ADVERTISEMENT

ಆನಂದ್‌ ಸಿಂಗ್‌ ನಡೆ ನಿಗೂಢ; ಬೆಂಬಲಿಗರು, ಆಪ್ತರು ಪೇಚಿಗೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 12 ಆಗಸ್ಟ್ 2021, 11:03 IST
Last Updated 12 ಆಗಸ್ಟ್ 2021, 11:03 IST
ಆನಂದ ಸಿಂಗ್
ಆನಂದ ಸಿಂಗ್   

ಹೊಸಪೇಟೆ (ವಿಜಯನಗರ): ಖಾತೆ ಹಂಚಿಕೆ ಬಗ್ಗೆ ಅಸಮಾಧಾನಗೊಂಡಿರುವ ಸಚಿವ ಆನಂದ್‌ ಸಿಂಗ್‌ ಅವರ ಮುಂದಿನ ನಡೆ ಏನೆಂಬುದು ಇನ್ನೂ ನಿಗೂಢವಾಗಿದೆ. ಆದರೆ, ಮುಂದೆನಾಗುತ್ತೋ ಎಂದು ಅವರ ಬೆಂಬಲಿಗರು, ಆಪ್ತರು ಪೇಚಿಗೆ ಸಿಲುಕಿದ್ದಾರೆ.

ಆನಂದ್‌ ಸಿಂಗ್‌ ಅವರಿಗೆ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ನೀಡಲಾಗಿದೆ. ಆದರೆ, ಇದುವರೆಗೆ ಆನಂದ್‌ ಸಿಂಗ್‌ ಈ ಖಾತೆಗಳ ಜವಾಬ್ದಾರಿ ವಹಿಸಿಕೊಂಡಿಲ್ಲ. ರಾಜಕೀಯ ಚಟುವಟಿಕೆಗಳಿಂದ ದೂರ ಉಳಿದು, ಮೂರು ದಿನಗಳಿಂದ ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಯಾವ ಖಾತೆಗೆ ಬೇಡಿಕೆ ಇಟ್ಟಿರುವೆ ಎನ್ನುವುದರ ಬಗ್ಗೆ ಆನಂದ್‌ ಸಿಂಗ್‌ ಬಹಿರಂಗವಾಗಿ ಎಲ್ಲೂ ಹೇಳಿಲ್ಲ. ಆದರೆ, ಅವರೇ ಆಪ್ತರ ಬಳಿ ಹೇಳಿಕೊಂಡಂತೆ ಇಂಧನ, ಲೋಕೋಪಯೋಗಿ ಮತ್ತು ಸಣ್ಣ ನೀರಾವರಿಯಂತಹ ಪ್ರಮುಖ ಖಾತೆಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಗೊತ್ತಾಗಿದೆ. ಆದರೆ, ಈ ಖಾತೆ ಸಿಗದ ಕಾರಣ ಸಿ.ಎಂವಿರುದ್ಧ ಮುನಿಸಿಕೊಂಡು ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ. ಅಷ್ಟೇ ಅಲ್ಲ, ನಗರದ ರಾಣಿಪೇಟೆಯಲ್ಲಿನ ಅವರ ಕಚೇರಿ ಬಂದ್‌ ಮಾಡಿದ್ದಾರೆ.

ADVERTISEMENT

ಬುಧವಾರ ಒಂದು ಹೆಜ್ಜೆ ಮುಂದೆ ಹೋಗಿ, ‘ನನ್ನ ರಾಜಕೀಯ ಜೀವನ ಆರಂಭಗೊಂಡ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲೇ ಅದು ಅಂತ್ಯ ಕೂಡ ಆಗಬಹುದು’ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

‘ಯಾವುದೇ ಕಾರಣಕ್ಕೂ ನನ್ನ ನಿಲುವಿನಿಂದ ಹಿಂದೆ ಸರಿಯಲಾರೆ. ರಾಜೀನಾಮೆ ಕೊಟ್ಟು ಮತ್ತೊಮ್ಮೆ ಚುನಾವಣೆ ಎದುರಿಸುವ ಪ್ರಸಂಗ ಬಂದರೂ ಅದಕ್ಕೆ ಸಿದ್ಧ’ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಇದು ಬೆಂಬಲಿಗರು, ಆಪ್ತರನ್ನು ವಿಚಲಿತರಾಗುವಂತೆ ಮಾಡಿದೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಆನಂದ್‌ ಸಿಂಗ್‌ ಮರುವರ್ಷವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಗೆದ್ದು ಸಚಿವರೂ ಆದರು. ಈಗ ಪುನಃ ಅವರು ರಾಜೀನಾಮೆ ನೀಡಿದರೆ ಜನರ ಬಳಿ ಯಾವ ಮುಖ ಇಟ್ಟುಕೊಂಡು ಹೋಗಬೇಕು ಎನ್ನುವುದು ಅವರ ಬೆಂಬಲಿಗರ ಮಾತು.

