
ಬಳ್ಳಾರಿ: ಹೊಸ ವರ್ಷದ ಮೊದಲ ದಿನ ಇಲ್ಲಿ ನಡೆದಿದ್ದ ದೊಂಬಿ, ಗಾಳಿಯಲ್ಲಿ ಗುಂಡಿ ಹಾರಾಟಕ್ಕೆ ಸಂಬಂಧಿಸಿ ಗನ್‌ಮ್ಯಾನ್ ಸೇರಿ 26 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಗುಂಡು ಸಿಡಿಸಿದ್ದ ಘಟನೆ ಸಂಬಂಧ ನಾರಾ ಭರತ್ ರೆಡ್ಡಿ ಕಡೆಯ ನಾಲ್ವರು ಖಾಸಗಿ ಅಂಗರಕ್ಷಕರನ್ನು ವಶಕ್ಕೆ ಪಡೆದಿದ್ದಾರೆ.
ದೊಂಬಿ, ಘರ್ಷಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದು, ಅದರಲ್ಲಿ ಉಲ್ಲೇಖಿಸಿದ್ದವರ ಪೈಕಿ ಯಾರೊಬ್ಬರೂ ಈಗ ಪೊಲೀಸರು ಬಂಧಿಸಿರುವ ಆರೋಪಿಗಳ ಪಟ್ಟಿಯಲ್ಲಿ ಸೇರಿಲ್ಲ.
‘ಸಿರುಗುಪ್ಪ ರಸ್ತೆಯ ಅವ್ವಂಬಾವಿಯಲ್ಲಿರುವ ಜನಾರ್ದನ ರೆಡ್ಡಿ ನಿವಾಸದ ಎದುರು ಬ್ಯಾನರ್ ಅಳವಡಿಕೆ ಸಂಬಂಧ ನಡೆದಿದ್ದ ದೊಂಬಿ ಕುರಿತು 6 ಎಫ್‌ಐಆರ್ ದಾಖಲಾಗಿದ್ದವು. ತನಿಖೆ ವೇಳೆ ಸಾಕ್ಷ್ಯ, ವಿಡಿಯೊ ದೃಶ್ಯಾವಳಿ ಆಧರಿಸಿ 26 ಜನರನ್ನು ದಸ್ತಗಿರಿ ಮಾಡಲಾಗಿದೆ’ ಎಂದು ಪೊಲೀಸ್ ಇಲಾಖೆ ಹೇಳಿಕೆ ನೀಡಿದೆ.
ಬಂಧಿತರಲ್ಲಿ ಕಾಂಗ್ರೆಸ್, ಬಿಜೆಪಿಯ ಕಾರ್ಯಕರ್ತರು ಇದ್ದಾರೆ ಎನ್ನಲಾಗಿದೆ. ಬಳ್ಳಾರಿ ನಗರದ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಬಂಧನ ಪ್ರಕ್ರಿಯೆ ನಡೆಸಿ ಬಳಿಕ ಅವರನ್ನು ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಕೇಂದ್ರದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಕಾರ್ತಿಕ್, ಮುಕ್ಕಣ್ಣ, ಇನಾಯತುಲ್ಲಾ, ರಾಜು, ಮುಸ್ತಫಾ, ಶ್ರೀಕಾಂತ್, ಮೊಹಮದ್ ರಸೂಲ್, ಬಾಬು, ವೆಂಕಟೇಶ್, ಮಾಬಾಷ, ಗುರುಪ್ರಸಾದ್, ವಸುಂಧರ, ಶಿವಕುಮಾರ್, ಸಚಿನ್, ಅಬ್ದುಲ್ ರಜಾಕ್ , ಬಜ್ಜಯ್ಯ, ಎಂ.ತಿಮ್ಮಪ್ಪ, ಗುಂಡಾಲಿ ಶ್ರೀನಿವಾಸ, ಕೆ.ಬಿ ಲಕ್ಷ್ಮಣ, ಪಿ. ಶ್ರೀನಿವಾಸ ರೆಡ್ಡಿ, ಪೋತಪ್ಪ, ಷಡಕ್ಷರಿ, ರವಿಬಾಬು, ರವಿಕುಮಾರ್, ರಂಗಸ್ವಾಮಿ ಬಂಧಿತ ಆರೋಪಿಗಳು.
