ADVERTISEMENT

ಸಿರುಗುಪ್ಪ: ಕೈಕೊಟ್ಟ ಕಬ್ಬು, ಕೈಹಿಡಿದ ಸಮಗ್ರ ಕೃಷಿ

ಶಾನವಾಸಪುರ ರೈತ ಶಂಭುಲಿಂಗನಗೌಡ ಅವರ ಪರಿಶ್ರಮ

ಎಂ.ಬಸವರಾಜಯ್ಯ
Published 24 ಡಿಸೆಂಬರ್ 2019, 6:27 IST
Last Updated 24 ಡಿಸೆಂಬರ್ 2019, 6:27 IST
ಹಿಪ್ಪುನೇರಳೆ ಬೆಳೆಯೊಂದಿಗೆ ಶಂಭುಲಿಂಗನಗೌಡ
ಹಿಪ್ಪುನೇರಳೆ ಬೆಳೆಯೊಂದಿಗೆ ಶಂಭುಲಿಂಗನಗೌಡ   

ಸಿರುಗುಪ್ಪ: ‘ಮೊದಲು ಈ ಜಮೀನಿನಲ್ಲಿ ಕಬ್ಬು ಬೆಳೆಯುತ್ತಿದ್ದೆ. ಸಕ್ಕರ ಕಾರ್ಖಾನೆ ಮುಚ್ಚಿ ನಷ್ಟವಾದ್ದರಿಂದ ಪರ್ಯಾಯವಾಗಿ ತೋಟಗಾರಿಕೆಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲ ಬಂತು’ ಎಂದು ಗತಕಾಲಕ್ಕೆ ಹೊರಳಿಕೊಂಡರು ತಾಲ್ಲೂಕಿನ ಶಾನವಾಸಪುರ ರೈತ ಶಂಭುಲಿಂಗನಗೌಡರು.

‘ಮೊದಲು ಬಾಗಲಕೋಟೆಯ ತೋಟಗಾರಿಕೆಯ ವಿಶ್ವ ವಿದ್ಯಾಲಯದಿಂದ ನುಗ್ಗೆಯ ಭಾಗ್ಯ ತಳಿಯ ಬೀಜವನ್ನು ಖರೀದಿಸಿ ತಂದೆ. ಕೊಟ್ಟಿಗೆ ಗೊಬ್ಬರ ಮತ್ತು ಜೀವಾಮೃತ ನೀಡಿ ಬೀಜ ಹೂಳಿದೆ, ಬೆಳೆದ ನುಗ್ಗೆ ಗಿಡಗಳಿಗೆ ಸಾವಯದಲ್ಲಿ ಅಗ್ನಿಅಸ್ರ್ತ ಮತ್ತು ಬ್ರಹ್ಮಾಸ್ರ್ತ ಔಷಧಗಳನ್ನು ಸಿಂಪಡಿಸಿದೆ. 8 ತಿಂಗಳಿಗೆ ನುಗ್ಗೆಕಾಯಿ ಬರಲಾರಂಭಿಸಿ ಒಂದು ಸಲಕ್ಕೆ ₹60 ಸಾವಿರದಿಂದ ₹80 ಸಾವಿರದವರೆಗೆ ಲಾಭಗಳಿಸಿದ್ದೇನೆ’ ಎಂದು ನಕ್ಕರು.

ಅವರು ಮತ್ತು ಅವರ ಪತ್ನಿ ಕವಿತಾ ಎಸ್‌ಎಸ್‌ಎಲ್‌ಸಿ ವರೆಗಷ್ಟೇ ಓದಿದ್ದಾರೆ. ಮೊದಲು ನುಗ್ಗೆಯಿಂದ ಕಂಡ ಯಶಸ್ಸು ನಂತರ ದಾಳಿಂಬೆ ಹಾಗೂ ರೇಷ್ಮೆ ಕೃಷಿಯ ಕಡೆಗೂ ಅವರನ್ನು ಕರೆದೊಯ್ದಿತ್ತು.

