ಬಳ್ಳಾರಿ: ಅಪರಿತ ಮಹಿಳೆಯೊಬ್ಬರು ತನ್ನ ಒಂದೂವರೆ ತಿಂಗಳ ಮಗುವನ್ನು ಶುಕ್ರವಾರ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಬೆಣಕಲ್ಲು ಗ್ರಾಮದ ಶ್ರೀದೇವಿ ಎಂಬುವವರು ಬ್ರೂಸ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜುಲೈ 28ರಂದು ಮಹಿಳೆಗೆ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಮಗುವಿನ ಜನ್ಮ ಪ್ರಮಾಣಪತ್ರ ಪಡೆದುಕೊಳ್ಳಲೆಂದು ಶುಕ್ರವಾರ ಮತ್ತೆ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ಅಲ್ಲಿಗೆ ಬಂದ ಮಹಿಳೆಯೊಬ್ಬರು ಪ್ರಮಾಣಪತ್ರವನ್ನು ಮಹಾನಗರ ಪಾಲಿಕೆ ಕಚೇರಿಯಲ್ಲಿ ಕೊಡುತ್ತಾರೆ ಎಂದು ಹೇಳಿ ನಂಬಿಸಿ ಅಲ್ಲಿಗೆ ಕರೆದೊಯ್ದಿದ್ದಾರೆ. ಪಾಲಿಕೆ ಕಚೇರಿಯಲ್ಲಿ ಬಹುಕಾಲ ಒಂದೇ ಸ್ಥಳದಲ್ಲಿ ಶ್ರೀದೇವಿಯನ್ನು ಕೂರಿಸಿಕೊಂಡಿದ್ದರು. ಶ್ರೀದೇವಿ ಶೌಚಾಲಯಕ್ಕೆ ಹೋಗಲೆಂದು ಮಗುವನ್ನು ಅಪರಿಚಿತ ಮಹಿಳೆ ಬಳಿ ಕೊಟ್ಟು ಹೋಗಿದ್ದಾರೆ. ಶೌಚಾಲಯದಿಂದ ಬಂದು ನೋಡಿದಾಗ ಮಗು ಇರಲಿಲ್ಲ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
12 ಗಂಟೆಯೊಳಗೆ ಮಗು ಪತ್ತೆ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬ್ರೂಸ್‌ಪೇಟೆ ಪೊಲೀಸರು, ಶನಿವಾರ ಬೆಳಿಗ್ಗೆ ಹೊತ್ತಿಗೆ ಮಗುವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮಗು ಪೋಷಕರ ಮಡಿಲು ಸೇರಿದೆ.
‘ಮಗುವನ್ನು ಪತ್ತೆ ಮಾಡಲಾಗಿದೆ. ಆದರೆ, ಕಳ್ಳತನದ ಉದ್ದೇಶವೇನು? ಇದರಲ್ಲಿ ಯಾರಿದ್ದಾರೆ? ವ್ಯವಸ್ಥಿತ ಜಾಲವೇ ಎಂಬುದರ ಬಗ್ಗೆ ಚಿಂತನೆ ನಡೆಸಿದ್ದೇವೆ. ಇದೇ ನಿಟ್ಟಿನಲ್ಲೇ ಮಹಿಳೆಯನ್ನು ವಿಚಾರಣೆ ಮಾಡುತ್ತಿದ್ದೇವೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.