ADVERTISEMENT

ಎಪಿಎಂಸಿ ಗೊಂದಲ ಸದ್ಯ ಅಂತ್ಯ

ಹಮಾಲರು– ವರ್ತಕರು ಒಮ್ಮತಕ್ಕೆ | ಮಂಗಳವಾರ ಮಧ್ಯಾಹ್ನದ ನಂತರ ವಹಿವಾಟು ಆರಂಭ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 2:17 IST
Last Updated 4 ಫೆಬ್ರುವರಿ 2026, 2:17 IST
ಬಳ್ಳಾರಿ ಎಪಿಎಂಸಿಯಲ್ಲಿ ಮಂಗಳವಾರ ಮಧ್ಯಾಹ್ನದ ವರೆಗೆ ವಹಿವಾಟು ನಡೆಯದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು, ಮಧ್ಯವರ್ತಿಗಳು ಸಮಯದೂಡುತ್ತಿದ್ದ ಸನ್ನಿವೇಶ
ಬಳ್ಳಾರಿ ಎಪಿಎಂಸಿಯಲ್ಲಿ ಮಂಗಳವಾರ ಮಧ್ಯಾಹ್ನದ ವರೆಗೆ ವಹಿವಾಟು ನಡೆಯದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು, ಮಧ್ಯವರ್ತಿಗಳು ಸಮಯದೂಡುತ್ತಿದ್ದ ಸನ್ನಿವೇಶ   

ಬಳ್ಳಾರಿ: ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಹಮಾಲರು, ವರ್ತಕರು ಮತ್ತು ಮಾರಾಟ ಮಧ್ಯವರ್ತಿಗಳ ನಡುವೆ ತಲೆದೋರಿದ್ದ ಗೊಂದಲ ಬಗೆಹರಿದಿದ್ದು, ಮಂಗಳವಾರ ಮಧ್ಯಾಹ್ನದ ಬಳಿಕ ‌ವಹಿವಾಟು ನಡೆಯಿತು.  

ಎಪಿಎಂಸಿ ಕಾರ್ಯದರ್ಶಿ ಜಯಕುಮಾರ್‌ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಹಮಾಲರು, ವರ್ತಕರು, ಮಧ್ಯವರ್ತಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಎಲ್ಲರೂ ಒಮ್ಮತಕ್ಕೆ ಬಂದಿದ್ದು, ಮಧ್ಯಾಹ್ನ ಟೆಂಡರ್‌ ಪ್ರಕ್ರಿಯೆ ಆರಂಭವಾಯಿತು. 

ಚೀಲಕ್ಕೆ ಉತ್ಪನ್ನ ತುಂಬಿ, ತೂಕ ಹಾಕುವುದಕ್ಕೆ ವರ್ತಕರು, ಮಧ್ಯವರ್ತಿಗಳು ನೀಡುತ್ತಿದ್ದ ಕೂಲಿ ಹಣ ಹೆಚ್ಚಿಸಬೇಕು ಎಂದು ಹಮಾಲರು ಪಟ್ಟು ಹಿಡಿದಿದ್ದರು. ಈಗಾಗಲೇ ಶೇ 20ರಷ್ಟು ಹೆಚ್ಚಿಸಿದ್ದರಿಂದ ಈ ವಿಷಯ ಹೆಚ್ಚು ಚರ್ಚೆಯಾಗಲಿಲ್ಲ. ಇನ್ನು ಖಾಲಿ ಚೀಲಗಳನ್ನು ವರ್ತಕರ ಬಳಿಗೆ ತರುವುದಕ್ಕೆ ಪ್ರತಿ ಚೀಲಕ್ಕೆ 30 ಪೈಸೆ ನೀಡಬೇಕು ಎಂದು ಹಮಾಲರು ಆಗ್ರಹಿಸಿದ್ದರು. ಆದರೆ, ಖಾಲಿ ಚೀಲಗಳನ್ನು ತಮ್ಮ ಕಡೆಯ ಹಮಾಲರೇ ತರುವುದಾಗಿ ವರ್ತಕರು ಹೇಳಿದರು. ಇದರೊಂದಿಗೆ ಹಮಾಲರು, ವರ್ತಕರು, ಮಧ್ಯವರ್ತಿಗಳ ನಡುವೆ ತಲೆದೋರಿದ್ದ ಗೊಂದಲ ಸದ್ಯಕ್ಕೆ ಬಗೆಹರಿಯಿತು.  

