ADVERTISEMENT

ಬಳ್ಳಾರಿ| ಅಗ್ನಿವೀರ್ ಸೇನಾ ನೇಮಕಾತಿ ರ್‍ಯಾಲಿ: ಸಿದ್ಧತೆಗೆ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 5:23 IST
Last Updated 12 ನವೆಂಬರ್ 2025, 5:23 IST
ಅಗ್ನಿವೀರ್‌ ಸೇನಾ ನೇಮಕಾತಿ ರ್‍ಯಾಲಿ ನಡೆಯಲಿರುವ ಬಳ್ಳಾರಿ ಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ., ಸೇನಾ ನೇಮಕಾತಿ ಅಧಿಕಾರಿ ಮೇಜರ್ ಕಪಿಲ್.ಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್‌ ಝುಬೇರ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಅಗ್ನಿವೀರ್‌ ಸೇನಾ ನೇಮಕಾತಿ ರ್‍ಯಾಲಿ ನಡೆಯಲಿರುವ ಬಳ್ಳಾರಿ ಜಿಲ್ಲಾ ಕ್ರೀಡಾಂಗಣಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ., ಸೇನಾ ನೇಮಕಾತಿ ಅಧಿಕಾರಿ ಮೇಜರ್ ಕಪಿಲ್.ಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್‌ ಝುಬೇರ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಬಳ್ಳಾರಿ: ‘ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನ.13 ರಿಂದ18ರವರೆಗೆ ನಡೆಯುವ ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ ಯಶಸ್ವಿಗೊಳಿಸಲು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಹೇಳಿದರು.

ರ್‍ಯಾಲಿ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಅಗ್ನಿವೀರರ ನೇಮಕಾತಿ ರ್‍ಯಾಲಿ ಜಿಲ್ಲೆಗೆ ಹೆಮ್ಮೆಯ ಸಂಗತಿ. ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘ರ‍್ಯಾಲಿಗೆ ರಾಜ್ಯದ ವಿವಿಧೆಡೆಗಳಿಂದ ಅಭ್ಯರ್ಥಿಗಳು ಬರುತ್ತಿದ್ದಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ಆರಂಭಿಸಲಾಗುವ ಸಹಾಯವಾಣಿ ಕೇಂದ್ರಗಳ ಮೂಲಕ ನೆರವು ನೀಡಬೇಕು. ಅಗತ್ಯವಿದ್ದಲ್ಲಿ ಬಸ್‌ಗಳ ಮೂಲಕ ಕರೆತರಬೇಕು’ ಎಂದು ಸೂಚಿಸಿದರು.

ADVERTISEMENT

‘ನಗರದ ವಾಲ್ಮೀಕಿ ಭವನ, ಡಾ. ಬಾಬು ಜಗನ್ ಜೀವನ್ ರಾಂ ಭವನ, ಜಿಲ್ಲಾ ಕ್ರೀಡಾಂಗಣ, ಸರ್ಕಾರಿ ಅತಿಥಿ ಗೃಹ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯ ರಾತ್ರಿ ತಂಗುದಾಣಗಳಲ್ಲಿ ತಂಗಲು ವಸತಿ ಜೊತೆಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳ ಪ್ರವೇಶ ಪತ್ರ ಪರಿಶೀಲಿಸಿ ವ್ಯವಸ್ಥೆ ಮಾಡಬೇಕು. ಯಾರೂ ನಗರದ ಹೊರವಲಯದಲ್ಲಿ ವಾಸ್ತವ್ಯ ಮಾಡಬಾರದು’ ಎಂದರು.

