ADVERTISEMENT

ಹೈಕೋರ್ಟ್‌ನಿಂದ 8 ಜನರಿಗೆ ನೋಟಿಸ್‌

ಸಚಿವ ಆನಂದ್‌ ಸಿಂಗ್‌, ಸುರಕ್ಷಾ ಎಂಟರ್‌ಪ್ರೈಸೆಸ್‌ನಿಂದ ಭೂ ಕಬಳಿಕೆ ಆರೋಪ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ನವೆಂಬರ್ 2022, 16:22 IST
Last Updated 7 ನವೆಂಬರ್ 2022, 16:22 IST
ಅಬ್ದುಲ್‌ ಖದೀರ್‌
ಅಬ್ದುಲ್‌ ಖದೀರ್‌   

ಹೊಸಪೇಟೆ (ವಿಜಯನಗರ): ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್, ಸುರಕ್ಷಾ ಎಂಟರ್‌ಪ್ರೈಸೆಸ್‌ನವರು ನಗರದಲ್ಲಿ ಭೂ ಒತ್ತುವರಿ ಮಾಡಿದ ಪ್ರಕರಣದ ಕುರಿತು ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್‌) ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ.

ಒತ್ತುವರಿಗೆ ಸಂಬಂಧಿಸಿದಂತೆ ಮೂಲ ದಾಖಲೆಗಳ ಸಮೇತ ಅಗತ್ಯ ಮಾಹಿತಿ ಸಲ್ಲಿಸುವಂತೆ ರಾಜ್ಯ ಸರ್ಕಾರ, ಜಿಲ್ಲಾಧಿಕಾರಿ, ನೀರಾವರಿ ಇಲಾಖೆ, ನಗರಾಭಿವೃದ್ಧಿ, ಪೌರಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಎಂಟು ಜನರಿಗೆ ಹೈಕೋರ್ಟ್‌ ನವೆಂಬರ್‌ 2ರಂದು ನೋಟಿಸ್‌ ಜಾರಿಗೊಳಿಸಿದೆ. ಇದಕ್ಕಾಗಿ ಒಂದು ವಾರದ ಗಡುವು ನೀಡಿದೆ.

ಸರ್ವೇ ನಂಬರ್‌ 73, 74, 75ರಲ್ಲಿ ಸುರಕ್ಷಾ ಎಂಟರ್‌ಪ್ರೈಸೆಸ್‌ನವರು ಭೂಕಬಳಿಕೆ ಮಾಡಿ ಲೇಔಟ್‌ ನಿರ್ಮಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಸರ್ವೆ ನಂ. 63ರಲ್ಲಿ 0.30 ಸೇಂಟ್ಸ್, ಸರ್ವೇ ನಂಬರ್‌ 67ರಲ್ಲಿ ಒಳಚರಂಡಿಗೆ ಸೇರಿದ 0.5 ಸೇಂಟ್ಸ್‌ ಜಾಗವನ್ನು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ‌ಭೂ ಒತ್ತುವರಿ ಮಾಡಿದ್ದಾರೆ. ಸುರಕ್ಷಾ ಎಂಟರ್‌ಪ್ರೈಸೆಸ್‌ ಹೆಸರಿನಲ್ಲಿರುವ ಹಾಲಿ ಜಮೀನು ಮಾರಾಟ ಮಾಡುವುದಕ್ಕೂ ಮುನ್ನ ಸಚಿವ ಆನಂದ್‌ ಸಿಂಗ್‌ ಅದನ್ನು ಭೂ ಪರಿವರ್ತನೆ ಮಾಡಿಸಿಕೊಂಡಿದ್ದರು ಎಂಬ ಆರೋಪವಿದೆ.

