
ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭೂ ಕಬಳಿಕೆ ಪ್ರಕರಣಗಳು ಬಯಲಾದ ಬೆನ್ನಿಗೇ ಈಗ ತೆರಿಗೆ ಚಲನ್ ಅಕ್ರಮವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಪಾಲಿಕೆಯ ವಲಯ ಕಚೇರಿ–3ನ ದ್ವಿತೀಯ ದರ್ಜೆ ಸಹಾಯಕ ಸಾಯಿನಾಥ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವಲಯ–3 ಆಯುಕ್ತ ಮಂಜುನಾಥ ಟಿ.ಎ ಅವರು ನೀಡಿದ ದೂರು ಆಧರಿಸಿ ಕೌಲ್ ಬಜಾರ್ ಠಾಣೆಯ ಪೊಲೀಸರು ಫೆ. 27ರಂದು ಪ್ರಕರಣ ದಾಖಲು ಮಾಡಿದ್ದಾರೆ.
ಪ್ರಕರಣದ ವಿವರ: ಜೆ.ರಾಜಲಕ್ಷ್ಮಿ ಎಂಬುವವರು ಕೊಳಗಲ್ ಗ್ರಾಮದ ಫೂಡ್ ಗೋಡನ್ ಹಿಂಬಾಗದಲ್ಲಿರುವ ತಮ್ಮ ಖಾಲಿ ನಿವೇಶನಕ್ಕೆ ಆಸ್ತಿ ತೆರಿಗೆ ಪಾವತಿ ಮಾಡಲು 2025ರ ಮಾರ್ಚ್ 29ರಂದು ವಲಯ ಕಚೇರಿ–3ಗೆ ಹೋಗಿದ್ದರು. ಅಲ್ಲಿದ್ದ ಸಿಬ್ಬಂದಿ ಆನ್‌ಲೈನ್‌ನಲ್ಲಿ ತೆರಿಗೆ ಪಾವತಿ ಮಾಡಲು ತಿಳಿಸಿದ್ದರು. ಆಗ ದ್ವಿತೀಯ ದರ್ಜೆ ಸಹಾಯಕ ಸಾಯಿನಾಥ ‘ಆನ್‌ಲೈನ್ ಪಾವತಿ ವ್ಯವಸ್ಥೆಯಲ್ಲಿ ತೊಂದರೆ ಇದೆ. ಹಣ ನನ್ನ ಕೈಗೆ ಕೊಡಿ. ನಾನು ಕಟ್ಟುತ್ತೇನೆ’ ಎಂದು ಹೇಳಿದ್ದರು. ಅವರ ಮಾತು ನಂಬಿದ್ದ ರಾಜಲಕ್ಷ್ಮಿ ₹15000 ಹಣವನ್ನು ಫೋನ್ ಪೇ ಮೂಲಕ ಸಾಯಿನಾಥ ಅವರಿಗೆ ನೀಡಿದ್ದರು.
ರಾಜಲಕ್ಷ್ಮೀ ಅವರಿಂದ ಹಣ ಪಡೆದಿದ್ದರೂ, ಸಾಯಿನಾಥ ತೆರಿಗೆ ಪಾವತಿ ಮಾಡಿ ರಸೀದಿಯನ್ನು ನೀಡಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡುವುದಾಗಿ ರಾಜಲಕ್ಷ್ಮೀ ಅವರ ಪುತ್ರ ಸುನೀಲ್ ಜೋಶಿ ಎಚ್ಚರಿಕೆ ನೀಡಿದ್ದರು. ಇದರಿಂದ ಬೆದರಿದ ಸಾಯಿನಾಥ ಫೆ. 10ರಂದು ವಾಟ್ಸ್ ಆಪ್ ಮುಖಾಂತರ ಚಲನ್ ಹಾಗೂ ಹಣವನ್ನು ಪಾವತಿ ಮಾಡಿರುವ ಕುರಿತ ರಸೀದಿಯನ್ನು ಕಳುಹಿಸಿದ್ದರು. ಆದರೆ, ಆನ್‌ಲೈನ್‌ನಲ್ಲಿ ಅವುಗಳನ್ನು ಪರಿಶೀಲಿಸಿದಾಗ ನಿವೇಶನದ ತೆರಿಗೆ ಬಾಕಿ ಇರುವುದು ಗೊತ್ತಾಗಿತ್ತು. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರಾಜಲಕ್ಷ್ಮೀ ಅವರ ಪುತ್ರ ಪಾಲಿಕೆಗೆ ದೂರು ನೀಡಿದ್ದರು.
ಪಾಲಿಕೆಯ ಆಯುಕ್ತರು ವಿಚಾರಣೆ ನಡೆಸಿದಾಗ ಸಾಯಿನಾಥ ಅವರ ಅಕ್ರಮಗಳು ಬಯಲಾಗಿವೆ. ಆಸ್ತಿಯ ಮಾಲಿಕರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಪಾಲಿಕೆಯ ಖಾತೆಗೆ ಜಮಾ ಮಾಡದೇ ಹಣವನ್ನು ದುರಪಯೋಗ ಮಾಡಿಕೊಂಡಿರುವುದಲ್ಲದೇ, ನಕಲು ದಾಖಲೆಗಳನ್ನು ಸೃಷ್ಟಿಸಿರುವುದು ಆಂತರಿಕ ವಿಚಾರಣೆ ವೇಳೆ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಸಾಯಿನಾಥ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.