ಬಳ್ಳಾರಿ: ಅಕ್ರಮದ ಆರೋಪ, ವಿವಿಧ ತನಿಖೆ, ಮತ್ತು ರಾಜಕೀಯ ಕಾರಣಗಳಿಗಾಗಿ 2024ರ ಜುಲೈನಿಂದ ಸ್ತಬ್ಧವಾಗಿದ್ದ ‘ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)’ ಇನ್ನಾದರೂ ಕಾರ್ಯ ಚಟುವಟಿಕೆ ಆರಂಭಿಸುವುದೇ ಎಂದು ನಾಗರಿಕರು ಎದುರು ನೋಡುತ್ತಿದ್ದಾರೆ.
‘ಬುಡಾದಲ್ಲಿ ಅಕ್ರಮ ನಡೆಯುತ್ತಿದೆ, ಅಧ್ಯಕ್ಷರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿ ಜಿಲ್ಲೆಯ ಇಬ್ಬರು ಶಾಸಕರು ಸರ್ಕಾರಕ್ಕೆ ದೂರು ನೀಡಿದ್ದರು. ಹೀಗಾಗಿ ‘ನಗರಾಭಿವೃದ್ಧಿ ಇಲಾಖೆ’ಯು ‘ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯ’ದ ಮೂಲಕ ತನಿಖೆ ನಡೆಸಿತ್ತು. ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಆದರೂ ಯಾವುದೇ ನಿರ್ಧಾರ ಕೈಗೊಳ್ಳದೇ ಇದ್ದ ನಗರಾಭಿವೃದ್ಧಿ ಇಲಾಖೆ, ಇತ್ತೀಚೆಗೆ ತನ್ನ ನಿರ್ಧಾರವನ್ನೂ ಪ್ರಕಟಿಸಿದೆ.
2024ರ ಮಾರ್ಚ್ ಮತ್ತು ಜುಲೈ ತಿಂಗಳ ಸಭಾ ನಿರ್ಣಯಗಳನ್ನು ಇಲಾಖೆ ರದ್ದು ಮಾಡಿದೆ. ಆದೇಶ ಹೊರಬೀಳುವ ವರೆಗೆ ಸಭೆ ನಡೆಸದೇ ಸ್ತಬ್ಧವಾಗಿದ್ದ ಬುಡಾ, ಇನ್ನಾದರೂ ಸಭೆ ನಡೆಯಲಿ ಎಂದು ಹಲವು ಆಗ್ರಹಿಸಿದ್ದಾರೆ.
ಸಭೆ ನಡೆಯದ ಕಾರಣ ಬುಡಾ ಯಾವುದೇ ಅಭಿವೃದ್ಧಿ ಕಾರ್ಯಗಳ ಕುರಿತು ತೀರ್ಮಾನ ಕೈಗೊಳ್ಳಲು ಆಗಿಲ್ಲ. ಹೊಸ ಬಡಾವಣೆಗಳಿಗೆ ಅನುಮತಿ ಕೋರಿ ಬಂದ ಅರ್ಜಿಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗಿಲ್ಲ. ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಬಿಲ್ಡರ್‌ಗಳಿಗೂ ಆಗಿಲ್ಲ. ಇದು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಜನರ ಮೇಲೆ ಪರಿಣಾಮ ಬೀರುವಂತೆ ಆಗಿದೆ. ಬಳ್ಳಾರಿಯಲ್ಲಿ ಖಾಸಗಿ ಬಡಾವಣೆಗಳ ನಿವೇಶನಗಳ ದರ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.
