ADVERTISEMENT

ಬಳ್ಳಾರಿ: ಶಿಶುಗಳಿಗೆ ವರವಾದ ‘ಅಮೃತಧಾರೆ’

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 5:32 IST
Last Updated 13 ನವೆಂಬರ್ 2025, 5:32 IST
<div class="paragraphs"><p>ಬಳ್ಳಾರಿಯ ವಿಮ್ಸ್‌ನಲ್ಲಿರುವ ಅಮೃತಧಾರೆ ಕೇಂದ್ರ</p></div>

ಬಳ್ಳಾರಿಯ ವಿಮ್ಸ್‌ನಲ್ಲಿರುವ ಅಮೃತಧಾರೆ ಕೇಂದ್ರ

   

ಬಳ್ಳಾರಿ: ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಕೇಂದ್ರದ (ಬಿಎಂಸಿ–ಆರ್‌ಸಿ, ವಿಮ್ಸ್‌) ‘ಅಮೃತಧಾರೆ’ ಕಾರ್ಯಕ್ರಮವು ಶುರುವಾದ ಕೆಲವೇ ತಿಂಗಳಲ್ಲಿ ಭರವಸೆ ಮೂಡಿಸಿದ್ದು, ತಾಯಿಯ ಎದೆಹಾಲು ವಂಚಿತ ನೂರಾರು ಮಕ್ಕಳಿಗೆ ವರದಾನವಾಗಿದೆ.

ವಿಮ್ಸ್‌ ನಿರ್ದೇಶಕ ಡಾ. ಗಂಗಾಧರ ಗೌಡ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ವಿಶ್ವನಾಥ್‌, ಮಕ್ಕಳ ತಜ್ಞ ಡಾ. ದುರ್ಗಪ್ಪ ಅವರ ಪ್ರಯತ್ನದ ಫಲವಾಗಿ 2025ರ ಜುಲೈನಲ್ಲಿ ಅಮೃತಧಾರೆ ಯೋಜನೆಯ ಅಡಿಯಲ್ಲಿ ವಿಮ್ಸ್‌ನಲ್ಲಿ ತಾಯಿ ಹಾಲು ಘಟಕ ಆರಂಭವಾಗಿತ್ತು. 

ADVERTISEMENT

ಆಗಸ್ಟ್‌ 15ರಿಂದ ತಾಯಂದಿರಿಂದ ಹಾಲು ಸಂಗ್ರಹ ಆರಂಭವಾಗಿತ್ತು. ಅಂದಿನಿಂದ ಈವರೆಗೆ 150ಕ್ಕೂ ಅಧಿಕ ತಾಯಂದಿರಿಂದ 57 ಲೀಟರ್‌ಗೂ ಅಧಿಕ ಹಾಲು ಪಡೆಯಲಾಗಿದೆ. ಅಲ್ಲಿ ಸಂಗ್ರಹಿಸಲಾದ ಹಾಲನ್ನು ಸಂಸ್ಕರಿಸಿ 122 ಶಿಶುಗಳಿಗೆ ನೀಡಲಾಗಿದೆ. ಒಟ್ಟು 32.73 ಲೀಟರ್‌ ಹಾಲುಗಳನ್ನು ಅಗತ್ಯವಿರುವ ಮಕ್ಕಳಿಗೆ ನೀಡಲಾಗಿದೆ.

‘ವಿಮ್ಸ್‌ನಲ್ಲಿ ಅವಧಿ ಪೂರ್ವ ಜನಿಸಿದ, ಕಡಿಮೆ ತೂಕವಿರುವ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ, ತಾಯಿಯನ್ನು ಕಳೆದುಕೊಂಡ ಶಿಶುಗಳಿಗೆ ಹೆಚ್ಚಿನ ಅನುಕೂಲವಾಗಿದೆ’ ಎಂದು ವೈದ್ಯರು ಹೇಳಿದ್ದಾರೆ.

ಹಾಲು ಸಂಗ್ರಹ ಹೇಗೆ?: ‘ವಿಮ್ಸ್‌ನಲ್ಲಿ ಹೆರಿಗೆಗೆ ಬಂದ ಆರೋಗ್ಯವಂತ ಬಾಣಂತಿಯರಿಂದ ಮಾತ್ರವೇ ಹಾಲು ಸಂಗ್ರಹ ಮಾಡಲಾಗುತ್ತದೆ. ಆಸ್ಪತ್ರೆಯ ಆಪ್ತ ಸಮಾಲೋಚಕರು ಬಾಣಂತಿಯರೊಂದಿಗೆ ಚರ್ಚಿಸಿ, ಅರಿವು ಮೂಡಿಸಿ ಹಾಲು ನೀಡಲು ಪ್ರೇರಣೆ ನೀಡುತ್ತಾರೆ. ಹಾಲು ನೀಡಲು ನಿರ್ಧರಿಸಿದ ತಾಯಂದಿರನ್ನು ಮತ್ತೊಮ್ಮೆ ಪರೀಕ್ಷೆ ಮಾಡಿಯೇ ಹಾಲು ಸಂಗ್ರಹ ಮಾಡಲಾಗುತ್ತದೆ’ ಎಂದು ಘಟಕದ ನೋಡಲ್‌ ಅಧಿಕಾರಿ ಡಾ. ದುರ್ಗಪ್ಪ ಹೇಳಿದರು.  

