ADVERTISEMENT

ಲಂಚ ಆರೋಪ: ಕರ್ತವ್ಯದಿಂದ ತಹಶೀಲ್ದಾರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 7:32 IST
Last Updated 6 ಸೆಪ್ಟೆಂಬರ್ 2020, 7:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಹೂವಿನಹಡಗಲಿ: ಮರಳು ಸಾಗಣೆದಾರರಿಗೆ ಲಂಚಕ್ಕಾಗಿ ಬೇಡಿಕೆ ಇಟ್ಟ ಆರೋಪಕ್ಕೆ ಗುರಿಯಾಗಿದ್ದ ಇಲ್ಲಿನ ತಹಶೀಲ್ದಾರ್ ಕೆ.ವಿಜಯಕುಮಾರ್ ಅವರನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.

‘ಅಕ್ರಮ ಮರಳು ದಂಧೆಕೋರರ ಬಳಿ ತಹಶೀಲ್ದಾರರು ವ್ಯವಹಾರ ಕುದರಿಸಿಕೊಂಡಿದ್ದಲ್ಲದೇ ಅಧಿಕೃತ ಪರವಾನಗಿ ಹೊಂದಿದ ಮರಳು ಸಾಗಣೆದಾರರಿಗೂ ಲಂಚದ ಬೇಡಿಕೆ ಇರಿಸಿದ್ದಾರೆ. ನಿಯಮಾನುಸಾರ ಮರಳು ಸಾಗಣೆ ಮಾಡುವವರಿಗೆ ತಹಶೀಲ್ದಾರ್ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದ್ದ ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ, ವಾರ, ತಿಂಗಳ ಲೆಕ್ಕದಲ್ಲಿ ತಹಶೀಲ್ದಾರ್ ಲಂಚ ಕೇಳಿರುವ ಆಡಿಯೋ ಸಂಭಾಷಣೆ ಸಮೇತ ಕಂದಾಯ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಶನಿವಾರ ದೂರು ನೀಡಿದ್ದರು.

‘ತಹಶೀಲ್ದಾರ್ ಮೇಲಿನ ಆಪಾದನೆಗಳು ಮೇಲ್ನೋಟಕ್ಕೆ ನೈಜ ಎಂದು ಕಂಡು ಬಂದಿರುವುದರಿಂದ ವಿಜಯಕುಮಾರ್ ಅವರನ್ನು ತಕ್ಷಣದಿಂದ ತಹಶೀಲ್ದಾರ್ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಸದರಿ ಹುದ್ದೆಗೆ ವಿಶ್ವಜಿತ್ ಮೆಹತಾ ಅವರನ್ನು ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.