ಪೊಲೀಸರು ಈ ಮೊದಲು ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ, ಮುಖಂಡರಾದ ಸೋಮಶೇಖರ ರೆಡ್ಡಿ, ಶ್ರೀರಾಮುಲು, ಸತೀಶ್ ರೆಡ್ಡಿ ಅವರನ್ನು ಆರೋಪಿಗಳಾಗಿ ಉಲ್ಲೇಖಿಸಲಾಗಿತ್ತು. ಜತೆಗೆ, ನಾರಾ ಭರತ್ ರೆಡ್ಡಿ ಗುಂಪು ಕಟ್ಟಿಕೊಂಡು ಬಂದರು ಎಂದೂ ಹೆಸರಿಸಲಾಗಿತ್ತು.
ಗನ್ ಮ್ಯಾನ್ ಸೆರೆ: ಗುರುಚರಣ್ ಸಿಂಗ್ ಎಂಬಾತನೇ ಗುಂಡು ಹಾರಿಸಿದ್ದಾನೆ ಎನ್ನಲಾಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಆದರೆ, ಈತನ ಹೆಸರನ್ನು ಅಧಿಕೃತವಾಗಿ ಘೋಷಿಸಿಲ್ಲ.
ಶಾಂತ ಸ್ಥಿತಿಯತ್ತ: ಬಳ್ಳಾರಿ ನಗರ ಬಹುತೇಕ ಶಾಂತ ಸ್ಥಿತಿಗೆ ಮರಳಿದೆ. ಆದರೂ, ನಗರದ ಪ್ರಮುಖ ರಸ್ತೆಗಳಲ್ಲಿ ಇನ್ನೂ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಶಾಸಕರಾದ ಜನಾರ್ದನ ರೆಡ್ಡಿ, ಭರತ್ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು, ಸೋಮಶೇಖರ ರೆಡ್ಡಿ ಮನೆಗಳ ಎದುರು ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ.
ಅನುಮತಿ ಇಲ್ಲದೇ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ
ನಗರದಲ್ಲಿ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ಪ್ರತಿಷ್ಠಾಪಿಸುವ ಮುನ್ನ ಸ್ಥಳೀಯ ಆಡಳಿತದ ಅನುಮತಿ ಪಡೆದಿರಲಿಲ್ಲ ಎಂದು ಖಚಿತ ಮೂಲಗಳು ಮಾಹಿತಿ ನೀಡಿವೆ. ಸಾರ್ವಜನಿಕ ರಸ್ತೆ ವೃತ್ತಗಳಲ್ಲಿ ಪ್ರತಿಮೆ ಪ್ರತಿಷ್ಠಾಪಿಸಬಾರದು ಎಂದು 2006ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಪ್ರತಿಮೆ ಪ್ರತಿಷ್ಠಾಪನೆಗೆ ಮಾರ್ಗಸೂಚಿಗಳಿವೆ. ಬಳಿಕ ಸರ್ಕಾರ 2012ರಲ್ಲಿ ಆದೇಶ ಹೊರಡಿಸಿ ಪ್ರತಿಮೆ ಪ್ರತಿಷ್ಠಾಪನೆಯನ್ನು ನಿಷೇಧಿಸಿದೆ. ಪ್ರತಿಮೆ ಪ್ರತಿಷ್ಠಾಪಿಸಿ ಬಳಿಕ ಘಟನೋತ್ತರ ಅನುಮತಿ ಪಡೆಯುವ ಪ್ರಯತ್ನಗಳು ನಡೆದಿದ್ದವು. ಎರಡು ಪ್ರಸ್ತಾವನೆಗಳು ಸರ್ಕಾರಕ್ಕೆ ಹೋಗಿದ್ದವು ಎನ್ನಲಾಗಿದೆ. ಜನವರಿ 3ರಂದು ಪ್ರತಿಮೆ ಅನಾವರಣ ಕಾರ್ಯಕ್ರಮ ನಿಗದಿಯಾಗಿತ್ತು. ಪ್ರತಿಮೆ ಕೆತ್ತನೆಗೆ ಸರ್ಕಾರದ ₹1.15 ಕೋಟಿ ಅನುದಾನ ಬಳಕೆಯಾಗಿದೆ ಎಂದೂ ಮೂಲಗಳು ಮಾಹಿತಿ ನೀಡಿವೆ.