ADVERTISEMENT

‘1,500 ದಾಳಿಂಬೆ ಸಸಿಗಳನ್ನು ಕುಷ್ಟಗಿಯಲ್ಲಿ ರೈತರಿಂದ ಖರೀದಿಸಿ ತಂದು ನಾಟಿ ಮಾಡಿದೆ, 20 ತಿಂಗಳ ನಂತರ ಒಂದು ಬೆಳೆ ಬಂದಿದೆ. ದಲ್ಲಾಳಿಗಳನ್ನು ನೆಚ್ಚಿಕೊಳ್ಳದೆ ಬೆಳೆಯನ್ನು ನಾವೇ ಮಾರುಕಟ್ಟೆಗೆ ಒಯ್ದು ಮಾರಿದ್ದರಿಂದ ಕೃಷಿ ವೆಚ್ಚ ಹೋಗಿ ₹1 ಲಕ್ಷ ಲಾಭ ದೊರಕಿತು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ವರ್ಷದ ಹಿಂದೆ ಚೆಳ್ಳಕೆರೆಯಿಂದ ಪ್ರತಿ ಸಸಿಗೆ ₹2ರಂತೆ 2,500 ಸಾವಿರ ಸಸಿ ತಂದು ಅವರು ಹಿಪ್ಪುನೇರಳೆ ರೇಷ್ಮೆ ಕೃಷಿ ಆರಂಭಿಸಿದರು. ರಾಮಸಾಗರದಿಂದ ನೂರು ಮೊಟ್ಟೆಗಳನ್ನು ತಂದು ಸಾಕಾಣಿಕೆ ಮಾಡಿ ಒಂದು ಸಲಕ್ಕೆ 70 ಕೆಜಿ ರೇಷ್ಮೆ ಉತ್ಪಾದನೆಯಾಯಿತು. ರಾಮನಗರ ರೇಷ್ಮೆ ಮಾರುಕಟ್ಟೆಗೆ ಕೊಂಡೊಯ್ದು ಪ್ರತಿ ಕೆ.ಜಿಗೆ ₹400 ರಂತೆ ಮಾರಾಟ ಮಾಡಿದರು. ಎರಡು ಬಾರಿ ಮಾರಾಟದಿಂದ ಅವರಿಗೆ ₹50 ಸಾವಿರ ಲಾಭ ಬಂದಿದೆ. ಅವರು ತಮ್ಮ 7 ಎಕರೆ ಜಮೀನಿನ ಪೈಕಿ 5 ಎಕರೆಯಲ್ಲಿ ನುಗ್ಗೆ ಹಾಗೂ ದಾಳಿಂಬೆ ಮತ್ತು 2 ಎಕರೆಯಲ್ಲಿ ರೇಷ್ಮೆ ಬೆಳೆದಿದ್ದಾರೆ.

ರಾಜ್ಯದ ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಪ್ರತಿ ವರ್ಷ ನಡೆಯುವ ಕೃಷಿ ಮೇಳಗಳಲ್ಲಿ ಪಾಲ್ಗೊಂಡು ತೋಟಗಾರಿಕೆ ಕೃಷಿಯ ಬಗ್ಗೆ ಮಾಹಿತಿ ಮತ್ತು ತರಬೇತಿ ಪಡೆದು ಅದರತ್ತ ಒಲವು ಬೆಳೆಸಿಕೊಂಡ ಗೌಡರು, ಕೊಳವೆಬಾವಿಗಳಿಂದ ಹನಿ ನೀರಾವರಿ ಪದ್ಧತಿಯಲ್ಲಿ ಸಾವಯವ ಕೃಷಿಯಲ್ಲಿ ಮೂರು ಬೆಳೆಗಳನ್ನು ಬೆಳೆಯುತ್ತಿರುವುದು ವಿಶೇಷ.

ತೋಟಗಾರಿಕೆ ಅಧಿಕಾರಿ ಮಲ್ಲಿಕಾರ್ಜುನ ಮತ್ತು ಸಿರುಗುಪ್ಪ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಬಸವಣ್ಣೆಪ್ಪ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದರು. ಸಂಪರ್ಕಕ್ಕೆ:9008661814

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.