ADVERTISEMENT

ಹಗರಿಬೊಮ್ಮನಹಳ್ಳಿ:ಅಂಗನವಾಡಿ ಅನುದಾನ ಅನ್ಯ ಉದ್ಧೇಶಕ್ಕೆ ಬಳಸಿದ PDO ವಿರುದ್ಧ ಕ್ರಮ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಇಒ ಮಾಹಿತಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 2:59 IST
Last Updated 18 ಡಿಸೆಂಬರ್ 2025, 2:59 IST
ಹಗರಿಬೊಮ್ಮನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಮಾತನಾಡಿದರು
ಹಗರಿಬೊಮ್ಮನಹಳ್ಳಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಮಾತನಾಡಿದರು   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹಂಪಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಣಿಗಿ-1 ಮತ್ತು ಏಣಿಗಿ ಬಸಾಪುರ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ವಿಶೇಷ ಅಭಿವೃದ್ಧಿ ಅನುದಾನ ಬಿಡುಗಡೆಯಾಗಿದ್ದರೂ ಅನ್ಯ ಉದ್ಧೇಶಕ್ಕಾಗಿ ಬಳಸಿಕೊಂಡಿರುವ ಪಿಡಿಒಗಳ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾ ಪಂಚಾಯಿತಿ ದೂರು ಸಲ್ಲಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಪಾಲಯ್ಯನಕೋಟೆ ವಿಶ್ವನಾಥ ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೋರೆಗೌಡ ತಾಲ್ಲೂಕಿನಲ್ಲಿ 243 ಅಂಗನವಾಡಿ ಕೇಂದ್ರಗಳಿದ್ದು, 230 ಸ್ವಂತ ಕಟ್ಟಡದಲ್ಲಿವೆ ಎಂದರು. ಆಗ ಮಧ್ಯೆ ಪ್ರವೇಶಿಸಿದ ತಾಲ್ಲೂಕು ಪಂಚಾಯಿತಿಯ ಆಡಳಿತಾಧಿಕಾರಿಯೂ ಆದ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಅವರು, ಈ ಹಿಂದೆ ಎರಡು ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದರೂ, ನಿರ್ಮಿಸದಿರುವ ಬಗ್ಗೆ ಹಿಂದೆ ಇದ್ದ ಪಿಡಿಒಗಳಾದ ಲಕ್ಷ್ಮಣ ಮತ್ತು ಆರ್.ಶಾಂತನಗೌಡ ಅವರ ಕಾರ್ಯದ ಕುರಿತು ತೀವ್ರ ಅಸಮಧಾನ ವ್ಯಕ್ತಪಡಿಸಿದರು. ಆಗ ಇಒ ದೂರು ಸಲ್ಲಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ADVERTISEMENT

ಆಗ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ ಅವರು, ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆಯಾದಾಗ ಕ್ಯಾಶ್‍ಬುಕ್ ಸರಿಯಾಗಿ ನಿರ್ವಹಣೆ ಮಾಡಿದರೆ ಗೊಂದಲ ಆಗುವುದಿಲ್ಲ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಚೆಕ್ ನೀಡಿದಾಗ ಇಂಥಹ ಘಟನೆಗಳು ನಡೆಯುತ್ತವೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್ ಮಾತನಾಡಿ, ತಾಲ್ಲೂಕಿನಲ್ಲಿರುವ ಬಹುತೇಕ ಹಾಸ್ಟೆಲ್ ಕಟ್ಟಡಗಳು ಶಿಥಿಲಗೊಂಡಿವೆ. ಅವುಗಳನ್ನು ನೆಲಸಮಗೊಳಿಸಿ ನೂತನ ಕಟ್ಟಡ ನಿರ್ಮಿಸಬೇಕೆನ್ನುವ ಪ್ರಸ್ತಾವನೆಯನ್ನು ಆಯುಕ್ತರಿಗೆ ಸಲ್ಲಿಸಲಾಗಿದೆ ಎಂದರು.

ಹಿಂಗಾರು ಹಂಗಾಮಿನಲ್ಲಿ ಯೂರಿಯಾ ಗೊಬ್ಬರಕ್ಕೆ ತೊಂದರೆ ಇಲ್ಲ, ಅಗತ್ಯ ದಾಸ್ತಾನಿದೆ. 11ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. 16 ಸಾವಿರ ನೋಂದಾಯಿತ ಕೊಳವೆಬಾವಿಗಳಿವೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಸುನೀಲ್‍ಕುಮಾರನಾಯ್ಕ ಮಾಹಿತಿ ನೀಡಿದರು.

ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವಿಜಯ್ ನಿಚ್ಚಾಪುರ ಮಾತನಾಡಿ, ಹೊಸ ತಾಂತ್ರಿಕತೆಯನ್ನು ಬಳಸಿಕೊಂಡು ಸಾಂಪ್ರಾದಾಯಿಕವಲ್ಲದ, ಅಧಿಕ ಸಾಂದ್ರತೆ ಇರುವ ತೋಟಗಾರಿಕೆ ಕೃಷಿಗೆ ಉತ್ತೇಜನ ನೀಡುವುದಕ್ಕಾಗಿ ₹19ಲಕ್ಷ ಬಿಡುಗಡೆಯಾಗಿದ್ದು, ₹18ಲಕ್ಷ ಖರ್ಚಾಗಿದೆ ಎಂದರು.

ಸಾಮಾಜಿಕ ಅರಣ್ಯ ಇಲಾಖೆಯ ಮಂಜುನಾಯ್ಕ, ರಾಷ್ಟ್ರೀಯ ವಿಕಾಸ ಯೋಜನೆಯಲ್ಲಿ ಉತ್ಪಾದಿಸಿದ ವಿವಿಧ 4300 ಸಸಿಗಳನ್ನು ತಾಲ್ಲೂಕಿನ 83 ಶಾಲೆಗಳಿಗೆ ನೀಡಲಾಗಿದೆ ಎಂದರು. ಆಗ ತಾಪಂ ಇಒ ಜಿಪಿಎಸ್ ಫೋಟೊ ಸಹಿತ ಸಾಕ್ಷಿ ನೀಡಿ, ಶಾಲೆಯ ಆವರಣದಲ್ಲಿ ಬೆಳೆದ ಗಿಡಗಳ ಫಲಿತಾಂಶ ಗೊತ್ತಾಗುತ್ತದೆ ಎಂದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಬಸವರೆಡ್ಡಿ, ಲೆಕ್ಕಾಧಿಕಾರಿ ತಿಪ್ಪೇಸ್ವಾಮಿ, ಬಿಇಒ ಎಂ.ಎಸ್.ಪ್ರಭಾಕರ, ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರವೀಣ್‍ಕುಮಾರ್, ಪಶುಸಂಗೋಪನೆ ಇಲಾಖೆಯ ಡಾ.ಪಿ.ಸೂರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೊಟ್ರೇಶ್‍ನಾಯ್ಕ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜಕುಮಾರನಾಯ್ಕ, ನರೇಗಾ ಸಹಾಯಕ ನಿರ್ದೇಶಕ ರಮೇಶ್ ಮಹಾಲಿಂಗಪುರ, ರೇಷ್ಮೆ ಇಲಾಖೆಯ ವಿಸ್ತೀರ್ಣಾಧಿಕಾರಿ ಬಿರಾದರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.