ADVERTISEMENT

ಅಪಘಾತ: ಮದ್ಯದ ಮಹಿಮೆಯೂ ಕಾರಣ

ಗೂಡಂಗಡಿಗಳಲ್ಲಿ ಸಿಗುತ್ತಿದೆ ಮದ್ಯ * ನಿಯಮಿತ ತಪಾಸಣೆಗೆ ನಾಗರಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 31 ಮೇ 2025, 5:18 IST
Last Updated 31 ಮೇ 2025, 5:18 IST
ಅದಿರು ಲಾರಿ ಚಾಲಕರನ್ನು ಅಧಿಕಾರಿಗಳು ತಪಾಸಣೆ ಮಾಡಿದರು
ಅದಿರು ಲಾರಿ ಚಾಲಕರನ್ನು ಅಧಿಕಾರಿಗಳು ತಪಾಸಣೆ ಮಾಡಿದರು   

ಸಂಡೂರು:  ‘ಅದಿರು ತುಂಬಿದ ಲಾರಿಗಳನ್ನು ಓಡಿಸಿಕೊಂಡು ರಾಕ್ಷಸರು ಬಂದಂಗೆ ಬರ್ತಾರೆ ಲಾರಿ ಡ್ರೈವರ್‌ಗಳು... ನಾವು ನೋಡಿದ್ದೀವಿ...’ ಇದು ತೋರಣಗಲ್ಲು ಡಿವೈಎಸ್‌ಪಿ ಪ್ರಸಾದ್‌ ಗೋಖಲೆ ಅವರು ಇತ್ತೀಚೆಗೆ ನಡೆದ ವಿವಿಧ ಇಲಾಖೆಗಳು, ಸಾರ್ವಜನಿಕರ ಸಭೆಯಲ್ಲಿ ಆಡಿದ ಮಾತುಗಳು.

ಲಾರಿ ಚಾಲಕರನ್ನು ಆವರಿಸುವ ಈ ರಾಕ್ಷಸತ್ವಕ್ಕೆ ಮದ್ಯದ ಅಮಲು ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ. ಇದೇ ಕಾರಣಕ್ಕೆ ಸಂಡೂರಿನಲ್ಲಿ ಹೆಚ್ಚಿನ ಅಪಘಾತಗಳು ನಡೆಯುತ್ತಿವೆ. ಮಾರ್ಗ ಮಧ್ಯದ ಗೂಡಂಗಡಿಗಳಲ್ಲಿ ಸಿಗುತ್ತಿರುವ ಮದ್ಯ ಸೇವಿಸುತ್ತಿರುವ ಚಾಲಕರು ಪರಿಜ್ಞಾನವೇ ಇಲ್ಲದೇ ಲಾರಿ ಚಲಾಯಿಸುತ್ತಿರುವ ದೂರುಗಳಿವೆ.

ಗಣಿ ಪ್ರದೇಶದ ಗ್ರಾಮಗಳಲ್ಲಿನ ಗೂಡಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಲಾರಿ ಚಾಲಕರು ಇಲ್ಲಿಂದಲೇ ಹೆಚ್ಚಾಗಿ ಮದ್ಯ ಖರೀದಿಸಿ ಕುಡಿಯುತ್ತಿದ್ದಾರೆ ಎಂಬ ಊಹೆ ಇದೆ. ಅಧಿಕಾರಿಗಳು ಈ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಒತ್ತಾಯ ಜನರಿಂದ ಕೇಳಿ ಬಂದಿದೆ.

ADVERTISEMENT

ಪೋಲೀಸರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಗಣಿ ಇಲಾಖೆ ಸಿಬ್ಬಂದಿ ಅದಿರು ಲಾರಿಗಳ ಚಾಲಕರನ್ನು ನಿಯಮಿತವಾಗಿ ತಪಾಸಣೆ ಮಾಡಬೇಕು. ಇದು ಆಗುತ್ತಿಲ್ಲ ಎಂಬ ದೂರು ಇದೆ. 

