ADVERTISEMENT

ಬಳ್ಳಾರಿ: ಹೆರಿಗೆಗೆ ಸರ್ಕಾರಿ ಆಸ್ಪತ್ರೆ ಆದ್ಯತೆ

ಆರ್. ಹರಿಶಂಕರ್
Published 28 ಡಿಸೆಂಬರ್ 2025, 4:27 IST
Last Updated 28 ಡಿಸೆಂಬರ್ 2025, 4:27 IST
   

ಬಳ್ಳಾರಿ: ‘ಹೆಣ್ಣು ಮಕ್ಕಳು ಸಹಜ ಹೆರಿಗೆಗಿಂತಲೂ ಸಿಸೇರಿಯನ್‌ (ಸಿ ಸೆಕ್ಷನ್‌)ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ, ಖಾಸಗಿ ಆಸ್ಪತ್ರೆಗಳಲ್ಲೇ ಹೆರಿಗೆ ಮಾಡಿಸಲು ಬಯಸುತ್ತಾರೆ’ ಎಂಬ ವಾದಗಳ ನಡುವೆಯೂ, ಹೆರಿಗೆಗೆ ಜನರ ಆಯ್ಕೆ ಈಗಲೂ ಸರ್ಕಾರಿ ಆಸ್ಪತ್ರೆಗಳೇ ಎಂಬುದು ಸರ್ಕಾರದ ಅಂಕಿ ಅಂಶಗಳಿಂದ ಗೊತ್ತಾಗಿದೆ.   

ಬಳ್ಳಾರಿ ಜಿಲ್ಲೆಯಲ್ಲಿ 2025ರ ಆಗಸ್ಟ್‌ ತಿಂಗಳ ವರೆಗೆ ಆದ ಹೆರಿಗೆಗಳ ಪೈಕಿ, ಶೇ 76ರಷ್ಟು ಸರ್ಕಾರಿ ಆಸ್ಪತ್ರೆಗಳಲ್ಲೇ ಆಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ 24ರಷ್ಟು ಮಾತ್ರ ಖಾಸಗಿ ಆಸ್ಪತ್ರೆಗಳಲ್ಲಿ ಆಗಿದೆ. ವಿಜಯನಗರ ಜಿಲ್ಲೆಯಲ್ಲಿಯೂ ಇದೇ ಚಿತ್ರಣ ಇದ್ದು,
ಶೇ 78ರಷ್ಟು ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ, ಶೇ 22ರಷ್ಟು ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ್ದಾರೆ ಎನ್ನುತ್ತಿವೆ ಆರೋಗ್ಯ ಇಲಾಖೆಯ
ಅಧಿಕೃತ ದಾಖಲೆಗಳು.

ರಾಜ್ಯದಲ್ಲಿ ಈ ವರ್ಷ ಶೇ 62ರಷ್ಟು ಮಂದಿ ಸರ್ಕಾರಿ ಆಸ್ಪತ್ರೆಗಳಿಗೆ ಆದ್ಯತೆ ನೀಡಿದರೆ, ಶೇ 38ರಷ್ಟು ಮಂದಿ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿದ್ದಾರೆ. ಈ ಚಿತ್ರಣವನ್ನು ಗಮನಿಸಿದರೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ರಾಜ್ಯದ ಸರಾಸರಿಗಿಂತಲೂ ಹೆಚ್ಚಿನ ಜನ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿರುವ ಅಂಶ ಕಂಡು ಬಂದಿದೆ.  

ADVERTISEMENT

ಇದು ಸರ್ಕಾರಿ ಆಸ್ಪತ್ರೆಗಳ ಮೇಲೆ, ಇಲ್ಲಿನ ವ್ಯವಸ್ಥೆಯ ಮೇಲೆ ಜನ ಈಗಲೂ ವಿಶ್ವಾಸ ಇರಿಸಿದ್ದಾರೆ ಎಂಬುದನ್ನು, ಜತೆಗೆ ಇಲ್ಲಿನ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಾದ ಅನಿವಾರ್ಯತೆ ಇರುವುದನ್ನು ಸಾಬೀತು ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಯಾವ ವರ್ಷ ಎಷ್ಟೆಷ್ಟು?: ಬಳ್ಳಾರಿ ಜಿಲ್ಲೆಯಲ್ಲಿ 2020–21ರಲ್ಲಿ ಶೇ 75ರಷ್ಟು, 2021–22ರಲ್ಲಿ ಶೇ 77, 2022–23ರಲ್ಲಿ ಶೇ 78, 2023–24ರಲ್ಲಿ ಶೇ 78, 2024–25ರಲ್ಲಿ ಶೇ 76ರಷ್ಟು ಜನ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಒಳಗಾಗಿದ್ದಾರೆ. 

