ADVERTISEMENT

ಬಳ್ಳಾರಿ|ಪಾಲಿಕೆ ಅಧಿಕಾರಿ, ಸಿಬ್ಬಂದಿಗೆ ತರಬೇತಿ ಬೇಕು: ಲೆಕ್ಕ ಪರಿಶೋಧಕರಿಂದ ಸಲಹೆ

ಆರ್. ಹರಿಶಂಕರ್
Published 6 ಜುಲೈ 2025, 5:36 IST
Last Updated 6 ಜುಲೈ 2025, 5:36 IST
ಬಳ್ಳಾರಿ ಮಹಾನಗರ ಪಾಲಿಕೆ
ಬಳ್ಳಾರಿ ಮಹಾನಗರ ಪಾಲಿಕೆ   

ಬಳ್ಳಾರಿ: ‘ಈ ಸಂಸ್ಥೆಯ (ಬಳ್ಳಾರಿ ಮಹಾನಗರ ಪಾಲಿಕೆ) ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಜವಾಬ್ದಾರಿಯುತ ಆಡಳಿತದ ಕುರಿತು ಸೂಕ್ತ ತರಬೇತಿ ನೀಡುವುದು ಅವಶ್ಯಕವಾಗಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳಲು ಸೂಚಿಸಿದೆ’ 

ಇದು 2023–24ನೇ ಸಾಲಿನ ಬಳ್ಳಾರಿ ಮಹಾನಗರ ಪಾಲಿಕೆಯ ಲೆಕ್ಕಪರಿಶೋಧನಾ ಕರಡು ವರದಿಯ ಅಂತಿಮ ಸಾಲುಗಳು. 

ಲೆಕ್ಕ ಪರಿಶೋಧಕರು ಈ ಅಭಿಪ್ರಾಯವನ್ನು ಸುಮ್ಮನೆ ನೀಡಿಲ್ಲ. ಅದಕ್ಕೆ ಕಾರಣಗಳನ್ನೂ ಅವರೇ ನೀಡಿದ್ದಾರೆ. 

