ADVERTISEMENT

ಬಳ್ಳಾರಿ | ಹಿಂದುಳಿದ ವರ್ಗಗಳ ಸಮೀಕ್ಷೆ ವ್ಯವಸ್ಥಿತವಾಗಿರಲಿ: ಪ್ರಶಾಂತ್ ಕುಮಾರ್

ಸಮನ್ವಯ ಸಮಿತಿ ಸಭೆಯಲ್ಲಿ ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 4:11 IST
Last Updated 2 ಸೆಪ್ಟೆಂಬರ್ 2025, 4:11 IST
ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು
ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು   

ಬಳ್ಳಾರಿ: ‘ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ಕಾರ್ಯವು ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ನಡೆಯಬೇಕು’ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ವಿವಿಧ ಅಧಿಕಾರಿಗಳನ್ನು ಒಳಗೊಂಡ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸಮೀಕ್ಷೆಯ ಮೊದಲ ಹಂತದಲ್ಲಿ ಈಗಾಗಲೇ ಎಲ್ಲ ಮನೆಗಳನ್ನು ಜಿಯೋ ಟ್ಯಾಗಿಂಗ್ ಮಾಡುವ ಕಾರ್ಯ ಪ್ರಾರಂಭಿಸಿದೆ. ಯಾವುದೇ ಮನೆಗಳು ತಪ್ಪಿ ಹೋಗದಂತೆ ಯಶಸ್ವಿಯಾಗಿ ಸಮೀಕ್ಷೆ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

‘ಎರಡನೇ ಹಂತದಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7 ರವರೆಗೆ ಸಮೀಕ್ಷಾ ಕಾರ್ಯ ನಡೆಯಲಿದೆ. ಸಂಬಂಧಿಸಿದ ಅಧಿಕಾರಿಗಳು ಸರ್ವೇ ಕಾರ್ಯಕ್ಕೆ ಗಣತಿದಾರರನ್ನು ನೇಮಿಸಿ ಪಟ್ಟಿಯನ್ನು ಅಂತಿಮಗೊಳಿಸಬೇಕು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

‘ಇಂಧನ ಇಲಾಖೆಯು ಮನೆಗಳ ಆರ್‌ಆರ್ ನಂಬರ್‌ಗಳಿಗೆ ಜಿಯೋ ಟ್ಯಾಗಿಂಗ್ ಮಾಡಿ, ಶೇಕಡಾ ನೂರರಷ್ಟು ಪ್ರಗತಿ ಸಾಧಿಸಬೇಕು. ಜಿಯೋ ಟ್ಯಾಗ್ ಮಾಡಿದ ಮನೆಗಳಿಗೆ ಸ್ಟಿಕರ್ ಅಂಟಿಸಬೇಕು. ಸಮೀಕ್ಷೆ ಕಾರ್ಯಕ್ಕಿಂತ ಮುನ್ನ ಆರ್‌ಆರ್ ನಂಬರ್ ಗಳನ್ನು ಗುರುತಿಸುವ ಕಾರ್ಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ 33 ಸಾವಿರ ಮನೆಗಳ ಆರ್‌ಆರ್ ನಂಬರ್ ಸಮೀಕ್ಷೆಯಾಗಿದೆ’ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಸಾರ್ವಜನಿಕರ ಸಹಕಾರ ಅಗತ್ಯ: ಸಮೀಕ್ಷೆ ಕಾರ್ಯವನ್ನು 65 ಪ್ರಶ್ನಾವಳಿಯನ್ನೊಳಗೊಂಡ ತಂತ್ರಾಂಶದ ಮೂಲಕ ನಡೆಸಲಾಗುತ್ತದೆ. ಕಸ ವಿಲೇವಾರಿ ವಾಹನಗಳ ಮೂಲಕ ಜಿಂಗಲ್ ಅಡಿಯೋ ಪ್ರಕಟಿಸಿ,  ಈ ಬಗ್ಗೆ ಪ್ರಚಾರ ನೀಡಬೇಕು. ಸಮೀಕ್ಷಾ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.

ಮೊದಲ ಹಂತದ ಸರ್ವೆಯಲ್ಲಿ ಯಾವುದೇ ಕುಟುಂಬ ಕೈ ಬಿಟ್ಟು ಹೋಗಬಾರದು. ಇದರಿಂದ 2ನೇ ಹಂತದಲ್ಲಿ ನಡೆಯುವ ಸಮೀಕ್ಷೆ ವ್ಯವಸ್ಥಿತ ವೈಜ್ಞಾನಿಕ ನಿಖರವಾಗಿ ಕಾರ್ಯಗತಗೊಳಿಸಬಹುದು. 
ಪ್ರಶಾಂತ್‌ ಕುಮಾರ್‌ ಮಿಶ್ರಾ ಜಿಲ್ಲಾಧಿಕಾರಿ 

ಆರ್‌ಆರ್ ಸಂಖ್ಯೆ ಒದಗಿಸಿ 

‘ಸಂಡೂರು ತಾಲ್ಲೂಕು ವ್ಯಾಪ್ತಿಯ ಜಿಂದಾಲ್ ಟೌನ್ ಶಿಪ್ ವ್ಯಾಪ್ತಿಯ ಮನೆಗಳಿಗೆ ಆರ್‌ಆರ್ ನಂಬರ್ ನೀಡಿರುವುದಿಲ್ಲ. ಅಲ್ಲಿನ ಗ್ರಾ.ಪಂ ಅಧಿಕಾರಿಗಳು ಕಂದಾಯ ಅಧಿಕಾರಿಗಳು ಸಮೀಕ್ಷೆ ನಡೆಸಿ ಆರ್‌ಆರ್ ನಂಬರ್ ಇಲ್ಲದ ಮನೆಗಳಿಗೆ ನಂಬರ್ ನೀಡಬೇಕು’ ಎಂದು ಸಂಡೂರಿನ ತಹಶೀಲ್ದಾರ್‌ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

150 ಕುಟುಂಬಕ್ಕೆ ಒಬ್ಬ ಗಣತಿದಾರ 

ಜಿಲ್ಲೆಯಲ್ಲಿ 4 ಲಕ್ಷ ಕುಟುಂಬಗಳು ಇರುವುದಾಗಿ ಅಂದಾಜಿಸಲಾಗಿದೆ.  150 ಕುಟುಂಬಕ್ಕೆ ಒಬ್ಬ ಗಣತಿದಾರರಂತೆ 2000 ಕ್ಕೂ ಹೆಚ್ಚು ಗಣತಿದಾರರು ಮತ್ತು ಪ್ರತಿ 20 ಗಣತಿದಾರಿಗೆ ಒಬ್ಬರು ಮೇಲ್ವಿಚಾರಕರನ್ನು ಮತ್ತು ಜಿಲ್ಲೆಗೆ 50 ಮಾಸ್ಟರ್ ಟ್ರೈನರ್‌ಗಳನ್ನು ಗುರುತಿಸಿ ನಿಗದಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.