
ಕುರುಗೋಡು: ಶತಮಾನಗಳ ಹಿಂದೆ ಕರ್ನಾಟಕದಲ್ಲಿ ಭೂಮಿಯನ್ನು ಮಾಪನ ಮಾಡಲು ಬಳಕೆಯಲ್ಲಿದ್ದ ತಂತ್ರಜ್ಞಾನವನ್ನು ವಿವರಿಸುವ ಶಾಸನವುಳ್ಳ ಕುರುಗೋಡಿನ ಉಜ್ಜಳಪೇಟೆಯಲ್ಲಿರುವ ಕತ್ತೆಬಂಡೆ ಶಾಸನ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಕೃಷಿ ಭೂಮಿಯಲ್ಲಿನ ನಿಸರ್ಗದತ್ತ ಹಾಸು ಬಂಡೆಯ ಒಂದು ಭಾಗದ ಮೇಲೆ ಕೆತ್ತಿರುವ ಆಕಳು, ಕರು ಮತ್ತು ಹಂದಿಯ ಚಿತ್ರವನ್ನು ಕತ್ತೆ ಎಂದು ಭಾವಿಸಿ ಇದನ್ನು ‘ಕತ್ತೆ ಬಂಡೆ’ ಎಂದು ಕರೆಯಲಾಗುತ್ತಿದೆ. ಅದಕ್ಕಾಗಿಯೇ ಇದನ್ನು ಕತ್ತೆಬಂಡೆ ಶಾಸನ ಎಂದು ಹಸರಿಸಲಾಗಿದೆ.
ಐದು ಸಾಲಿನ ಈ ಶಾಸನದ ಪ್ರಾರಂಭದಲ್ಲಿ ‘ಸ್ವಸ್ತಿಶ್ರೀ ಸತ್ಯಾಶ್ರಯ’ ಎಂದು ಹೇಳಿರುವುದರಿಂದ ಮತ್ತು ಶಾಸನದ ಲಿಪಿಯ ಮಾದರಿಯಿಂದ ಇದು ಚಾಲುಕ್ಯ ಸಾಮ್ರಾಟ ಇಮ್ಮಡಿ ಪುಲಕೇಶಿಯು ಕ್ರಿ.ಶ. 7ನೇ ಶತಮಾನದಲ್ಲಿ ಹೊರಡಿಸಿರಬಹುದು ಎಂದು ಶಾಸನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭೂಮಿಯನ್ನು ಮಾರಾಟಮಾಡಿದಾಗ ಮತ್ತು ಕೊಂಡಾಗ ಭೂಮಿಯನ್ನು ಅಳತೆ ಮಾಡಲು 18 ಗೇಣಿನ ನಿರ್ದಿಷ್ಟ ಮಾಪನ ಬಳಕೆಯಲ್ಲಿತ್ತು ಎನ್ನುವುದು ಶಾಸನದಿಂದ ತಿಳಿದುಬರುತ್ತದೆ. ಯುರೋಪಿಯನ್ನರು ಗಜ, ಮಿಲಿ ಮೀಟರ್, ಸೆಂಟಿಮೀಟರ್, ಮೀಟರ್ ಮೊದಲಾದ ಮಾಪನಗಳನ್ನು ಒಂದು ಶತಮಾನದ ಹಿಂದಷ್ಟೇ ಕಂಡುಕೊಂಡು ಉಪಯೋಗಕ್ಕೆ ತಂದಿದ್ದಾರೆ. ಆದರೆ ಇಂಥ ಮಾಪನಗಳನ್ನು ಭಾರತೀಯರು ಅದರಲ್ಲೂ ಕರ್ನಾಟಕದ ರಾಜರು, ಪ್ರಜೆಗಳು ಬಹಳ ಹಿಂದೆಯೇ ಬಳಕೆ ಮಾಡುತ್ತಿದ್ದರು ಎಂದು ಈ ಶಾಸನದಿಂದ ತಿಳಿಸುತ್ತದೆ.