ಸಿಂಗ್‌ ರಾಜಕೀಯ ಕ್ಷೇತ್ರದಿಂದ ದೂರ ಉಳಿದರೆ ತಮ್ಮ ಮುಂದಿನ ಭವಿಷ್ಯ ಏನಾಗಲಿದೆ ಎಂಬ ಚಿಂತೆ ಅವರನ್ನು ಕಾಡುತ್ತಿದೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಟಿಕೆಟ್‌ ಪಡೆದು, ಸ್ಪರ್ಧಿಸಬೇಕೆನ್ನುವುದು ಅವರ ಬೆಂಬಲಿಗರು, ಆಪ್ತರ ಯೋಚನೆ. ಒಂದುವೇಳೆ ಅವರು ರಾಜಕೀಯದಿಂದ ದೂರವಾದರೆ ನಮ್ಮನ್ಯಾರು ಕೇಳುತ್ತಾರೆ ಎಂಬ ಆತಂಕ ಕಾಡಲು ಶುರುವಾಗಿದೆ.

‘ಆನಂದ್‌ ಸಿಂಗ್‌ ಅವರು ಮೊದಲ ಸಲ ಶಾಸಕರಾದ ದಿನದಿಂದಲೂ ಅವರೊಂದಿಗೆ ಇದ್ದೇವೆ. ಅವರ ಎಲ್ಲ ತೀರ್ಮಾನಗಳಿಗೆ ಬದ್ಧರಾಗಿ ಜೊತೆಗಿದ್ದೇವೆ. ಎರಡು ಸಲ ಪಕ್ಷ ಬದಲಿಸಿದ್ದಾರೆ. ಆದರೆ, ಈಗ ಪುನಃ ರಾಜೀನಾಮೆ ಕೊಟ್ಟು ಚುನಾವಣೆಗೆ ಹೋದರೆ ಜನ ಸ್ವೀಕರಿಸುವುದಿಲ್ಲ. ಅವರು ರಾಜಕೀಯ ತೊರೆದರೆ ನಾವಂತೂ ಮೂಲೆಗುಂಪಾಗುವುದು ಸತ್ಯ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಆನಂದ್‌ ಸಿಂಗ್‌ ಅವರ ಕೆಲವು ಆಪ್ತರು ಹೇಳಿದ್ದಾರೆ.

....

ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌
ಖಾತೆ ಬಗ್ಗೆ ಕ್ಯಾತೆ ತೆಗೆದಿರುವ ಆನಂದ್‌ ಸಿಂಗ್‌ ಪರ, ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
‘ಮುಖ್ಯಮಂತ್ರಿಗಳೇ ಇಂದೇ ಗಟ್ಟಿ ನಿರ್ಧಾರ ತೆಗೆದುಕೊಂಡು ಬಿಡಿ. ಪಕ್ಷದಲ್ಲಿ ಅಶಿಸ್ತಿಗೆ ಅವಕಾಶ ಇಲ್ಲವೆಂದು ತೋರಿಸಿಕೊಡಿ. ಇಂತಹ ಅವಕಾಶವಾದಿಗಳು ಪಕ್ಷದಲ್ಲಿ ಇರುವುದು ಬೇಡ’ ಬಿಜೆಪಿ ಸಾಮಾನ್ಯ ಕಾರ್ಯಕರ್ತ. ‘ರೆಬೆಲ್‌ ಆಗಿರೊ ಆನಂದ್‌ ಸಿಂಗ್‌ ಕೋಪ ಶಮನಕ್ಕೆ ಅವರೇ ಬರಬೇಕು. ಯಾರವರು? ಬಿಎಸ್‌ವೈ? ನೋ. ಅಮಿತ್‌ ಶಾ? ನೋ. ಮೋದಿ? ನೋ ನೋ ನೋ. ಮತ್ತೆ? ಕಂಪ್ಲಿ ಗಣೇಶ್‌ ಅಣ್ಣಾ ಎಂದು ಟ್ರೋಲ್‌ ಮಾಡಿದ್ದಾರೆ.
‘ಅಣ್ಣ ನೀವು ಏನೇ ನಿರ್ಧಾರ ತೆಗೆದುಕೊಳ್ಳಿರಿ. ನಾವು ನಿಮ್ಮ ಜತೆಗಿದ್ದೇವೆ’ ಎಂದು ಮತ್ತೆ ಕೆಲವರು ಬೆಂಬಲ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.