ವಿಜಯನಗರ ಜಿಲ್ಲೆಯಲ್ಲಿ 2022–23ರಲ್ಲಿ ಶೇ 78, 2023–24ರಲ್ಲಿ ಶೇ 79, 2024–25ರಲ್ಲಿ ಶೇ 78ರಷ್ಟು ಮಂದಿ ಸರ್ಕಾರಿ ಆಸ್ಪತ್ರೆಗೆ ಆದ್ಯತೆ ನೀಡಿದ್ದಾರೆ ಎನ್ನುತ್ತಿವೆ ಸರ್ಕಾರದ ದತ್ತಾಂಶಗಳು. 

ಸರ್ಕಾರಿ ಆಸ್ಪತ್ರೆ ಜನಪ್ರಿಯ ಏಕೆ?: ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುವ ಸೇವೆ ಉಚಿತ, ನಿರಂತರ. ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ಹೆಚ್ಚಿನ ಹಣ ಖರ್ಚು ಮಾಡಬೇಕು. ಸೀಮಿತ ಅವಧಿಯ ಸೇವೆ ಸಿಗುತ್ತದೆ.

ಇದೆಲ್ಲಕ್ಕೂ ಮಿಗಿಲಾಗಿ ಖಾಸಗಿ ಆಸ್ಪತ್ರೆಗೆ ಹೋದರೆ, ಸಿಸೇರಿಯನ್‌ ಖಚಿತ ಎಂಬ ಭಾವನೆ ಇದೆ. ಸಹಜ ಹೆರಿಗೆಗೆ ಅವಕಾಶವಿದ್ದರೂ, ಖಾಸಗಿ ಆಸ್ಪತ್ರೆಗಳು ಸಿಸೇರಿಯನ್‌ ಮಾಡುತ್ತವೆ ಎಂಬ ಕಲ್ಪನೆ ಜನರಲ್ಲಿ ಬೇರೂರಿದೆ. ಹೀಗಾಗಿಯೇ ಜನ ಸರ್ಕಾರಿ ಆಸ್ಪತ್ರೆಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ವೈದ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. 

ಆಶಾಗಳ ಪಾತ್ರ ಪ್ರಧಾನ: ಸರ್ಕಾರಿ ಆಸ್ಪತ್ರೆಗಳ ಮೇಲೆ ಜನ ವಿಶ್ವಾಸವಿರಿಸುವಲ್ಲಿ ಆಶಾಗಳ ಪಾತ್ರವೇ ಪ್ರಧಾನವಾದದ್ದು ಎಂದೂ ಸರ್ಕಾರಿ ಆಸ್ಪತ್ರೆ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಹಳ್ಳಿಹಳ್ಳಿಗಳಲ್ಲೂ ಆಶಾಗಳ ಸೇವಾ ಜಾಲವಿದೆ. ಮಹಿಳೆಯೊಬ್ಬರು ಗರ್ಭಿಣಿಯಾದಾಗಿನಿಂದ ಹೆರಿಗೆ ಆದ ಬಳಿಕವೂ ಅವರು ನಿರಂತರವಾಗಿ ಜನರೊಂದಿಗೆ ಸಂಪರ್ಕದಲ್ಲಿ ಇರುತ್ತಾರೆ. ಇವರು ಜನರಲ್ಲಿ ಸರ್ಕಾರಿ ಆಸ್ಪತ್ರೆಗಳ ಕುರಿತು ಉತ್ತಮ ಅಭಿಪ್ರಾಯ ಮೂಡಿಸಿ ಸರ್ಕಾರಿ ವ್ಯವಸ್ಥೆಗೆ ಕರೆತರುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. 

ಕಳಂಕ ಮೀರಿ ನಂಬಿಕೆ

‘ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಬಾಣಂತಿಯರ ಸಾವು ಸಂಭವಿಸಿತ್ತು. ಇದಾದ ಬಳಿಕದ ಎರಡು ತಿಂಗಳು ಆಸ್ಪತ್ರೆಗೆ ಬರುವವರ ಸಂಖ್ಯೆ ಕುಸಿದಿತ್ತು. ಅದನ್ನೆಲ್ಲ ಮೆಟ್ಟಿ ಈಗ ಆಸ್ಪತ್ರೆಯಲ್ಲಿ ಹೆರಿಗೆಗಳ ಸಂಖ್ಯೆ ಸಹಜ ಸ್ಥಿತಿಗೆ ಬಂದಿದೆ. ಈಗಾಗಲೇ 500ಕ್ಕೂ ಅಧಿಕ ಹೆರಿಗೆಗಳು ಆಗಿವೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.