
ಬಳ್ಳಾರಿ: ತಾಲ್ಲೂಕಿನ ಅಸುಂಡಿ ಗ್ರಾಮದ ರವಿ ಹತ್ಯೆ ಪ್ರಕರಣದಲ್ಲಿ 10 ಮಂದಿಯನ್ನು ಈಗಾಗಲೇ ಬಂಧಿಸಿರುವ ಪೊಲೀಸರು, ಘಟನೆಗೆ ಕಾರಣ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ.
ಅಸುಂಡಿ ಗ್ರಾಮದಲ್ಲಿ ಈ ಹಿಂದೆ ನಡೆದಿದ್ದ ಅತ್ಯಾಚಾರ ಪ್ರಯತ್ನ ಘಟನೆಗೆ ಸಂಬಂಧಿಸಿದಂತೆ ರವಿಯು ಮುಂದೆ ನಿಂತು ಪ್ರಕರಣ ದಾಖಲಿಸಿದ್ದ. ಇದರಿಂದ ಆರೋಪಿ ಜೈಲುಪಾಲಾಗಿದ್ದ. ಇದೇ ದ್ವೇಷದ ಹಿನ್ನೆಲೆಯಲ್ಲಿ ರವಿಯನ್ನು ಹತ್ಯೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಡಾ. ಶೋಭಾರಾಣಿ ವಿ.ಜೆ ತಿಳಿಸಿದ್ದಾರೆ.
ರವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸುಂಡಿಯ ದೊಡ್ಡ ಹೊನ್ನೂರಸ್ವಾಮಿ, ಶೇಖರ, ದುಬ್ಬ ಹೊನ್ನೂರಸ್ವಾಮಿ, ದೊಡ್ಡ ಎರೆಪ್ಪ, ನಾಗರಾಜ, ಆಟೋ ಎರಿಸ್ವಾಮಿ, ಪ್ರಕಾಶ್, ಸುರೇಂದ್ರ, ಹೊನ್ನೂರಸ್ವಾಮಿ, ಪ್ರಸಾದ್ ಎಂಬುವವರನ್ನು ಬಂಧಿಸಿರುವುದಾಗಿ ಎಸ್‌ಪಿ ತಿಳಿಸಿದರು.
ಗ್ರಾಮದಲ್ಲಿ 2024ರ ಡಿಸೆಂಬರ್‌ನಲ್ಲಿ ದುಡ್ಡಿನ ವಿಚಾರಣಕ್ಕೆ ನಡೆದಿದ್ದ ಗಲಾಟೆಯಲ್ಲಿ ಮೃತ ರವಿ ಸಂತ್ರಸ್ತರ ಪರವಾಗಿ ನಿಂತಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಗ್ರಾಮದಲ್ಲಿ ಆಗಾಗ್ಗೆ ಜಗಳಗಳಾಗಿದ್ದವು. ಈ ಮಧ್ಯೆ ಗ್ರಾಮದಲ್ಲಿ ಅತ್ಯಾಚಾರ ಪ್ರಯತ್ನವೊಂದು ನಡೆದಿತ್ತು. ಈ ಘಟನೆಯಲ್ಲಿಯೂ ಮೃತ ರವಿ ಯಾವುದೇ ಸಂಧಾನಕ್ಕೆ ಅವಕಾಶ ನೀಡದಂತೆ ಸಂತ್ರಸ್ತೆಯ ಬೆಂಬಲಕ್ಕೆ ನಿಂತು ಆರೋಪಿ ಲಿಂಗಣ್ಣ ಎಂಬುವವನ ಬಂಧನವಾಗುವಂತೆ ಮಾಡಿದ್ದ. ಇದರಿಂದ ಆಕ್ರೋಶಗೊಂಡ ವಿರೋಧಿ ಬಣ ಅ. 23ರಂದು ರವಿಯನ್ನು ಹತ್ಯೆ ಮಾಡಿದ್ದಾರೆ ಎಂದು ಎಸ್‌ಪಿ ವಿವರಿಸಿದರು.
23ರಂದು ರಾತ್ರಿ ಬೈಕ್‌ನಲ್ಲಿ ಬರುತ್ತಿದ್ದ ರವಿಯ ಮೇಲೆ ಆರೋಪಿಗಳಾದ ಶೇಖರ್ ಮತ್ತು ಸುರೇಂದ್ರ ದಾಳಿ ನಡೆಸಿದ್ದರು. ಶೇಖರ್ ಎಂಬಾತ ಸುತ್ತಿಗೆಯಿಂದ ಹಣೆಯನ್ನು ಜಜ್ಜಿದ್ದ. ಹೊನ್ನೂರು ಸ್ವಾಮಿ ಮತ್ತು ಪ್ರಸಾದ್ ಎಂಬುವವರು ದೂರದಲ್ಲಿ ನಿಂತು ಯಾರೂ ಬಾರದಂತೆ ನಿಗಾ ವಹಿಸಿದ್ದರು. ಉಳಿದವರು ಸಂಚಿನಲ್ಲಿ ಪಾಲ್ಗೊಂಡಿದ್ದರು. ಘಟನೆ ನಡೆದ ಸ್ಥಳದಲ್ಲಿ ಅಪಘಾತದ ಸನ್ನಿವೇಶ ಸೃಷ್ಟಿ ಮಾಡಲಾಗಿತ್ತು ಎಂದು ಶೋಭಾರಾಣಿ ತಿಳಿಸಿದರು.
ಘಟನೆಯ ಹಿಂದೆ ಯಾವುದೇ ರಾಜಕೀಯ ಕಾರಣಗಳು ಇಲ್ಲ ಎಂದು ಎಸ್‌ಪಿ ಸ್ಪಷ್ಟಪಡಿಸಿದರು.
ಘಟನೆ ಬಳಿಕ ಗ್ರಾಮದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿರುವುದಾಗಿಯೂ ಆರೋಪಿಗಳ ಕಡೆಯವರು ಇನ್ನೂ ಒಂದಷ್ಟು ಜನರ ಮೇಲೆ ದಾಳಿ ಮಾಡಲು ಕಾಯುತ್ತಿರುವುದಾಗಿಯೂ ಆರೋಪಿಸಿ ರವಿ ಸಂಬಂಧಿಗಳು ಸ್ನೇಹಿತರು ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದರು. ಯಾವುದೇ ಅಹಿತಕರ ಘಟನೆ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ ಎಸ್‌ಪಿ ಗ್ರಾಮದಲ್ಲಿ ಭದ್ರತೆ ನಿಯೋಜಿಸುವುದಾಗಿ ತಿಳಿಸಿದ್ದಾರೆ. ಸದ್ಯ ಗ್ರಾಮದಲ್ಲಿ ಮೀಸಲು ಪೊಲೀಸರನ್ನು ಹಾಕಲಾಗಿದೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.