ADVERTISEMENT

ವಿಜಯನಗರ | ಬಿಜೆಪಿಯಲ್ಲಿ ಆನಂದ್‌ ಸಿಂಗ್‌ 2ನೇ ಇನ್ನಿಂಗ್ಸ್‌ ಶುರು

ಎರಡು ಸಲ ‘ಕಮಲ’ ಚಿಹ್ನೆಯಡಿ ಶಾಸಕರಾದರೂ ಪಕ್ಷ ತೊರೆದಿದ್ದ ಸಿಂಗ್‌

ಶಶಿಕಾಂತ್ ಎಸ್. ಶೆಂಬೆಳ್ಳಿ
Published 14 ನವೆಂಬರ್ 2019, 19:45 IST
Last Updated 14 ನವೆಂಬರ್ 2019, 19:45 IST

ಹೊಸಪೇಟೆ: ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು, ಆ ಪಕ್ಷಕ್ಕೆ ಸೇರುವುದರೊಂದಿಗೆ ಆನಂದ್‌ ಸಿಂಗ್‌ ಗುರುವಾರ ಬಿಜೆಪಿಯಲ್ಲಿ ಅಧಿಕೃತವಾಗಿ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

2008, 2013ರ ಚುನಾವಣೆಯಲ್ಲಿ ಸತತ ಎರಡು ಸಲ ಬಿಜೆಪಿಯಿಂದ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಿ ಆನಂದ್‌ ಸಿಂಗ್‌ ಗೆಲುವು ಕಂಡರು. ಎರಡೂ ಅವಧಿಯಲ್ಲಿ ಕಮಲಾಪುರ ಪಟ್ಟಣ ಪಂಚಾಯಿತಿ, ಹೊಸಪೇಟೆ ನಗರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ಅದನ್ನು ವ್ಯವಸ್ಥಿತವಾಗಿ, ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡರು.

ಕಾಂಗ್ರೆಸ್‌ ಮುಖಂಡರು ಅದನ್ನು ಅಸಹಾಯಕರಾಗಿ ನೋಡಿದರೇ ವಿನಃ ಅದನ್ನು ಯಾವ ರೀತಿ ಎದುರಿಸಬೇಕು. ಸಿಂಗ್‌ ಅವರ ಹಿಡಿತದಿಂದ ಪಕ್ಷದ ಚುನಾಯಿತ ಸದಸ್ಯರನ್ನು ಹೇಗೆ ಹೊರತರಬೇಕು ಎಂದು ಪ್ರಯತ್ನಿಸಲಿಲ್ಲ. ಇದು ಸಿಂಗ್‌ ಶಕ್ತಿ ಇನ್ನಷ್ಟು ಹೆಚ್ಚಿಸಿತು.

ADVERTISEMENT

ಆನಂದ್‌ ಸಿಂಗ್‌ ಅವರು ಬಿಜೆಪಿ ಪಕ್ಷಕ್ಕಿಂತ ಮೀರಿ ಬೆಳೆದು ತನ್ನದೇ ಆದ ವರ್ಚಸ್ಸು ಕ್ಷೇತ್ರದಲ್ಲಿ ಬೆಳೆಸಿಕೊಂಡರು. ಅವರು ಆಡಿದ್ದೇ ಮಾತು, ನಡೆದದ್ದೇ ದಾರಿ ಎಂಬಂತಾಯಿತು. ಬರು ಬರುತ್ತ ಇದೇ ವಿಷಯ ಸ್ಥಳೀಯ ಬಿಜೆಪಿ ಮುಖಂಡರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದವರಿಗೆ (ಆರ್‌.ಎಸ್.ಎಸ್‌.) ಅಪಥ್ಯವಾಯಿತು.