‘ಪ್ರವೇಶಪತ್ರ ಹಾಜರುಪಡಿಸಿದಲ್ಲಿ ಮಾತ್ರ ಅಭ್ಯರ್ಥಿಗಳಿಗೆ ಜಿಲ್ಲಾ ಕ್ರೀಡಾಂಗಣ‌ ಪ್ರವೇಶ ನೀಡಬೇಕು. ಸುತ್ತಮುತ್ತಲಿನ ಜಿಲ್ಲೆಗಳಿಂದ ದ್ವಿಚಕ್ರ ವಾಹನಗಳಲ್ಲಿ ಬರುವ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಲು ಸೂಚಿಸಬೇಕು. ಬ್ಯಾರೀಕೇಡ್ ವ್ಯವಸ್ಥೆ ಮಾಡಬೇಕು. ಜಿಲ್ಲಾ ಕ್ರೀಡಾಂಗಣದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಿಸಿಟಿವಿ ಕ್ಯಾಮೆರಾ ಆಳವಡಿಕೆ: ‘ನೇಮಕಾತಿ ರ‍್ಯಾಲಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಜಿಲ್ಲಾ ಕ್ರೀಡಾಂಗಣ, ವಸತಿ ನಿಲಯ, ಒಳ– ಹೊರ ಪ್ರವೇಶ ಸೇರಿದಂತೆ ಅಗತ್ಯವಿರುವ ಕಡೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.

‘ಕ್ರೀಡಾಂಗಣ ಮತ್ತು ವಸತಿ ನಿಲಯಗಳಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ಪೌರಕಾರ್ಮಿಕರನ್ನು ನಿಯೋಜಿಸಬೇಕು’ ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

‘ಜಿಲ್ಲಾ ಕ್ರೀಡಾಂಗಣದ ಬಳಿ ಅಂಬುಲೆನ್ಸ್, ಅಗ್ನಿಶಾಮಕ ವಾಹನ, ಆರೋಗ್ಯ ಸಮಸ್ಯೆಗಳಿಗೆ ನುರಿತ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು’ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.

ನಿರಂತರ ವಿದ್ಯುತ್ ವ್ಯವಸ್ಥೆ, ವಿದ್ಯುತ್ ದೀಪ ಮತ್ತು ಜನರೇಟರ್ ವ್ಯವಸ್ಥೆ, ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್ ಇಂಟರ್‌ನೆಟ್ ಜೊತೆಗೆ ವೈಫೈ ಮತ್ತು ಎಲ್‌ಎಎನ್ ಸಂಪರ್ಕ, ಟೆಕ್ನಿಕಲ್ ಸಿಬ್ಬಂದಿ ನಿಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸೇನಾ ನೇಮಕಾತಿ ಅಧಿಕಾರಿ ಮೇಜರ್ ಕಪಿಲ್.ಕೆ ಮಾತನಾಡಿ, ‘ರ‍್ಯಾಲಿಯು ಬೆಳಿಗ್ಗೆ 5ರಿಂದಲೇ ಆರಂಭವಾಗಲಿದ್ದು, ಓಟ ಸೇರಿದಂತೆ ದೈಹಿಕ ಪರೀಕ್ಷೆ ಮತ್ತು  ವೈದ್ಯಕೀಯ ಪರೀಕ್ಷೆ ಒಳಗೊಂಡು ಸಂಜೆ 6 ಗಂಟೆಯವರೆಗೆ ನಡೆಯುತ್ತದೆ’ ಎಂದರು.

ಸ್ಥಳ ಪರಿಶೀಲನೆ 

ಅಗ್ನಿವೀರ್ ಸೇನಾ ನೇಮಕಾತಿ ರ‍್ಯಾಲಿ ಪ್ರಕ್ರಿಯೆ ಸಿದ್ಧತೆ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಅವರು ಮಂಗಳವಾರ ಜಿಲ್ಲಾ ಕ್ರೀಡಾಂಗಣ ವಾಲ್ಮೀಕಿ ಭವನಕ್ಕೆ ಭೇಟಿ ನೀಡಿದರು. ಬಳಿಕ ಅಗ್ನಿವೀರ ಸೇನಾ ನೇಮಕಾತಿ ರ‍್ಯಾಲಿಯ ಪ್ರಕ್ರಿಯೆ ಬಗ್ಗೆ ಸೇನಾ ಅಧಿಕಾರಿ ಆರ್‌ಒ ಮೇಜರ್ ಕಪಿಲ್.ಕೆ ಸೇರಿದಂತೆ ಇನ್ನಿತರ ಸೇನಾ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.