ADVERTISEMENT

ಹೊಸಪೇಟೆ: ಸಂಕಷ್ಟದಲ್ಲಿ ಟ್ಯಾಕ್ಸಿ, ಆಟೊ ಚಾಲಕರು

ಸಾಲ ತೀರಿಸುವ ಒತ್ತಡ: ಅನಿಶ್ಚಿತತೆಯತ್ತ ಹೊರಳಿದ ಬದುಕು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 5 ಮೇ 2021, 8:45 IST
Last Updated 5 ಮೇ 2021, 8:45 IST
ಹೊಸಪೇಟೆಯ ಸ್ಟೇಷನ್‌ ರಸ್ತೆಯ ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿ ಸಾಲುಗಟ್ಟಿ ನಿಂತಿರುವ ಟ್ಯಾಕ್ಸಿಗಳು
ಹೊಸಪೇಟೆಯ ಸ್ಟೇಷನ್‌ ರಸ್ತೆಯ ಟ್ಯಾಕ್ಸಿ ಸ್ಟ್ಯಾಂಡ್‌ನಲ್ಲಿ ಸಾಲುಗಟ್ಟಿ ನಿಂತಿರುವ ಟ್ಯಾಕ್ಸಿಗಳು   

ಹೊಸಪೇಟೆ (ವಿಜಯನಗರ): ಕೋವಿಡ್‌ ಲಾಕ್‌ಡೌನ್‌ ಘೋಷಿಸಿರುವುದರಿಂದ ಟ್ಯಾಕ್ಸಿ, ಆಟೊ ಚಾಲಕರು ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಬೆಳಿಗ್ಗೆ ಆರರಿಂದ ಮಧ್ಯಾಹ್ನ 12ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಈ ವೇಳೆ ಬಹುತೇಕರು ಸ್ವಂತ ವಾಹನಗಳಲ್ಲಿ ಹೊರಬಂದು ವಸ್ತುಗಳನ್ನು ಖರೀದಿಸಿ ಮನೆ ಸೇರುತ್ತಿದ್ದಾರೆ. ಆಸ್ಪತ್ರೆ, ರೈಲು, ವಿಮಾನ ಪ್ರಯಾಣಕ್ಕೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ಆದರೆ, ಅವುಗಳ ಮೂಲಕ ಓಡಾಡುವವರ ಸಂಖ್ಯೆ ಬಹಳ ಕಡಿಮೆ ಇದೆ. ಇನ್ನೊಂದೆಡೆ ಕೋವಿಡ್‌ ಪ್ರಕರಣಗಳು, ಸಾವಿನ ಸಂಖ್ಯೆ ಒಂದೇ ಸಮನೇ ಹೆಚ್ಚಾಗುತ್ತಿರುವುದರಿಂದ ರೈಲಿನ ಮೂಲಕ ಓಡಾಡುವವರ ಸಂಖ್ಯೆಯೂ ತಗ್ಗಿದೆ. ಇದರ ನೇರ ಪರಿಣಾಮ ಟ್ಯಾಕ್ಸಿ, ಆಟೊ ಚಾಲಕರ ಮೇಲೆ ಬಿದ್ದಿದೆ.

ನಗರದಲ್ಲಿ ಐದು ಸಾವಿರಕ್ಕೂ ಅಧಿಕ ಆಟೊ, ಎರಡು ಸಾವಿರ ಟ್ಯಾಕ್ಸಿಗಳಿವೆ. ಇದರಲ್ಲಿ ಶೇ 90ರಷ್ಟು ಚಾಲಕರು ಬ್ಯಾಂಕಿನಲ್ಲಿ ಸಾಲ ಮಾಡಿ ಟ್ಯಾಕ್ಸಿ, ಆಟೊ ಖರೀದಿಸಿ ಓಡಿಸುತ್ತಿದ್ದಾರೆ. ಇನ್ನುಳಿದ ಶೇ 10ರಷ್ಟು ಮಂದಿ ಬೇರೆಯವರ ವಾಹನಗಳನ್ನು ಓಡಿಸಿ ಉಪಜೀವನ ಸಾಗಿಸುತ್ತಿದ್ದಾರೆ. ಈಗ ಇವರು ಕೆಲಸ ಇಲ್ಲದೆ ತೊಂದರೆಗೆ ಸಿಲುಕಿದ್ದಾರೆ.

