ಬಳ್ಳಾರಿ: ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆ ವಿಳಂಬ ವಿರೋಧಿಸಿ ಸೆಪ್ಟೆಂಬರ್ 26ರಂದು ನಗರದಲ್ಲಿ ಪ್ರತಿಭಟನೆ ನಡೆಸುವುದಾಗಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ತಿಳಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಪ್ರಮೋದ್, ‘ಜಿಲ್ಲೆಯಲ್ಲಿ ಗುತ್ತಿಗೆ ನೌಕರರ ಸಂಘ ರಚಿಸಬೇಕೆಂದು ಕಾರ್ಮಿಕ ಸಚಿವರೇ ಹೇಳಿದ್ದಾರೆ. ಜಿಲ್ಲೆಯ 3,500 ಗುತ್ತಿಗೆ ನೌಕರರು ಸಂಘದ ಸದಸ್ಯರಾಗಿದ್ದಾರೆ. ಆದರೂ, ಸಂಘ ರಚನೆ ವಿಳಂಬವಾಗುತ್ತಿದ್ದು, ಇದರ ಹಿಂದೆ ಏಜೆನ್ಸಿಗಳ ಲಾಭಿ ಇರುವ ಅನುಮಾನವಿದೆ’ ಎಂದರು.
‘ರಾಜ್ಯದಲ್ಲಿ ಕನಿಷ್ಠ ವೇತನವನ್ನು ₹21 ಸಾವಿರಕ್ಕೆ ಹೆಚ್ಚಿಸುವ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಿದ್ದರೂ, ಇದುವರೆಗೆ ಜಾರಿಗೆಯಾಗಿಲ್ಲ. ಕನಿಷ್ಠ ವೇತನ ಜಾರಿಗೆ ಮಾಲೀಕರೂ ಒಪ್ಪುತ್ತಿಲ್ಲ. ಸರ್ಕಾರವಾದರೂ ಕಾರ್ಮಿಕರ ಪರ ನಿಲ್ಲಬೇಕು’ ಎಂದು ಒತ್ತಾಯಿಸಿದರು.
‘ಬಳ್ಳಾರಿ ನಗರದಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಜಿಲ್ಲಾಡಳಿತ ಈಗಾಗಲೇ ಭೂಮಿ ನೀಡಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಕಳುವುದಾಗಿ ಹೇಳಿತ್ತು. ಆದರೆ, ಈವರೆಗೆ ಸ್ಥಾಪನೆಯಾಗಿಲ್ಲ’ ಎಂದರು.
ಎಐಯುಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ದೇವದಾಸ್ ಮಾತನಾಡಿದರು. ಹೋರಾಟಗಾರರಾದ ಶಾಂತಿ, ಸುರೇಶ್, ಎರ್ರಿಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.