ಸಂಡೂರಿನಲ್ಲಿ ಸುಮಾರು 6 ಸಾವಿರ ಲಾರಿಗಳಿವೆ. ನಿತ್ಯ 100 ರಿಂದ 200 ಲಾರಿಗಳ ಚಾಲಕರಿಗೆ ಡ್ರಿಂಕ್ ಅಂಡ್ ಡ್ರೈವ್‌ ತಪಾಸಣೆ ನಡೆಸಿ, ದಂಡ ವಿಧಿಸಿದರೆ ಚಾಲಕರಿಗೆ ಎಚ್ಚರಿಕೆ ನೀಡದಂತಾಗುತ್ತದೆ. ಗಣಿ ಪ್ರದೇಶಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು, ಅದಿರು ಸಾಗಿಸುವ ಮಾರ್ಗಗಳಲ್ಲಿ ಸಾಮಾನ್ಯ ಜನರ ಜೀವ ಸಂರಕ್ಷಣೆ ದೃಷ್ಠಿಯಿಂದ ಜಿಲ್ಲಾಡಳಿತವು ಸಂಡೂರಿನಲ್ಲಿ ಉಪ ಸಾರಿಗೆ ಕಚೇರಿ, ಉಪ ಸಂಚಾರ ಪೊಲೀಸ್ ಠಾಣೆಯನ್ನು ಶೀಘ್ರವಾಗಿ ಸ್ಥಾಪಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ. 

ತಾಲ್ಲೂಕಿನ ಬನ್ನಿಹಟ್ಟಿ, ಬಂಡ್ರಿ ಮತ್ತು ಮೆಟ್ರಿಕಿ ಗ್ರಾಮಗಳ ವ್ಯಾಪ್ತಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಸಂಯುಕ್ತ ಖನಿಜ ತನಿಖಾ ಠಾಣೆಗಳಲ್ಲಿ ಅದಿರು ಸಾಗಾಣಿಕೆಯ ಲಾರಿಗಳ ದಾಖಲೆಗಳ ತಪಾಸಣೆಯನ್ನು ನಿರಂತರವಾಗಿ ಮಾಡುತ್ತಿದೆ. ಗಣಿ ಪ್ರದೇಶಗಳಲ್ಲಿ ಗಣಿ ಕಂಪನಿಯ ಅಧಿಕಾರಿಗಳು, ಅರಣ್ಯ ಇಲಾಖೆಯವರು ಡ್ರಿಂಕ್ ಅಂಡ್ ಡ್ರೈವ್‌ ಬಗ್ಗೆ ತಪಾಸಣೆ ನಡೆಸುತ್ತಿದ್ದಾರೆ. ಇದೊಂದು ಸಮಾಧಾಕರ ವಿಷಯವಾದರೂ, ಮುಂದೆ ಸಾಗಿದಂತೆ ಚಾಲಕರು ಮದ್ಯದ ಖರೀದಿಸಿ ಕುಡಿಯುತ್ತಿರುವ ಗುಮಾನಿ ಇದೆ. 

‘ಸಂಡೂರಿನ ಗಣಿ ಪ್ರದೇಶಗಳಲ್ಲಿ ಸಂಚರಿಸುವ ಅದಿರು ಲಾರಿ ಚಾಲಕರಿಗೆ ಅರಣ್ಯ ಇಲಾಖೆಯಿಂದ ಕಡ್ಡಾಯವಾಗಿ ಡ್ರಿಂಕ್ ಅಂಡ್ ಡ್ರೈವ್‌ ತಪಾಸಣೆಯನ್ನು ನಿರಂತರವಾಗಿ ನಡೆಸಲಾಗುತ್ತಿದ್ದು, ಅಪಘಾತಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಲಾಗುತ್ತಿದೆ’ ಎಂದು ವಲಯ ಅರಣ್ಯ ಸಂಕ್ಷಣಾಧಿಕಾರಿ ಸೈಯದ್ ದಾದ ಖಲಂದರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.