ADVERTISEMENT

ಬಳ್ಳಾರಿಯಲ್ಲಿ 2.7 ಸೆಂ.ಮೀ ಮಳೆ: ಮನೆಗಳಿಗೆ ನುಗ್ಗಿದ ನೀರು

ಹಲವೆಡೆ ವಿದ್ಯುತ್ ಕಡಿತ: ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 5:13 IST
Last Updated 12 ಸೆಪ್ಟೆಂಬರ್ 2025, 5:13 IST
ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಬಳ್ಳಾರಿ ನಗರ ನಲ್ಲಚೆರುವು ಬಳಿಯ ಕೆಳಸೇತುವೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು
ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ಬಳ್ಳಾರಿ ನಗರ ನಲ್ಲಚೆರುವು ಬಳಿಯ ಕೆಳಸೇತುವೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು   

ಬಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಬುಧವಾರದಿಂದ ಗುರುವಾರ ಬೆಳಗಿನವರೆಗೆ ಒಟ್ಟಾರೆ ಸರಾಸರಿ 2.7 ಸೆಂ.ಮೀ ಮಳೆಯಾಗಿದೆ. 

ವಾಡಿಕೆಯಂತೆ ಈ ದಿನದಲ್ಲಿ 0.30 ಸೆಂ.ಮೀ ಮಳೆಯಾಗಬೇಕಿತ್ತು. ಆದರೆ, 2.7 ಸೆಂ.ಮೀ ಮಳೆಯಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ದತ್ತಾಂಶಗಳಿಂದ ಗೊತ್ತಾಗಿದೆ.

ಕಂಪ್ಲಿ ತಾಲೂಕಿನಲ್ಲಿ ಅತ್ಯಧಿಕ ಸರಾಸರಿ 4.48 ಸೆಂ.ಮೀ, ಕುರುಗೋಡು 2.66, ಬಳ್ಳಾರಿ 2.57 ಸೆಂ.ಮೀ, ಸಂಡೂರಿನಲ್ಲಿ 2.29, ಸಿರುಗುಪ್ಪ 2.41 ಸೆಂ.ಮೀ ಮಳೆ ಸುರಿದಿದೆ. ಸಂಡೂರು ತಾಲ್ಲೂಕಿನ ಕುರೇಕುಪ್ಪದಲ್ಲಿ 8.4 ಸೆಂ.ಮೀ ಮಳೆ ದಾಖಲಾಗಿದೆ.    

ADVERTISEMENT

ಮಳೆಯಿಂದಾಗಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಜನರು ತೀವ್ರ ಸಮಸ್ಯೆ ಎದುರಿಸಿದರು. ಕೊಳಗೇರಿಗಳ ಮನೆಗಳಿಗೆ ಕೊಳಚೆ ನೀರು ನುಗ್ಗಿತು. ಹೀಗಾಗಿ ಅಲ್ಲಿನ ನಾಗರಿಕರು ರಾತ್ರಿ ಇಡೀ ಮನೆಯಿಂದ ನೀರು ಹೊರ ಹಾಕುವುದರಲ್ಲೇ ನಿರತರಾಗಿದ್ದರು. 

ನಗರದ ಅಂಡರ್‌ ಪಾಸ್‌ಗಳು, ಬಸ್‌ ನಿಲ್ದಾಣ, ಅಂಗಡಿ ಮುಂಗಟ್ಟುಗಳ ಎದುರು ನೀರು ನಿಂತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.

ಈಗಾಗಲೇ ರಸ್ತೆಗಳೆಲ್ಲ ಗುಂಡಿ ಬಿದಿದ್ದು, ಮಳೆ ಬಂದು ಪರಿಸ್ಥಿತಿ ಇನ್ನಷ್ಟು ಅದ್ವಾನಗೊಂಡಿತು. ರಸ್ತೆ ಗುಂಡಿಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. 

ಒಂದೇ ಮಳೆಗೆ ನಗರದ ಹಲವು ಪ್ರದೇಶಗಳಲ್ಲಿ ರಾತ್ರಿಯೇ ವಿದ್ಯುತ್‌ ಕಡಿತಗೊಂಡಿತಾದರೂ, ಬೆಳಗಾದರೂ ಮರಳಿ ಬಾರಲೇ ಇಲ್ಲ. ಹೀಗಾಗಿ ಜನರ ತೀವ್ರ ತೊಂದರೆ ಅನುಭವಿಸಿದರು. ಹಲವು ಕಡೆಗಳಲ್ಲಿ ವಿದ್ಯುತ್‌ ತಂತಿಗಳು ಕಡಿತಗೊಂಡವು. ಇವುಗಳನ್ನು ಸರಿಪಡಿಸುವುದು ಜೆಸ್ಕಾಂ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿತು.

ಮಳೆಗೆ ಸಿರುಗುಪ್ಪ ತಾಲ್ಲೂಕಿನಲ್ಲಿ 2, ಬಳ್ಳಾರಿ ಮತ್ತು ಕಂಪ್ಲಿ ತಾಲ್ಲೂಕಿನಲ್ಲಿ ತಲಾ ಒಂದೊಂದು ಮನೆಗಳಿಗೆ ಹಾನಿಯಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.