ADVERTISEMENT

‘ಪಾಲಿಕೆಯ 2023-24ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಗಮನಿಸಲಾದ ಅನೇಕ ನ್ಯೂನ್ಯತೆಗಳನ್ನು ವಿವರವಾಗಿ ತಿಳಿಸಲಾಗಿದೆ. ಮುಖ್ಯವಾಗಿ ಮಹಾನಗರ ಪಾಲಿಕೆಯಿಂದ ಮಾಡಿರುವ ವೆಚ್ಚಕ್ಕೆ ಸಂಬಂಧಿಸಿದಂತೆ ಕಡತಗಳನ್ನು ಹಾಜರುಪಡಿಸಿಲ್ಲ. ಕೆಟಿಪಿಪಿ ನಿಯಮಗಳನ್ನು ಪಾಲಿಸಿಲ್ಲ. ಪಾಲಿಕೆಯಿಂದ ವಿವಿಧ ಸಂಸ್ಥೆಗಳಿಗೆ ಕೊಟ್ಟಿರುವ ಮುಂಗಡಗಳನ್ನು ಸೂಕ್ತ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಳ್ಳದೆ ನಿರ್ಲಕ್ಷಿಸಲಾಗಿದೆ. ಮಳಿಗೆಗಳನ್ನು ಮರು ಟೆಂಡ‌ರ್ ಮಾಡಿಲ್ಲ. ಇದರಿಂದ ಪಾಲಿಕೆಗೆ ಬರಬಹುದಾಗಿದ್ದ ಆದಾಯ ತಪ್ಪಿದೆ. ನೀರಿನ ತೆರಿಗೆ, ಜಾಹೀರಾತು ಶುಲ್ಕ, ಮಳಿಗೆಗಳ ಬಾಡಿಗೆಯನ್ನು ಸಂಪೂರ್ಣ ವಸೂಲಿ ಮಾಡಿಲ್ಲ. ಎಲ್ಲಾ ಆಸ್ತಿಗಳನ್ನು ಆಸ್ತಿ ತೆರಿಗೆಗೆ ಒಳಪಡಿಸದೆ ಪಾಲಿಕೆಗೆ ಆದಾಯ ನಷ್ಟವಾಗಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಅಪೂರ್ಣವಾಗಿ ಅನುಷ್ಠಾನ ಮಾಡಲಾಗಿದೆ. ಲೆಕ್ಕ ಸಮನ್ವಯಗೊಳಿಸದ ಕಾರಣ ವಾಸ್ತವಿಕ ಲೆಕ್ಕಗಳಿಗೂ, ವಾರ್ಷಿಕ ಲೆಕ್ಕಗಳಿಗೂ ಅಗಾಧವಾದ ವ್ಯತ್ಯಾಸವುಂಟಾಗಿದೆ. ವಾರ್ಷಿಕ ಆಡಳಿತ ವರದಿಯನ್ನು ತಯಾರಿಸಿ ಸಕ್ಷಮ ಪ್ರಾಧಿಕಾರಗಳಿಗೆ ನಿಗದಿತ ಅವಧಿಯಲ್ಲಿ ಸಲ್ಲಿಸದಿರುವುದು, ಸನ್ನದು ಲೆಕ್ಕಪರಿಶೋಧಕರ ಲೆಕ್ಕಪರಿಶೋಧನೆಯನ್ನು ನಿಗದಿತ ಅವಧಿಯಲ್ಲಿ ಕೈಗೊಂಡು ವರದಿಯನ್ನು ಸಕ್ಷಮ ಪ್ರಾಧಿಕಾರಗಳಿಗೆ ಸಲ್ಲಿಸದಿರುವುದು ಕಂಡು ಬಂದಿದೆ. ಸಂಸ್ಥೆಯ ಲೆಕ್ಕ ಪತ್ರ ನಿರ್ವಹಣೆಯಲ್ಲಿ ಅತ್ಯಂತ ಸುಧಾರಣೆ ಕಾಣಬೇಕಾಗಿದೆ’ ಎಂದು ಲೆಕ್ಕಪರಿಶೋಧಕರು ಕಾರಣಗಳನ್ನು ನೀಡಿದ್ದಾರೆ. 

ಲೆಕ್ಕದಲ್ಲಿ ಉಲ್ಲೇಖವಾದ ಇತರ ನ್ಯೂನತೆಗಳು

  • ಒಎಫ್‌ಸಿ ಕೇಬಲ್‌ ಅಳವಡಿಸಿದ ಕಂಪನಿಯಿಂದ ಪಾಲಿಕೆಯು ₹55 ಲಕ್ಷ ಕಡಿಮೆ ವಸೂಲಿ ಮಾಡಿದೆ. 

  • ಪಾಲಿಕೆ ವ್ಯಾಪ್ತಿಯ ಮೊಬೈಲ್‌ ಟವರ್‌ಗಳಿಂದ ಪರವಾನಗಿ ಶುಲ್ಕ ₹15 ಲಕ್ಷ ವಸೂಲಿ ಮಾಡಿಲ್ಲ. 

  • ಜಿಲ್ಲಾ ಖನಿಜ ಪ್ರತಿಷ್ಠಾನ ಅನುದಾನದ ಖರ್ಚು ವೆಚ್ಚಗಳನ್ನು ಲೆಕ್ಕಪರಿಶೋಧನೆಗೆ ಪಾಲಿಕೆ ಕೊಟ್ಟಿಲ್ಲ. 

  • ಉಪಕರಗಳನ್ನು ಸರ್ಕಾರದ ಲೆಕ್ಕ ಶೀರ್ಷಿಕೆಗಳಿಗೆ ಜಮಾ ಮಾಡದೇ ಮಹಾನಗರ ಪಾಲಿಕೆಯ ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಲಾಗಿದ್ದು, ಸರ್ಕಾರಕ್ಕೆ ನಷ್ಟವುಂಟು ಮಾಡಲಾಗಿದೆ. 

