ADVERTISEMENT

ಹಲ್ಲೆ: ಸಂಡೂರು ಸಿಪಿಐ ಮಹೇಶಗೌಡ ವಿರುದ್ಧ ಕ್ರಮಕ್ಕೆ ಬಂಗಾರು ಹನುಮಂತು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2025, 6:16 IST
Last Updated 18 ನವೆಂಬರ್ 2025, 6:16 IST
<div class="paragraphs"><p> ಸಂತೋಷ್ ಲಾಡ್</p></div>

ಸಂತೋಷ್ ಲಾಡ್

   

ಸಂಡೂರು: ‘ಬಳ್ಳಾರಿ ಜಿಲ್ಲೆಯ ಕೋಳುರು ಗ್ರಾಮದ ಯುವಕ ವಿವೇಕಗೌಡ ಸಚಿವ ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಲು ಹೋದಾಗ ಸಂಡೂರಿನ ಸಿಪಿಐ ಮಹೇಶಗೌಡ ವಿನಾಕಾರಣ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು  ಬಿಜೆಪಿ ರಾಜ್ಯ ಎಸ್‍ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಒತ್ತಾಯಿಸಿದರು.

ಪಟ್ಟಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿವೇಕಗೌಡ ವೈಯಕ್ತಿಕ ವಿಚಾರಕ್ಕೆ ಭೇಟಿ ಮಾಡಲು ತೆರಳಿದಾಗ ಸಂಡೂರಿನ ಸಿಪಿಐ ಮಹೇಶಗೌಡ ಈ ಯುವಕನಿಗೆ ಭೇಟಿ ಮಾಡಲು ಬಿಡದೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಗುಂಡಾವರ್ತನೆ ಮಾಡಿ ಯುವಕನ ಮೇಲೆ ದೈಹಿಕ ಹಲ್ಲೆ ನಡೆಸಿ ಎಡಗೈಗೆ ಗಾಯಮಾಡಿದ್ದಾರೆ. ನೊಂದ ಯುವಕನು ಸಿಪಿಐ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸರ್ಕಾರದ ಗೃಹ ಸಚಿವರಿಗೆ, ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಪೊಲೀಸ್ ಇಲಾಖೆಯವರು ತಕ್ಷಣ ಸಿಪಿಐ ವಿರುದ್ಧ ತನಿಖೆ ಕೈಗೊಂಡು, ಪ್ರಕರಣ ದಾಖಲಿಸಿ ಅಮಾನತ್ತುಗೊಳಿಸಿ ಯುವಕನಿಗೆ ಸೂಕ್ತ ನ್ಯಾಯ ಒದಗಿಸಬೇಕು. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಎಸ್‍ಪಿ ಡಿಐಜಿ ಕಚೇರಿಗಳ ಆವರಣದಲ್ಲಿ ಉಗ್ರಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಸಿಪಿಐ ಮಹೇಶಗೌಡ ಅವರು ಕುಡತಿನಿ, ತೋರಣಗಲ್ಲು, ಸಂಡೂರು ಸೇರಿದಂತೆ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 14 ವರ್ಷಗಳ ಕಾಲ ಒಂದೇ ಕಡೆಯಲ್ಲಿ ಸೇವೆ ಸಲ್ಲಿಸಲು ತುಕಾರಾಂ, ಸಂತೋಷ್ ಲಾಡ್ ಕಾರಣರಾಗಿದ್ದಾರೆ. ಸಿಪಿಐ ಅವರು ಕಾಂಗ್ರೆಸ್ ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ. ಎಸ್‍ಪಿ, ಐಜಿಯವರು ಮಹೇಶ ಗೌಡ ಅವರ ಕೈಗೊಂಬೆಯಂತೆ ವರ್ತನೆ ಮಾಡುತ್ತಿರುವುದು ಸರಿಯಲ್ಲ’ ಎಂದು ದೂರಿದರು.

ಯುವಕ ವಿವೇಕಗೌಡ ಮಾತನಾಡಿ, ‘ಸಂತೋಷ್ ಲಾಡ್ ಅವರನ್ನು ಭೇಟಿ ಮಾಡಲು ತೆರಳಿದಾಗ ಸಿಪಿಐ ಮಹೇಶಗೌಡ ಅವರು ನನಗೆ ಭೇಟಿ ಮಾಡಲು ಅವಕಾಶ ನೀಡದೇ ತಳ್ಳಿದ್ದರಿಂದ ನನ್ನ ಕೈಗೆ ಬಲವಾಗಿ ಗಾಯವಾಗಿದೆ. ನ್ಯಾಯಾಕ್ಕಾಗಿ ಬಳ್ಳಾರಿ ಎಸ್‍ಪಿಯವರ ಬಳಿ ಹೋದರೂ ಪ್ರಯೋಜನವಾಗಿಲ್ಲ. ಕೆಲ ಪೊಲೀಸರು ನನ್ನ ಮೇಲೆ ಗಾಂಜಾ ಸೇರಿದಂತೆ ಇತರೆ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆರೋಪಿಸಿದರು.

ಸಂಡೂರು ಬಿಜೆಪಿ ಮಂಡಲದ ಅಧ್ಯಕ್ಷ ಅಶೋಕ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಡೇದ ಸುರೇಶ್, ಉಪಾಧ್ಯಕ್ಷ ತಾಯಾಪ್ಪ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹ, ಪ್ರವೀಣ್, ಕಾರ್ಯಲಯದ ಕಾರ್ಯದರ್ಶಿ ಎನ್.ಎಚ್.ರಮೇಶ್, ಮುಖಂಡರಾದ ವಸಂತಕುಮಾರ್ ರವಿಕುಮಾರ್, ಅಡಿವೆಪ್ಪ, ಯಶೋಧಾ, ಸುಶೀಲಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.