ವಿತರಣೆ ಹೇಗೆ?: ‘ಸಂಗ್ರಹಿಸಿದ ಹಾಲನ್ನು ಪಾಶ್ಚರೀಕರಿಸಿ, ಸಂಸ್ಕರಣೆ ಮಾಡಲಾಗುತ್ತದೆ. ವಿಮ್ಸ್‌ನ ಮಕ್ಕಳ ಐಸಿಯು ಘಟಕದಿಂದ ಬರುವ ಬೇಡಿಕೆಗೆ ಅನುಗುಣವಾಗಿ ಹಾಲು ಪೂರೈಕೆ ಮಾಡಲಾಗುತ್ತದೆ. ಪೂರೈಕೆಗೂ ಮೊದಲು ಹಾಲನ್ನು ಮತ್ತೊಂದು ಹಂತದ ಪರೀಕ್ಷೆಗೆ ಒಳಪಡಿಸಲಾಗಿರುತ್ತದೆ’ ಎಂದು ಡಾ. ವಿಶ್ವನಾಥ್‌ ಹೇಳಿದರು.

‘ಭವಿಷ್ಯದಲ್ಲಿ ಹೊರಗಿನ ತಾಯಂದಿರಿಂದ ಹಾಲು ಸಂಗ್ರಹಿಸುವ, ಹೊರಗಿನ ಮಕ್ಕಳಿಗೂ ಹಾಲು ಒದಗಿಸುವ ಚಿಂತನೆ ಇದೆ’ ಎಂದು ಅವರು ತಿಳಿಸಿದರು.

ಸದ್ಯ ವಿಮ್ಸ್‌ನಲ್ಲಿ ಸಂಸ್ಕರಿಸಿದ 13 ಲೀಟರ್‌, ಇನ್ನಷ್ಟೇ ಸಂಸ್ಕರಿಸಬೇಕಾದ 5 ಲೀಟರ್‌ ತಾಯಿಯ ಎದೆಹಾಲನ್ನು ದಾಸ್ತಾನು ಇಟ್ಟುಕೊಳ್ಳಲಾಗಿದೆ. ತಾಯಿಯರಿಂದ ಹಾಲು ಸಂಗ್ರಹಿಸಲು ಘಟಕದಲ್ಲಿ 6 ಯಂತ್ರಗಳಿವೆ. ಇದರಲ್ಲಿ ಮೂರನ್ನು ಮಾತ್ರವೇ ಬಳಸಲಾಗುತ್ತಿದೆ. ಇನ್ನೂ ಮೂರು ಸುಸ್ಥಿತಿಯಲ್ಲಿದ್ದು, ಅಗತ್ಯ ಸಂದರ್ಭದಲ್ಲಿ ಬಳಸಲಾಗುತ್ತದೆ.

ಅಮೃತಧಾರೆ ಘಟಕ ಅತ್ಯಂತ ಯಶಸ್ವಿಯಾಗಿದೆ. ಇದರ ಹಿಂದೆ ಸಮರ್ಪಿತ ತಂಡವೇ ಕೆಲಸ ಮಾಡುತ್ತಿದೆ. ಈಗ ತಾಯಂದಿರೇ ಸ್ವಯಂ ಪ್ರೇರಣೆಯಿಂದ ಬಂದು ಹಾಲು ಕೊಡುತ್ತಿದ್ದಾರೆ
ಡಾ. ಗಂಗಾಧರ ಗೌಡ, ವಿಮ್ಸ್‌ ನಿರ್ದೇಶಕ

ಕಲ್ಯಾಣ ಕರ್ನಾಟಕದ ಏಕೈಕ ಕೇಂದ್ರ

ಬಳ್ಳಾರಿಯ ವಿಮ್ಸ್‌ನಲ್ಲಿರುವ ಈ ಘಟಕವು ಕಲ್ಯಾಣ ಕರ್ನಾಟಕದಲ್ಲಿರುವ ಏಕೈಕ ಕೇಂದ್ರವಾಗಿದೆ. ಇದು ಹೊರತುಪಡಿಸಿದರೆ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ ಹುಬ್ಬಳ್ಳಿಯ ಸರ್ಕಾರಿ ವೈದ್ಯಕೀಯ ಕಾಲೇಜು ಶಿವಮೊಗ್ಗ ವೈದ್ಯಕೀಯ ಕಾಲೇಜಿನಲ್ಲಿ ಹಾಲಿನ ಘಟಕಗಳಿವೆ. ಈ ಘಟಕಕ್ಕಾಗಿ ಈ ಹಿಂದಿನ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ₹50 ಲಕ್ಷ ಅನುದಾನ ಕೊಟ್ಟಿದ್ದರು. ವಿಮ್ಸ್‌ನ ಆಡಳಿತಾಧಿಕಾರಿಯಾಗಿದ್ದ ಎಸ್‌.ಎನ್‌. ರುದ್ರೇಶ್ ₹25 ಲಕ್ಷ ಅನುದಾನ ಒದಗಿಸಿದ್ದರು. ಒಟ್ಟು ₹75 ಲಕ್ಷ ಅನುದಾನದಲ್ಲಿ ಆರಂಭವಾದ ಈ ಘಟಕ ಈಗ ಶಿಶುಗಳ ಪಾಲಿನ ಸಂಜೀವಿನಿಯಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.