ADVERTISEMENT

ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ನಗರಸಭೆ ಮಾಜಿ ಸದಸ್ಯ ಡಿ.ವೇಣುಗೋಪಾಲ, ನಗರಸಭೆ 6ನೇ ವಾರ್ಡ್ ಸದಸ್ಯ ಅಬ್ದುಲ್ ಖದೀರ್, ಸಿ.ಎಂ. ಖಾಜಾ ಮೊಯಿನುದ್ದೀನ್‌, ಗುಜ್ಜಲ್‌ ಹುಲುಗಪ್ಪ, ವಕೀಲ ವಿ. ಚಿದಾನಂದ ಎಂಬುವರು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್‌ ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಆಕ್ಷೇಪಣೆಗಳಿದ್ದಲ್ಲಿ ತಕ್ಷಣವೇ ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಸೂಚಿಸಿದೆ.

ಪ್ರಕರಣದಲ್ಲಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ, ನಗರಾಭಿವೃದ್ಧಿ, ಕಂದಾಯ, ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ವಿಜಯನಗರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಹೊಸಪೇಟೆ ತಹಶೀಲ್ದಾರ್‌ ವಾದಿಗಳಾಗಿದ್ದು, ತಮ್ಮಲ್ಲಿರುವ ಮೂಲ ದಾಖಲೆಗಳು ಮತ್ತು ವಿವರಣೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಅಡ್ವೋಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ನೋಟಿಸ್ ಜಾರಿಗೊಳಿಸಿದ್ದಾರೆ.

ನೋಟಿಸ್‌ ಬಂದ ದಿನವೇ ಈ ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರು ಹೊಸಪೇಟೆ ಉಪವಿಭಾಗಾಧಿಕಾರಿಗೆ ಪತ್ರ ಬರೆದಿದ್ದಾರೆ. ಡಿಡಿಎಲ್‌ಆರ್‌, ನಗರಸಭೆ ಪೌರಾಯುಕ್ತ, ಹೊಸಪೇಟೆ ತಹಶಿಲ್ದಾರ್‌, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಅವರನ್ನು ಒಳಗೊಂಡ ಸಮಿತಿ ಈಗಾಗಲೇ ನಡೆಸಿದ ಸರ್ವೇ, ನಕಾಶೆಯ ವರದಿ, ಅಗತ್ಯ ದಾಖಲೆಗಳೊಂದಿಗೆ ತುರ್ತಾಗಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಅದಾದ ಎರಡು ದಿನಗಳ ನಂತರ ಜಿಲ್ಲಾಧಿಕಾರಿಗಳನ್ನು ವರ್ಗಾವಣೆಗೊಳಿಸಲಾಯಿತು.

ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಅವರು ಜಿಲ್ಲೆಗೆ ಬಂದ ದಿನದಿಂದಲೂ ಪ್ರಭಾವಿಗಳ ಅಕ್ರಮಕ್ಕೆ ಕಡಿವಾಣ ಹಾಕಿದ್ದರು. ನಗರದ ಸುತ್ತಮುತ್ತ ಎಲ್ಲೆಲ್ಲಿ ಸರ್ಕಾರಿ ಜಾಗವಿದೆಯೋ ಅದನ್ನು ಗುರುತಿಸಿ ಹದ್ದುಬಸ್ತು ಮಾಡಿಸಿದ್ದರು. ಟೆಂಡರ್‌ ಇಲ್ಲದೆ ಕೈಗೆತ್ತಿಕೊಳ್ಳುತ್ತಿದ್ದ ಕಾಮಗಾರಿಗಳಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಇದು ಪ್ರಭಾವಿ ಸಚಿವರೊಬ್ಬರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಕಾರಣಕ್ಕಾಗಿಯೇ ಪಟ್ಟು ಹಿಡಿದು ಜಿಲ್ಲಾಧಿಕಾರಿ, ಜತೆಗೆ ಅವರ ಬೆನ್ನಿಗೆ ನಿಂತಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಬೇರೆಡೆ ವರ್ಗಾವಣೆಗೊಳಿಸಿ ತಮಗೆ ಬೇಕಾದ ಅಧಿಕಾರಿಗಳನ್ನು ತಂದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.