ರದ್ದಾಗಿದ್ದ ಸಭೆ: ತನಿಖೆ ನಡೆಯುತ್ತಿದ್ದರೂ, ಸಭೆಗಳನ್ನು ನಡೆಸಬಾರದು ಎಂದು ಸರ್ಕಾರವೇನೂ ಹೇಳಿರಲಿಲ್ಲ. ಆದರೂ 2024ರ ಆಗಸ್ಟ್‌ನಿಂದ ಸಭೆಗಳು ನಡೆದೇ ಇರಲಿಲ್ಲ. ಮಾರ್ಚ್ 5ರಂದು ಸಭೆ ನಿಗದಿ ಮಾಡಲಾಯಿತಾದರೂ, ಅದೂ ರದ್ಧಾಗಿತ್ತು. ಈ ತಿಂಗಳು ಈಗಾಗಲೇ 15 ದಿನ ಕಳೆದರೂ ಸಭೆ ನಡೆಯುವ ಮುನ್ಸೂಚನೆ ಕಂಡಿಲ್ಲ. ಅಡೆತಡೆಗಳೆಲ್ಲ ನಿವಾರಣೆಯಾದ ಮೇಲೂ ಸಭೆ ಕರೆಯಲು ವಿಳಂಬವೇಕೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು ಕಳೆದ ಐದು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನೂ ಕೈಗೊಂಡಿಲ್ಲ. ಇನ್ನೊಂದೆಡೆ, ತಾನೇ ಬಡಾವಣೆಯನ್ನು ಅಭಿವೃದ್ಧಿಪಡಿಸಿ ಒಂದೇ ಒಂದು ನಿವೇಶನವನ್ನೂ ಜನರಿಗೆ ಹಂಚಿಕೆ ಮಾಡಿಲ್ಲ. ವಿಧಾನಸಭೆಯಲ್ಲಿ ಸರ್ಕಾರವೇ ಒದಗಿಸಿರುವ ದಾಖಲೆಗಳಿಂದ ಈ ಅಂಶ ಬಯಲಾಗಿದೆ.
ಕೇವಲ ಖಾಸಗಿ ಬಡಾವಣೆಗಳಿಗೆ ಅನುಮೋದನೆ ನೀಡುವುದರಲ್ಲೇ ಪ್ರಾಧಿಕಾರ ಮುಳುಗಿದೆ. ನಗರದ ಅಭಿವೃದ್ಧಿಗೆ ಪ್ರಾಧಿಕಾರವೂ ಇತರ ಇಲಾಖೆಗಳೊಂದಿಗೆ ಕೈ ಜೋಡಿಸಬೇಕು. ಬಡವರಿಗೆ ಕಡಿಮೆ ದರದಲ್ಲಿ ಸೂರು ಸಿಗುವಂತೆ ಮಾಡಲು ಯೋಜನೆಗಳನ್ನು ರೂಪಿಸಬೇಕು ಎಂಬ ಒತ್ತಾಯಗಳೂ ಇವೆ.
ಗಮನಿಸಬೇಕಾದ ಅಂಶವೆಂದರೆ, ರಾಜ್ಯದ ಬಹುತೇಕ ಪ್ರಾಧಿಕಾರಿಗಳೂ ಇದೇ ಪರಿಪಾಠದಲ್ಲಿ ತೊಡಗಿವೆ.
ಈ ತಿಂಗಳು ಸಭೆ ನಡೆಸಲು ಈಗಾಗಲೇ ಆಯುಕ್ತರಿಗೆ ಪ್ರಸ್ತಾವನೆಯನ್ನು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಳುಹಿಸಲಾಗಿದೆ. ಅವರು ಸಮಯ ನಿಗದಿ ಮಾಡಿದರೆ ಸಭೆ ನಡೆಸಲಾಗುತ್ತದೆ.– ಜೆ.ಎಸ್ ಆಂಜನೇಯಲು ಬುಡಾ ಅಧ್ಯಕ್ಷ
ಸಭೆ ನಡೆಸಲು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಇನ್ನೊಂದೆರಡು ದಿನದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡು ದಿನಾಂಕ ನಿಗದಿ ಮಾಡಲಾಗುತ್ತದೆ.– ಖಲೀಲ್ ಸಾಬ್ ಬುಡಾ ಆಯುಕ್ತ
ಬುಡಾಕ್ಕೆ ಪೂರ್ಣ ಪ್ರಮಾಣದ ಆಯುಕ್ತರೇ ಸಿಗುತ್ತಿಲ್ಲ. ಹೀಗಿದ್ದ ಮೇಲೆ ಪ್ರಾಧಿಕಾರ ಸಮರ್ಥವಾಗಿ ಕೆಲಸ ಮಾಡಲು ಹೇಗೆ ಸಾಧ್ಯ. ಸಚಿವರು ಇದನ್ನು ಗಮನಿಸಿಲ್ಲವೇ? ಹೀಗಿದ್ದ ಮೇಲೆ ಪ್ರಾಧಿಕಾರಿದಂದ ಒಳ್ಳೆ ಕೆಲಸ ನಿರೀಕ್ಷಿಸುವುದು ಹೇಗೆ?ಮೇಕಲ ಈಶ್ವರ ರೆಡ್ಡಿ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.