ADVERTISEMENT

ಸೋಮವಾರ ಮತ್ತು ಬಹುತೇಕ ಮಂಗಳವಾರ ಎಪಿಎಂಸಿ ವ್ಯಾಪಾರ ನಿಂತಿದ್ದರಿಂದ ಹಲವು ರೈತರು ಸಮಸ್ಯೆಗೆ ಗುರಿಯಾದರು. ಇತ್ತ ಎಪಿಎಂಸಿಗೂ ಎರಡು ದಿನಗಳ ವಹಿವಾಟು ನಷ್ಟವಾಯಿತು. 

ಶೇಂಗಾಕ್ಕೆ ಇತ್ತೀಚೆಗಷ್ಟೇ ಉತ್ತಮ ಬೆಲೆ ಸಿಗಲಾರಂಭಿಸಿತ್ತು. ಇದನ್ನು ನಂಬಿ ದೂರದ ಊರುಗಳಿಂದ ಶೇಂಗಾ ತಂದವರು, ಮಾರುಕಟ್ಟೆ ಇಲ್ಲದೇ ತೀರಾ ಬೇಸರದಲ್ಲಿ ಊರುಗಳಿಗೆ ತೆರಳಿದರು.    

ಮುಗಿಯಲಾರದ ಗೋಳು

ಬಳ್ಳಾರಿ ಎಪಿಎಂಸಿಗೆ ರಾಜ್ಯದಲ್ಲಿ ಮಾತ್ರವಲ್ಲದೇ ನೆರೆ ರಾಜ್ಯಗಳಲ್ಲೂ ಒಳ್ಳೆಯ ಹೆಸರಿದೆ. ಅಂದು ಮಾರಾಟವಾಗುವ ಉತ್ಪನಕ್ಕೆ ಅಂದೇ ಹಣ ಪಾವತಿ ಮಾಡುವ ವ್ಯವಸ್ಥೆ ರೂಢಿಸಿಕೊಂಡು ಬಂದಿರುವುದು ಬಳ್ಳಾರಿ ಎಪಿಎಂಸಿ ಮಾತ್ರ. ಆದರೆ ವರ್ತಕರು– ಮಧ್ಯವರ್ತಿಗಳು ವರ್ತಕರು– ಹಮಾಲರ ನಡುವಿನ ವಿವಾದಗಳಿಂದಾಗಿ ಆಗಾಗ ಮಾರುಕಟ್ಟೆಯೇ ಬಂದ್‌ ಆದ ಪ್ರಸಂಗಗಳು ಕಳೆದ ಎರಡು ವರ್ಷಗಳಲ್ಲಿ ಮೂರ್ನಾಲ್ಕು ಬಾರಿ ನಡೆದು ಹೋಗಿವೆ. ಹೀಗೆ ಮಾರುಕಟ್ಟೆ ಬಂದಾದಾಗೆಲ್ಲ ರೈತರು ಪರಿತಪಿಸುವುದು ಸಮಸ್ಯೆಗೆ ಸಿಲುಕುವುದು ಸಾಮಾನ್ಯ ಎಂಬಂತಾಗಿದೆ.  ಇಲ್ಲಿನ ವಿವಾದಗಳ ಬಗ್ಗೆ ಮಾತನಾಡಿದ ಎಪಿಎಂಸಿ ಪ್ರಮುಖರೊಬ್ಬರು ‘ಒಬ್ಬರನ್ನು ಮತ್ತೊಬ್ಬರು ಎತ್ತಿಕಟ್ಟುತ್ತಾರೆ. ಯಾರದ್ದೋ ತಾಳಕ್ಕೆ ಯಾರೋ ಕುಣಿಯುತ್ತಾರೆ. ಅಂತಿಮವಾಗಿ ರೈತರನ್ನು ಸಮಸ್ಯೆಗೆ ತಳ್ಳುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.