ ಯಾವ ಸರ್ಕಾರವೂ ಸ್ಪಂದಿಸಿಲ್ಲ. ಈಗ ತಾಳ್ಮೆಯ ಕಟ್ಟೆ ಒಡೆದಿದೆ. ಲಂಬಾಣಿ ಸಮಾಜದವರು ಎಸ್ಸಿಯಿಂದ ಎಸ್ಟಿಗೆ ಸೇರಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಒಂದುವೇಳೆ ಹಾಗಾದರೆ ವಾಲ್ಮೀಕಿ ಸಮಾಜದವರಿಗೆ ಅನ್ಯಾಯವಾಗಲಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ವಾಲ್ಮೀಕಿ ಜನಾಂಗದ ಜನಪ್ರತಿನಿಧಿಗಳು ಅದರ ಬಗ್ಗೆ ಚಕಾರ ಎತ್ತದಿರುವುದು ದುರದೃಷ್ಟಕರ’ ಎಂದರು.

ಸಚಿವರಿಗೆ ಅಭಿನಂದನೆ:‘ರಾಜನಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ₹1.27 ಕೋಟಿಯಲ್ಲಿ ತೇರು ನಿರ್ಮಿಸಿಕೊಡುತ್ತೇನೆ ಎಂದು ಅರಣ್ಯ ಸಚಿವ ಆನಂದ್‌ ಸಿಂಗ್‌ ಭರವಸೆ ಕೊಟ್ಟಿದ್ದಾರೆ. ಹೊಸಪೇಟೆ ನಗರದಲ್ಲಿ ತೇರು ನಿರ್ಮಿಸಿ, ಸ್ವತಃ ರಾಜನಹಳ್ಳಿಗೆ ಹೋಗಿ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ. ಅದಕ್ಕಾಗಿ ಸಮಾಜದ ಪರವಾಗಿ ಅವರನ್ನು ಅಭಿನಂದಿಸುತ್ತೇನೆ’ ಎಂದು ತಿಳಿಸಿದರು.

ವಾಲ್ಮೀಕಿ ಸಮಾಜದ ಮುಖಂಡರಾದ ಕಟಗಿ ಜಂಬಣ್ಣ, ಗುಜ್ಜಲ್‌ ನಿಂಗಪ್ಪ, ಬಾಲಾಜಿ, ಸುನೀಲ್‌ ಕುಮಾರ್‌, ಹನುಮಂತ, ಮಂಜು, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ್‌, ತಾಲ್ಲೂಕು ಪಂಚಾಯಿತಿ ಸದಸ್ಯ ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.