ಬಳ್ಳಾರಿ: ‘ನೀವೆಷ್ಟು ತುಳಿದರೂ, ಎಷ್ಟು ಆರೋಪಗಳನ್ನು ಮಾಡಿದರೂ ನಾನು ಚೆಂಡಿನಂತೆ ಪುಟಿದೇಳುವೆ’ ಎಂದು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ನಾಗೇಂದ್ರ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರವನ್ನು ಬಿಜೆಪಿ ನಾಯಕರು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಳ್ಳಾರಿ ಬಿಜೆಪಿ ನಾಯಕರೂ ಸರ್ಕಾರ ಮತ್ತು ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ಧಾರೆ. ನಮ್ಮನ್ನು ನಿಂಧಿಸದಿದ್ದರೆ ಅವರಿಗೆ ಜೀರ್ಣವೇ ಆಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.
‘ಕಳೆದ ಎರಡು ಚುನಾವಣೆಗಳನ್ನು ಸೋತಿರುವ ಶ್ರೀರಾಮುಲುಗೆ ಬುದ್ಧಿ ಬಂದಿಲ್ಲ. ಬಳ್ಳಾರಿಯಲ್ಲಿ ತಾನೇ ಇರಬೇಕು ಎಂಬುದು ರಾಮುಲು ಆಸೆ. ಅವರ ಅವಧಿಯಲ್ಲಿ ಬಳ್ಳಾರಿಯಲ್ಲಿ ಅಶಾಂತಿ ಇತ್ತು. ಅಭಿವೃದ್ಧಿ ಆಗಿರಲಿಲ್ಲ. ಅದಕ್ಕಾಗಿಯೇ ಅವರು ಸೋತಿದ್ದಾರೆ. ಈಗ ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ಎಷ್ಟು ಬಾರಿ ತುಳಿದರೂ ಪುಟಿದೆದ್ದು ಬರುತ್ತೇನೆ’ ಎಂದರು.
‘ವಾಲ್ಮೀಕಿ ಹಗರಣದಲ್ಲಿ ಸಿಬಿಐ ನನಗೇನೂ ನೋಟಿಸ್ ಕೊಟ್ಟಿಲ್ಲ. ಕೊಟ್ಟರೆ ತನಿಖೆಗೆ ಸಹಕರಿಸುವೆ. ನಿಗಮದಿಂದ ಹೊರಹೋಗಿದ್ದ ₹84.75 ಕೋಟಿ ಹಣ ಮತ್ತೆ ಹಿಂದಕ್ಕೆ ತರಲಾಗಿದೆ’ ಎಂದು ತಿಳಿಸಿದರು.
‘ಬಳ್ಳಾರಿಯಲ್ಲಿ ಗಾಂಜಾ, ಇಸ್ಪೀಟ್, ಮಟ್ಕಾ, ನಡೆಯುತ್ತಿದೆ. ಅದನ್ನು ಮಟ್ಟ ಹಾಗಬೇಕು’ ಎಂಬ ಶ್ರೀರಾಮುಲು ಹೇಳಿಕೆಯನ್ನು ನಾನು ಒಪ್ಪುತ್ತೇನೆ. ತಪ್ಪಿತಸ್ಥರು ಯಾರೇ ಇದ್ದರೂ ಅವರನ್ನು ಶಿಕ್ಷಿಸಲೇಬೇಕು. ಅದಕ್ಕಾಗಿಯೇ ಮನೆ ಮನೆಗೆ ಪೋಲೀಸ್ ಆರಂಭಿಸಿದ್ದೇವೆ’ ಎಂದು ಅವರು ತಿಳಿಸಿದರು.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಒಂದು ಸಭೆ ಮಾಡಿದ್ದಾರೆ. ಸಮ್ಮೇಳನ ತರಲು ನಾನು ಪ್ರಯತ್ನಪಟ್ಟಿದ್ದೇನೆ. ಎಲ್ಲಿಯೂ ಕಂಡು ಕೇಳರಿಯದಂತೆ ಅದ್ಭುತವಾಗಿ ಸಮ್ಮೇಳನ ಮಾಡಲಿದ್ದೇವೆ ಎಂದರು. ‘ಕೆಡಿಪಿ ಸಭೆಗೆ ಜಮೀರ್ ಬಾರದೇ ಇರಲು ರಾಜಕೀಯ ಕಾರಣಗಳೇನು ಇಲ್ಲ’ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ‘ಸುಧಾ ಕ್ರಾಸ್‌ನಲ್ಲಿ ರೈಲ್ವೆ ಬ್ರಿಡ್ಜ್ ಆದರೆ ಅಲ್ಲಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಡಿಎಂಎಫ್‌ನ ಕ್ರಿಯಾಯೋಜನೆಯನ್ನು ಈ ವರ್ಷ ತಯಾರಿಸಲಾಗುತ್ತದೆ’ ಎಂದು ಇದೇ ವೇಳೆ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.