ಚಿತ್ರ ಹರಿದಾಟ
ಮೃತ ರಾಜಶೇಖರ ಅವರ ದೇಹವನ್ನು ಹೊಕ್ಕಿದ್ದ ಬಂದೂಕಿನ ವ್ಯಾಡ್‌ನ ಚಿತ್ರ ಭಾನುವಾರ ಮಾಧ್ಯಮಗಳಿಗೆ ಲಭ್ಯವಾಯಿತು. ದೇಹದಲ್ಲಿ ಪತ್ತೆಯಾಗಿದ್ದು ಇದೇ ವ್ಯಾಡ್ ಎಂದು ವೈದ್ಯಕೀಯ ಮೂಲಗಳೂ ಚಿತಪಡಿಸಿವೆ. ‘ವ್ಯಾಡ್ ಶಾಸಕ ನಾರಾ ಭರತ್ ರೆಡ್ಡಿ ಅವರ ಕಡೆಯವರ ಖಾಸಗಿ ಅಂಗರಕ್ಷಕ ಬಳಿಯಿದ್ದ ಬಂದೂಕಿನೊಂದಿಗೆ ಹೋಲಿಕೆಯಾಗಿದೆ’ ಎಂದು ಮೂಲಗಳ ಮಾಹಿತಿ ಉಲ್ಲೇಖಿಸಿ ‘ಪ್ರಜಾವಾಣಿ’ಯ ಜ.3ರ ಸಂಚಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಜನಾರ್ದನ ರೆಡ್ಡಿ ಮನೆ ಬಳಿ ಜನ: ಅಹಿತಕರ ಘಟನೆ ಬಳಿಕ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಅವರ ಗೃಹ ಕಚೇರಿ ಜನರಿಲ್ಲದೆ ಬಣಗುಡುತ್ತಿದೆ. ಇನ್ನೊಂದೆಡೆ ಇಷ್ಟು ದಿನ ಬಣಗುಡುತ್ತಿದ್ದ ಸಿರುಗುಪ್ಪ ರಸ್ತೆಯಲ್ಲಿನ ಜನಾರ್ದನ ರೆಡ್ಡಿ ಮನೆ ಬಳಿ ಜನಜಂಗುಳಿ ಸೇರುತ್ತಿದೆ. ನಿತ್ಯ ಕಾರ್ಯಕರ್ತರ ದಂಡೇ ಜಮಾಯಿಸುತ್ತಿದೆ. ದೂರವಾಗಿದ್ದ ಜನಾರ್ದನ ರೆಡ್ಡಿ ಶ್ರೀರಾಮುಲು ಅವರನ್ನು ಈ ಜಗಳ ಮತ್ತೆ ಬೆಸೆದಿದೆ.
