ADVERTISEMENT

ಬಳ್ಳಾರಿ | ಆಡಳಿತಸೌಧ ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳಿಸಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2023, 15:52 IST
Last Updated 8 ಆಗಸ್ಟ್ 2023, 15:52 IST
ಕಂಪ್ಲಿಯಲ್ಲಿ ನಿರ್ಮಾಣವಾಗುತ್ತಿರುವ ಆಡಳಿತಸೌಧ ಕಟ್ಟಡ ಕಾಮಗಾರಿ ನೀಲನಕ್ಷೆಯನ್ನು ಜಿಲ್ಲಾಧಿಕಾರಿ ಪ್ರಶಾಂತ್‍ಕುಮಾರ್ ಪರಿಶೀಲಿಸಿದರು
ಕಂಪ್ಲಿಯಲ್ಲಿ ನಿರ್ಮಾಣವಾಗುತ್ತಿರುವ ಆಡಳಿತಸೌಧ ಕಟ್ಟಡ ಕಾಮಗಾರಿ ನೀಲನಕ್ಷೆಯನ್ನು ಜಿಲ್ಲಾಧಿಕಾರಿ ಪ್ರಶಾಂತ್‍ಕುಮಾರ್ ಪರಿಶೀಲಿಸಿದರು   

ಕಂಪ್ಲಿ: ಆಡಳಿತಸೌಧ (ಮಿನಿ ವಿಧಾನಸೌಧ) ಕಟ್ಟಡ ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರ ಗುತ್ತಿಗೆದಾರರಿಗೆ ತಿಳಿಸಿದರು.

ಇಲ್ಲಿಯ ಹೊಸಪೇಟೆ ಬೈಪಾಸ್ ರಸ್ತೆ ಬಳಿ ನಿರ್ಮಾಣವಾಗುತ್ತಿರುವ ಆಡಳಿತಸೌಧ ಕಟ್ಟಡ ಕಾಮಗಾರಿ ಪರಿಶೀಲಿಸಿ, ಅಲ್ಲಲ್ಲಿ ನೆಲಹಾಸು (ಫ್ಲೋರಿಂಗ್) ಸಮತಟ್ಟು ಇಲ್ಲದ ಕಾರಣ ಕೂಡಲೇ ಸರಿಪಡಿಸುವಂತೆ ಸೈಟ್ ಎಂಜನಿಯರ್‌ಗೆ ಸೂಚಿಸಿದರು.

ಕಾಂಪೌಂಡ್ ಮತ್ತು ವಾಹನ ನಿಲುಗಡೆ ಕಟ್ಟಡ ಕಾಮಗಾರಿಗೆ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ಬಳಿಕ ನೂರು ಹಾಸಿಗೆ ಆಸ್ಪತ್ರೆ ಕಾಮಗಾರಿ ವೀಕ್ಷಿಸಿ, ‘ಮಳೆಯಿಂದಾಗಿ ಒಂದು ತಿಂಗಳು ಕಾಮಗಾರಿ ವಿಳಂಬವಾಗಿದೆ. 2024ರ ಸೆಪ್ಟೆಂಬರ್ ಒಳಗೆ ಕಾಮಗಾರಿ ಮುಕ್ತಾಯಗೊಳ್ಳಲಿದೆ’ ಎಂದರು. ಪಟ್ಟಣದ ವಿವಿಧೆಡೆ ಡಿಎಂಎಫ್, ಕೆಕೆಆರ್‌ಡಿಬಿ ಕಾಮಗಾರಿಗಳನ್ನೂ ಪರಿಶೀಲಿಸಿದರು.

ಡಿಎಂಎಫ್ ವಿಶೇಷಾಧಿಕಾರಿ ಪಿ.ಎಸ್. ಮಂಜುನಾಥ, ಡಿಯುಡಿಸಿ ಎಇಇ ಅಭಿಷೇಕ್, ತಹಶೀಲ್ದಾರ್ ಗೌಸಿಯಾಬೇಗಂ, ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ, ಕೆಎಚ್‍ಬಿ ಎಇಇ ಸಿ.ಪಿ. ವಸಂತಕುಮಾರಿ, ಎಇ ತನುಜೇಂದ್ರ, ಗ್ರಾಮ ಲೆಕ್ಕಾಧಿಕಾರಿಗಳಾದ ವಿಜಯಕುಮಾರ್, ವೆಂಕಟೇಶ್, ಲಕ್ಷ್ಮಣನಾಯ್ಕ, ಎಂಜಿನಿಯರ್ ಗೋಪಾಲ್ ಮೇಘನಾ, ಸಹೀದ್ ಹಾಜರಿದ್ದರು.

ಕಂಪ್ಲಿ ಶೈಕ್ಷಣಿಕ ವ್ಯಾಪ್ತಿ ಕುರುಗೋಡಿಗೆ

ಕಂಪ್ಲಿಯಲ್ಲಿ ಬಿಇಒ ಕಚೇರಿ ಆರಂಭಗೊಳ್ಳುವವರೆಗೆ ತಾಲ್ಲೂಕಿನ ಶೈಕ್ಷಣಿಕ ಕಾರ್ಯವ್ಯಾಪ್ತಿಯನ್ನು ಹೊಸಪೇಟೆಯಿಂದ ಕುರುಗೋಡು ಬಿಇಒ ಕಚೇರಿಗೆ ಸೇರ್ಪಡೆಗೊಳಿಸಲು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

‘ರೈತರು ಭತ್ತ ನಾಟಿಗೆ ಮುನ್ನ ಗದ್ದೆ ಹದಗೊಳಿಸಲು ಟ್ರ್ಯಾಕ್ಟರ್‌ಗಳಿಗೆ ಕಬ್ಬಿಣದ ಪಡ್ಲರ್ ವೀಲ್ಸ್ ಅಳವಡಿಸಿಕೊಂಡು ರಾಜ್ಯ ಹೆದ್ದಾರಿ ಮೇಲೆ ಸಾಗುವುದು ಸಾಮಾನ್ಯವಾಗಿದೆ. ಅದರಿಂದ ಕೋಟ್ಯಂತರ ರೂಪಾಯಿ ವೆಚ್ಚದ ಡಾಂಬರು ರಸ್ತೆ ಹಾಳಾಗುತ್ತಿದೆ. ರೈತರು ಇನ್ನಾದರೂ ರಸ್ತೆ ಮೇಲೆ ಸಂಚರಿಸದೆ ಗದ್ದೆ ಬಳಿ ತೆರಳಿ ವೀಲ್ ಅಳವಡಿಸಿಕೊಳ್ಳುವ ಮೂಲಕ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಈ ಕುರಿತು ಜಾಗೃತಿ ಮೂಡಿಸಲು ಗ್ರಾಮಗಳಲ್ಲಿ ಡಂಗುರ ಹಾಕುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.