  • ಆದಾಯ ತೆರಿಗೆ ಮತ್ತು ಸರಕು, ಸೇವಾ ತೆರಿಗೆ, ಟಿಡಿಎಸ್‌ ಅನ್ನು ನಿಯಮಿತವಾಗಿ ಸರ್ಕಾರಕ್ಕೆ ಸಂದಾಯ ಮಾಡಿಲ್ಲ. 

  • ಏಕಬಿಡ್‌  ಟೆಂಡರ್‌ಗಳನ್ನು ಸ್ವೀಕರಿಸಿ ಕಾಮಗಾರಿಗಳನ್ನು ನಿರ್ವಹಿಸಿರುವುದು, ಕಾಮಗಾರಿ ಅಂದಾಜು ಮೊತ್ತಕ್ಕಿಂತ ಅಧಿಕ ಪಾವತಿ ಮಾಡಿರುವುದು ಕಂಡು ಬಂದಿದೆ. ಕಾಮಗಾರಿ ಮುಕ್ತಾಯಕ್ಕಿಂತಲೂ ಮೊದಲೇ ಮೂರನೇ ವ್ಯಕ್ತಿ ತಪಾಸಣಾ ವರದಿ ಪಡೆದು ಗುತ್ತಿಗೆದಾರರಿಗೆ ಕಾಮಗಾರಿಯ ಮೊತ್ತವನ್ನು ಪಾವತಿಸಲಾಗಿದೆ. ಫಲಪ್ರದವಲ್ಲದ ಕಾಮಗಾರಿಗಳಿಗೆ ದುಡ್ಡು ಸುರಿದಿರುವುದು ಉಲ್ಲೇಖವಾಗಿದೆ.

  • ಬ್ಯಾಂಕ್‌ ಗ್ಯಾರೆಂಟಿ ನವೀಕರಿಸಿಲ್ಲ. 

  • ಮುಂಡ್ರಿಗಿ ಆಶ್ರಯ ಬಡಾವಣೆಯಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆ ಅಡಿ 5616 ಮನೆ ನಿರ್ಮಿಸುವ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. 

  • ಟೆಂಡರ್‌ ಬಿಡ್‌ ಡಾಕ್ಯುಮೆಂಟ್‌ ನಿಬಂಧನೆಗಳನ್ನು ಉಲ್ಲಂಘಿಸಿ ಮಹಾನಗರ ಪಾಲಿಕೆಗೆ 10 ಡೆಸ್ಕ್‌ ಟಾಪ್‌ ಕಂಪ್ಯೂಟರ್‌ಗಳನ್ನು ಖರೀದಿ ಮಾಡಲಾಗಿದೆ.

  • ನೇರ ಪಾವತಿ ಪೌರ ಕಾರ್ಮಿಕರಿಗೆ ನಿಗದಿತ ವೇತನದ ಬದಲಿಗೆ ಹೆಚ್ಚುವರಿ ವೇತನ ಪಾವತಿಸಲಾಗಿದೆ. 

  • ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಕೈಗಾರಿಕೆಗಳ ವಿವರಗಳನ್ನು ಲೆಕ್ಕಪರಿಶೋಧನೆಗೆ ನೀಡಿಲ್ಲ. 

  • ಪಾಲಿಕೆ ವ್ಯಾಪ್ತಿಗೆ ಒಳಪಡುವ ಸಿಎ ನಿವೇಶನ, ಪಾರ್ಕ್‌, ಮೈದಾನದ ವಿವರಗಳನ್ನೂ ಲೆಕ್ಕ ಪರಿಶೋಧಕರಿಗೆ ನೀಡಿಲ್ಲ ಎಂದು ಲೆಕ್ಕ ಪರಿಶೋಧನೆಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.