ವಿವಾದದಿಂದ ಶಾಸಕರು ದೂರ
ಬ್ಯಾನರ್ ಅಳವಡಿಕೆಗೆ ಸಂಭವಿಸಿದ ಗಲಭೆಗೆ ಸಂಬಂಧಿಸಿದಂತೆ ಜಿಲ್ಲೆಯ ‘ಕೈ’ ಶಾಸಕರು ಮತ್ತು ಸಂಸದರು ಅಂತರ ಕಾಯ್ದುಕೊಂಡಿದ್ದಾರೆ. ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಹೊರತುಪಡಿಸಿ ಎಲ್ಲರೂ ಇದರಿಂದ ದೂರ ಉಳಿದಿದ್ದಾರೆ. ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಜ. 2ರಂದು ಬಳ್ಳಾರಿಗೆ ಬಂದಿದ್ದರಾದರೂ ಮುಖ್ಯಮಂತ್ರಿ ಸೂಚನೆಯಂತೆ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಮುಂದೂಡಿ ಭರತ್ ಬಳಿ ಕ್ಷಮೆ ಕೇಳಿಸಿ ಕೂಡಲೇ ಬಳ್ಳಾರಿಯಿಂದ ನಿರ್ಗಮಿಸಿದ್ದರು. ಸಂಸದ ತುಕಾರಾಂ ಅವರು ಜಿಲ್ಲೆಯಲ್ಲಿ ಕಾರ್ಯಾಂಗ ಕುಸಿದಿದೆ ಎಂದು ಪ್ರತಿಕ್ರಿಯಿಸಿದ್ದರೆ ಸಂಡೂರು ಶಾಸಕಿ ಅನ್ನಪೂರ್ಣ ಸಿರುಗುಪ್ಪ ಶಾಸಕ ಬಿ.ಎಂ ನಾಗರಾಜ್ ಮೌನತಳೆದಿದ್ದಾರೆ.
ಇವರೇನು ಹೇಳುತ್ತಾರೆ...
ಶಾಸಕ ಭರತ್ ರೆಡ್ಡಿ ಹೆಸರು ಪೊಲೀಸರು ದಾಖಲಿಸಿದ್ದ ಸ್ವಯಂ ಪ್ರೇರಿತ ಪ್ರಕರಣದಲ್ಲಿದೆ. ಆದರೂ ತಪ್ಪಿತಸ್ಥರು ಯಾರು ಎಂದು ಪೊಲೀಸರಿಗೆ ಗೊತ್ತಿಲ್ಲವಂತೆ. ಸತ್ಯ ಜಗತ್ತಿಗೆ ಗೊತ್ತಾಗಿದ್ದರೂ ಸರ್ಕಾರ ಕ್ರಮಕೈಗೊಂಡಿಲ್ಲ.
–ಆರ್.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
–––
ಗನ್ನು ಗುಂಡು ನಿಮ್ಮದು ಗುಂಡು ಹಾರಿಸಿದವರು ನಿಮ್ಮವರು ಸತ್ತವರು ನಿಮ್ಮವರು ಕೇಸು ದಾಖಲಿಸುವುದು ಮಾತ್ರ ಜನಾರ್ದನ ರೆಡ್ಡಿ ಶ್ರೀರಾಮುಲು ಮೇಲಾ?
– ಛಲವಾದಿ ನಾರಾಯಣ ಸ್ವಾಮಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ
–––
ಸಿದ್ದರಾಮಯ್ಯನವರೇ ನಿಮಗೆ ನೈತಿಕತೆ ಇದ್ದರೆ ಬಳ್ಳಾರಿ ಘಟನೆಯನ್ನು ಸರಿಯಾಗಿ ನಿಭಾಯಿಸಿ. ಸಣ್ಣ ಅಪಚಾರ ಮಾಡಿದರೂ ಮುಂದೆ ನೀವೇ ಹೊಣೆಗಾರರಾಗುತ್ತೀರಿ.
- ವಿ.ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವ
–––
ನಾಲ್ವರು ಗನ್‌ಮ್ಯಾನ್‌ಗಳನ್ನು ಬಂಧಿಸಿರುವುದಾಗಿ ಎಎಸ್‌ಪಿ ತಿಳಿಸಿದ್ದಾರೆ. ಗುರುಚರಣ್ ಸಿಂಗ್ ಎಂಬಾತ ಭರತ್ ರೆಡ್ಡಿ ಕುಟುಂಬಸ್ಥರಿಗೆ ಅಂಗರಕ್ಷಕನಾಗಿದ್ದ. ಇವರನ್ನು ನೇಮಿಸಿಕೊಂಡಿದ್ದ ಭರತ್ ರೆಡ್ಡಿಯನ್ನು ಬಂಧಿಸಬೇಕು.
–ಜನಾರ್ದನ ರೆಡ್ಡಿ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.