ADVERTISEMENT

ಹೋದ ವರ್ಷ ಘೋಷಿಸಿದ ಲಾಕ್‌ಡೌನ್‌ನಿಂದ ತೀವ್ರ ತೊಂದರೆಗೆ ಸಿಲುಕಿದ್ದ ಚಾಲಕರು ಕೆಲ ತಿಂಗಳ ಹಿಂದೆಯಷ್ಟೇ ಚೇತರಿಸಿಕೊಳ್ಳುತ್ತಿದ್ದರು. ವಿಶ್ವ ಪ್ರಸಿದ್ಧ ಹಂಪಿ ಸನಿಹದಲ್ಲೇ ಇರುವುದರಿಂದ ವಿವಿಧ ಕಡೆಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಡಿಸೆಂಬರ್‌–ಜನವರಿಯಲ್ಲಿ ಕೋವಿಡ್‌ ತಗ್ಗಿದ್ದರಿಂದ ಪ್ರವಾಸೋದ್ಯಮ ಒಂದು ಹಂತಕ್ಕೆ ಬಂದಿತ್ತು. ಚಾಲಕರಿಗೆ ಕೈತುಂಬ ಕೆಲಸವೂ ಸಿಕ್ಕಿತ್ತು. ಇನ್ನೇನು ಎಲ್ಲ ಸರಿ ಹೋಗುತ್ತದೆ ಎಂದುಕೊಳ್ಳುತ್ತಿರುವಾಗಲೇ ಪುನಃ ‘ಕೋವಿಡ್ ಕರ್ಫ್ಯೂ’ ಘೋಷನೆಯಾಗಿದೆ.

‘ನಿತ್ಯ ಕಾರು ತೆಗೆದುಕೊಂಡು ಟ್ಯಾಕ್ಸಿ ಸ್ಟ್ಯಾಂಡಿಗೆ ಬರುವುದು, ಕಾದು ಕಾದು ವಾಪಸ್‌ ಹೋಗುವುದೇ ಕೆಲಸವಾಗಿದೆ. ಒಂದೆರಡು ಟ್ಯಾಕ್ಸಿಗೆ ಕೆಲಸ ಸಿಕ್ಕರೆ ಹೆಚ್ಚು. ಸಾಲದ ಕಂತು ತೀರಿಸಲು ಆಗುತ್ತಿಲ್ಲ. ಮನೆ ನಡೆಸುವುದು ಕೂಡ ಕಷ್ಟವಾಗಿದೆ’ ಎಂದು ಟ್ಯಾಕ್ಸಿ ಚಾಲಕ ರಾಮು ಗೋಳು ತೋಡಿಕೊಂಡರು.

‘ಹೋದ ವರ್ಷ ಲಾಕ್‌ಡೌನ್‌ ಘೋಷಿಸಿದಾಗ ಸಾಲದ ಕಂತು ಮುಂದೂಡಲಾಗಿತ್ತು. ಆದರೆ, ಬ್ಯಾಂಕಿನವರು ಅದನ್ನು ಜಾರಿಗೆ ತರಲಿಲ್ಲ. ಬದಲಿಗೆ ಕಂತು ಕಟ್ಟದವರಿಗೆ ಬಡ್ಡಿ ಹಾಕಿ ನೋಟಿಸ್‌ ಕಳುಹಿಸಿದರು. ಸಾಲದ ಕಂತು ಕಟ್ಟಲು ಆಗದವರ ವಾಹನಗಳನ್ನು ಬ್ಯಾಂಕಿನವರು ವಶಪಡಿಸಿಕೊಂಡಿದ್ದರು. ಈಗ ಮತ್ತೆ ಅವರ ಬದುಕು ಅನಿಶ್ಚಿತತೆಯತ್ತ ಹೊರಳಿದೆ’ ಎಂದು ಫೆಡರೇಶನ್‌ ಆಫ್‌ ಕರ್ನಾಟಕ ಆಟೊ ರಿಕ್ಷಾ ಡ್ರೈವರ್ಸ್‌ ಯೂನಿಯನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ. ಸಂತೋಷ್‌ ಕುಮಾರ್‌ ತಿಳಿಸಿದ್ದಾರೆ.

‘ಕಳೆದ ವರ್ಷ ಆಟೊ ಚಾಲಕರಿಗೆ ಘೋಷಿಸಿದ್ದ ಪರಿಹಾರ ಸಿಕ್ಕಿದ್ದು ಬೆರಳೆಣಿಕೆಯಷ್ಟು ಚಾಲಕರಿಗೆ ಮಾತ್ರ. ಹಳೆಯದೇ ಕೊಟ್ಟಿಲ್ಲ. ಹೀಗಿರುವಾಗ ಮತ್ತೆ ಪರಿಹಾರ ಕೊಡುತ್ತಾರೆ ಎನ್ನುವ ಭರವಸೆ ಇಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.