‘ಪಕ್ಷದ ಯಾವ ಶಾಸಕರು ಕೂಡ ಕಾಂಗ್ರೆಸ್‌ ಸರ್ಕಾರ ಆಚರಿಸುತ್ತಿರುವ ಟಿಪ್ಪು ಸುಲ್ತಾನ್‌ ಜಯಂತಿಯಲ್ಲಿ ಪಾಲ್ಗೊಳ್ಳಬಾರದು’ ಎಂದು ಬಿಜೆಪಿ ಫರ್ಮಾನು ಹೊರಡಿಸಿತ್ತು. ಆದರೆ, ಆನಂದ್‌ ಸಿಂಗ್‌ ಅದನ್ನು ಧಿಕ್ಕರಿಸಿ ಜಯಂತಿಯಲ್ಲಿ ಪಾಲ್ಗೊಂಡರು. ಇದು ಸಿಂಗ್‌ ಹಾಗೂ ಬಿಜೆಪಿ, ಆರ್‌.ಎಸ್‌.ಎಸ್‌. ಮುಖಂಡರ ನಡುವೆ ಹೆಚ್ಚಿನ ಕಂದಕ ಸೃಷ್ಟಿಸಿತು.

2017ರ ಡಿಸೆಂಬರ್‌ನಲ್ಲಿ ನಗರದಲ್ಲಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯಿಂದ ದೂರ ಉಳಿದ ಸಿಂಗ್‌, ಪಕ್ಷ ತೊರೆಯುವ ಮುನ್ಸೂಚನೆ ನೀಡಿದರು. ಅಂತಿಮವಾಗಿ 2018ರ ಫೆಬ್ರುವರಿಯಲ್ಲಿ ಆನಂದ್‌ ಸಿಂಗ್‌ ಅವರು ನಗರದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಸೇರ್ಪಡೆಯಾಗಿ ಬಿಜೆಪಿಯೊಂದಿಗಿನ ದಶಕದ ನಂಟು ಕಳಚಿಕೊಂಡರು.

2018ರ ಏಪ್ರಿಲ್‌– ಮೇ ನಲ್ಲಿ ನಡೆದ ಚುನಾವಣೆಯಲ್ಲಿ ಶತಾಯ ಗತಾಯ ಸಿಂಗ್‌ ಅವರನ್ನು ಸೋಲಿಸಲೇಬೇಕೆಂದು ಪಣ ತೊಟ್ಟು ಬಿಜೆಪಿ, ಆರ್‌.ಎಸ್‌.ಎಸ್‌. ಕಾರ್ಯಕರ್ತರು ಹಗಲಿರುಳು ಶ್ರಮಿಸಿದರು. ಆದರೂ ಪಕ್ಷದ ಅಭ್ಯರ್ಥಿ ಎಚ್‌.ಆರ್‌. ಗವಿಯಪ್ಪ ಸೋಲು ಕಂಡರು. ಆದರೆ, 2008, 2013ರ ಚುನಾವಣೆಯಲ್ಲಿ ಆನಂದ್‌ ಸಿಂಗ್‌ ಗಳಿಸಿದ್ದ ಮತಗಳ ಅಂತರ ಸಾಕಷ್ಟು ಕಡಿಮೆಯಾಯಿತು.

ಒಂದೂವರೆ ವರ್ಷದಲ್ಲೇ ವಾಪಸ್‌:ಆನಂದ್‌ ಸಿಂಗ್‌ ಕಾಂಗ್ರೆಸ್‌ ಸೇರಿದ ಒಂದೂವರೆ ವರ್ಷದಲ್ಲೆ ಪುನಃ ಬಿಜೆಪಿಗೆ ವಾಪಸ್‌ ಆಗಿದ್ದಾರೆ. ಸಿಂಗ್‌ ಸೇರ್ಪಡೆಗೆ ಸ್ಥಳೀಯ ಬಿಜೆಪಿ, ಆರ್‌.ಎಸ್‌.ಎಸ್‌. ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರೂ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳದೇ ವರಿಷ್ಠರು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ.

ಈಗಾಗಲೇ ವಿಜಯನಗರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ಸ್ಥಳೀಯ ಮುಖಂಡರ ಕೋಪವನ್ನು ಸಿಂಗ್‌ ಯಾವ ರೀತಿ ತಣ್ಣಗಾಗಿಸಿ ಅವರನ್ನು ಭರವಸೆಗೆ ತೆಗೆದುಕೊಂಡು ಹೋಗುತ್ತಾರೆ. ಜತೆಗೆ ಮುಖಂಡರು, ಸಿಂಗ್‌ ಅವರನ್ನು ಯಾವ ರೀತಿ ಸ್ವೀಕರಿಸುತ್ತಾರೆ ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.