ಬಾದಾಮಿ ಚಾಲುಕ್ಯರು ಚಲಾವಣೆಗೆ ತಂದಿದ್ದ ನಾಣ್ಯಗಳ ಮೇಲೆ ನವಿಲಿನ ಚಿತ್ರ ಚಿತ್ರಿಸಿದ್ದರು. ನವಿಲಚ್ಚಿನ ನಾಣ್ಯಗಳನ್ನು ತಯಾರಿಸುವ ಟೆಂಕಶಾಲೆ ಕುಡುತಿನಿಯಲ್ಲಿತ್ತು ಎಂಬ ವಿಷಯ ಶಾಸಕದಿಂದ ತಿಳಿದುಬರುವ ಮತ್ತೊಂದು ಮಹತ್ವದ ವಿಷಯವಾಗಿದೆ ಎಂದು ಸಂಶೋಧಕ ವೈ. ಹನುಮಂತ ರೆಡ್ಡಿ ಅವರು ರಚಿಸಿದ ‘ಕುರುಗೋಡಿನ ಸಾಂಸ್ಕೃತಿಕ ಇತಿಹಾಸ’ ಪುಸ್ತಕದಿಂದ ತಿಳುದುಬರುತ್ತದೆ.
ಜತೆಗೆ, ಕುರುಗೋಡು ಎಂಬ ಹೆಸರು 7ನೇ ಶತಮಾನದಿಂದಲೂ ಬದಲಾಗದೇ, ಬಳಕೆಯಾಗುತ್ತಿರುವುದು ಶಾಸನದಿಂದ ತಿಳಿಯುತ್ತದೆ.
ಸೂಕ್ತ ರಕ್ಷಣೆ ಕೊರತೆಯಿಂದ ಮಹತ್ವದ ಶಾಸನ ಅವಸಾನವಾಗುತ್ತಿದೆ. ಪ್ರಾಚ್ಯವಸ್ತು ಸಂರಕ್ಷಣಾ ಇಲಾಖೆ 1991ರಲ್ಲಿ ಮಹತ್ವದ ಶಾಸನ ರಕ್ಷಿಸುವ ಉದ್ದೇಶದಿಂದ ಇದರ ಸುತ್ತ ಕಟ್ಟಡ ನಿರ್ಮಿಸಿದೆ. ಆದರೆ ಕಿಡಿಗೇಡಿಗಳು ಕಟ್ಟಡದ ಕಿಟಕಿ, ಬಾಗಿಲು ಮುರಿದು ಹಾಕಿದ್ದಾರೆ. ಕಟ್ಟಡವು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ.
ಶಾಸನ ಇರುವ ಸ್ಥಳಕ್ಕೆ ತೆರಳಲು ಉತ್ತಮ ದಾರಿ ಇಲ್ಲ. ದಾರಿಯುದ್ದಕ್ಕೂ ದಟ್ಟವಾಗಿ ಮುಳ್ಳಿನ ಗಿಡಗಳು ಬೆಳೆದಿವೆ. ಸುತ್ತಮುತ್ತಲಿನ ಜಮೀನುಗಳಿಗೆ ರೈತರು ತಂತಿಬೇಲಿ ಹಾಕಿಕೊಂಡಿದ್ದಾರೆ. ಸೂಕ್ತ ರಸ್ತೆ ಇಲ್ಲದ ಪರಿಣಾಮ ಸುಲಭವಾಗಿ ಸ್ಥಳಕ್ಕೆ ತಲುಪಲು ಸಾಧ್ಯವಿಲ್ಲ. ಪ್ರಾಯಾಸಪಟ್ಟು ತಲುಪಬೇಕಾಗಿದೆ.
ಪಟ್ಟಣದಲ್ಲಿ ಮಹತ್ವದ ಶಾಸನಗಳು ಸೇರಿದಂತೆ ಐತಿಹಾಸಿಕ ಮಹತ್ವದ ಸುಂದರ ಕೆತ್ತನೆಯಿಂದ ಕೂಡಿದ ದೇವಾಲಯಗಳಿಗೆ. ಇವುಗಳ ಸಂರಕ್ಷಣೆಗಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದುನರಸಪ್ಪ ತಹಶೀಲ್ದಾರ್ ಕುರುಗೋಡು
ನಾಡಿನ ಪ್ರಮುಖ ಮತ್ತು ಮಹತ್ವದ ಶಾಸನಗಳಲ್ಲಿ ಕತ್ತೆಬಂಡೆ ಶಾಸನ ಒಂದು. ಇದನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಇತಿಹಾಸ ಪರಿಚಯಿಸುವ ಅಗತ್ಯವಿದೆಶಶಿಕಾಂತ್ ಇತಿಹಾಸ ಸಹಾಯಕ ಪ್ರಧ್ಯಾಪಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.