ಬಳ್ಳಾರಿ: ಅಯೋಧ್ಯೆ ರಾಮಮಂದಿರದಲ್ಲಿ ಸೋಮವಾರ ನಡೆದ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಸಮಯದಲ್ಲಿ ಬಳ್ಳಾರಿ ಜಿಲ್ಲೆಯಾದ್ಯಂತ ರಾಮನ ಭಜನೆ, ವಿಶೇಷ ಪೂಜೆ, ಮೆರವಣಿಗೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.
ಕೆಲವೆಡೆ ಎಲ್‌ಇಡಿ ಪರದೆ ಮೇಲೆ ಅಯೋಧ್ಯೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಲ್ಲಿ ಯುವಕರು, ಮಕ್ಕಳು ಜೈ ಶ್ರೀರಾಮ್ ಘೋಷಣೆ ಕೂಗಿದರು. ವಿವಿಧೆಡೆಗಳಲ್ಲಿ ರಾಮನ ವೇಷ ಧರಿಸಿ ಮಕ್ಕಳು ಸಂಭ್ರಮಿಸಿದರು.
ರಾಮಮಂದಿರ, ಕೃಷ್ಣ ಮಂದಿರ ಒಳಗೊಂಡು ಎಲ್ಲ ದೇಗುಲಗಳಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಯುವಕರು ಕೇಸರಿ ಧ್ವಜ ಹಿಡಿದು ಬಳ್ಳಾರಿ ನಗರದಾದ್ಯಂತ ಬೈಕ್ ರ್‍ಯಾಲಿ ಮಾಡಿದರು. ಮಹಿಳೆಯರು ವಿವಿಧ ದೇಗುಲಗಳಲ್ಲಿ ಭಜನೆ ಮಾಡಿದರು.
ಸುಪ್ರಭಾತ, ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಕೃಷ್ಣಾರತಿ, ಮಹಾಭಿಷೇಕಗಳನ್ನು ಮಾಡಿ ರಾಮ ನಾಮ ಜಪಿಸಲಾಯಿತು. ರಾಮಮಂದಿರಗಳಲ್ಲಿ ಶಾಸಕ ಭರತ್‌ರೆಡ್ಡಿ, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಪ್ರಸಾದದ ವ್ಯವಸ್ಥೆ ಮಾಡಿದ್ದರು. ಮೋತಿ ವೃತ್ತದಲ್ಲಿರುವ ಶ್ರೀರಾಮ ಮಂದಿರ 250 ವರ್ಷ ಇತಿಹಾಸ ಹೊಂದಿದ್ದು, ‘ಭಕ್ತರ ಇಷ್ಟಾರ್ಥ ಸಿದ್ಧಿಯಾಗಿದೆ’ ಎಂದು ಅರ್ಚಕರು ತಿಳಿಸಿದರು.
ಇಲ್ಲಿನ ರಾಯಲ್ ಕಾಲನಿಯ ಕೃಷ್ಣ ಮಂದಿರದಲ್ಲಿ ಸಂಭ್ರಮಾಚರಣೆ ಮಾಡಲಾಯಿತು. ಬೆಳಗ್ಗೆಯಿಂದಲೇ ಮಹಿಳೆಯರು ಅಯೋಧ್ಯೆ ಮಂದಿರ ಸೇರಿ ಬಗೆ ಬಗೆಯ ರಂಗೋಲಿಗಳನ್ನು ಹಾಕುವ ಮೂಲಕ ರಾಮಮಂದಿರ ಪ್ರತಿಷ್ಠಾಪನೆ ಕಾರ್ಯಕ್ರಮದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
ಅತ್ತ ರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಕೃಷ್ಣನಿಗೆ ಮಹಾ ಮಂಗಳಾರತಿ ಮಾಡಿದ್ದಷ್ಟೇ ಅಲ್ಲದೆ, ಪಟಾಕಿ ಸಿಡಿಸಿ ಯುವಕರು ಸಂಭ್ರಮಿಸಿದರು. ಮಕ್ಕಳು, ಮಹಿಳೆಯರು ರಾಮನ ಹಾಡಿಗೆ ನೃತ್ಯ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.