ADVERTISEMENT

ಹಗರಿಬೊಮ್ಮನಹಳ್ಳಿ | ಅನ್ನಭಾಗ್ಯ ಯೋಜನೆ ದುರ್ಬಳಕೆ: ಕ್ರಮ ಕೈಗೊಳ್ಳಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 4:47 IST
Last Updated 8 ಫೆಬ್ರುವರಿ 2026, 4:47 IST
ಹಗರಿಬೊಮ್ಮನಹಳ್ಳಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು
ಹಗರಿಬೊಮ್ಮನಹಳ್ಳಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು   

ಹಗರಿಬೊಮ್ಮನಹಳ್ಳಿ: ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಸರಕು ಸಾಗಣೆ ವಾಹನಗಳು ಮತ್ತು ಬೈಕ್‍ಗಳಲ್ಲಿ ಸಂಗ್ರಹಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಯಾರೇ ಆಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸೊನ್ನದ ಗುರುಬಸವರಾಜ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅವ್ಯಾಹತವಾಗಿ ಅನ್ಯ ರಾಜ್ಯಗಳಿಗೆ ಸಾಗಣೆ ಮಾಡುತ್ತಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದರೂ ವಾರದಲ್ಲಿ ಮತ್ತೆರಡು ಪ್ರಕರಣಗಳು ನಡೆದಿವೆ, ಈ ಕುರಿತು ಸೂಕ್ತ ಕ್ರಮ ಜರುಗಿಸುವಂತೆ ಆಹಾರ ನಿರೀಕ್ಷಕ ವೀರೇಶ್ ಅವರಿಗೆ ನಿರ್ದೇಶನ ನೀಡಿದರು. ಅಕ್ಕಿ ಮಾರಾಟ ಮಾಡುವ ಗ್ರಾಹಕರ ವಿರುದ್ಧವೂ ಕ್ರಮ ಜರುಗಿಸುವ ಕುರಿತಂತೆ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಆಹಾರ ನಿರೀಕ್ಷಕ ಹೇಳಿದರು.

ADVERTISEMENT

ಅನುಷ್ಠಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್.ಜಂದೀಸಾಹೇಬ್ ಮಾತನಾಡಿ, ಈಗ ಪರೀಕ್ಷೆ ಸಮಯವಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾರ್ಥಿಗಳು ಎಲ್ಲೆಂದರಲ್ಲಿ ಬಸ್ ನಿಲುಗಡೆಗೆ ವಿನಂತಿಸಿದರೂ ನಿಲುಗಡೆ ಮಾಡಬೇಕು ಎಂದರು.

ಬಸ್‍ಡಿಪೋ ಅಧಿಕಾರಿ ಸಂತೋಷ್ ನಾಯ್ಕ ಪ್ರತಿಕ್ರಿಯಿಸಿ, ಈ ಕುರಿತು ಚಾಲಕರು ಮತ್ತು ನಿರ್ವಾಹಕರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು.

ಪಟ್ಟಣದ ಬಿ.ಆರ್.ಅಂಬೇಡ್ಕರ್ ವೃತ್ತ ಮತ್ತು ಆದರ್ಶ ಶಾಲೆಯ ಬಳಿ ಬಸ್‍ನಿಲ್ದಾಣಗಳನ್ನು ನಿರ್ಮಿಸಲು ಅಗತ್ಯಬಿದ್ದರೆ ಸಂಸದರ ನಿಧಿ ಬಿಡುಗಡೆಗೆ ನಿಯೋಗ ತೆರಳಿ ವಿನಂತಿಸುವುದಾಗಿ ಸೊನ್ನದ ಗುರುಬಸವರಾಜ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪಾಲಯ್ಯನಕೋಟೆ ವಿಶ್ವನಾಥ, ಗೃಹಲಕ್ಷ್ಮಿ ಯೋಜನೆಯಲ್ಲಿ ನಿಧನರಾದವರ ಮಾಹಿತಿ ನೀಡುವಂತೆ ಸಿಡಿಪಿಒ ಬೋರೆಗೌಡ ಅವರಿಗೆ ಸೂಚಿಸಿದರು.

ತಾಲ್ಲೂಕಿನಲ್ಲಿ 786ಜನ ಫಲಾನುಭವಿಗಳು ನಿಧನರಾಗಿದ್ದಾರೆ, 11ಜನ ಫಲಾನುಭವಿಗಳ ₹1.16ಲಕ್ಷ ರೂಪಾಯಿ ಮೊತ್ತವನ್ನು ಸರ್ಕಾರಕ್ಕೆ ವಾಪಾಸ್ ಕಳಿಸಲಾಗಿದೆ ಎಂದು ಸಿಡಿಪಿಒ ಮಾಹಿತಿ ನೀಡಿದರು. ಸಮಿತಿಯ ಜಿಲ್ಲಾ ಸದಸ್ಯ ಹೆಗ್ಡಾಳ್ ಪರಶುರಾಮ್, ತಾಲ್ಲೂಕು ಸದಸ್ಯರಾದ ಜಿ.ಗಿರೀಶ್, ಸಂತೋಷ್, ಸರ್ದಾರ ರಾಮಣ್ಣ, ವೆಂಕಟೇಶನಾಯ್ಕ. ಕೆ.ನಾಗಮ್ಮ, ಜೆಸ್ಕಾಂ ಇಲಾಖೆಯ ರವಿಕುಮಾರ, ಲಕ್ಷ್ಮೀ ಇದ್ದರು.

ಉತ್ತಮ ರಂಗೋಲಿಗೆ ಬಹುಮಾನ ಪಂಚ ಗ್ಯಾರಂಟಿ ಯೋಜನೆಗಳು ಸಮಗ್ರವಾಗಿ ಫಲಾನುಭವಿಗಳ ಮನೆಬಾಗಿಲಿಗೆ ತಲುಪುತ್ತಿರುವ ಕುರಿತು ಅರಿವು ಮೂಡಿಸುವ  ‘ಮನೆಗೈದು ಗ್ಯಾರಂಟಿ ಮನೆಮುಂದೆ ರಂಗೋಲಿ’ ಎನ್ನುವ ವಿನೂತನ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗುವುದು ಉತ್ತಮ ರಂಗೋಲಿಗೆ ಬಹುಮಾನ ನೀಡಲಾಗುವುದು ಎಂದು ಸಭೆಯಲ್ಲಿ ತಿಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.