
ಬಳ್ಳಾರಿ: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಬಳ್ಳಾರಿ ‘ಜೀನ್ಸ್ ಪಾರ್ಕ್’ನಲ್ಲಿನ ಕೈಗಾರಿಕಾ ನಿವೇಶನಗಳ ಬೆಲೆಯನ್ನು ರಾಜ್ಯ ಸರ್ಕಾರ ಅರ್ಧದಷ್ಟು ಇಳಿಕೆ ಮಾಡಿದೆ.
ಬಳ್ಳಾರಿ ಹೊರವಲಯದ ಸಂಜೀವ ರಾಯನ ಕೋಟೆಯಲ್ಲಿ ‘ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)’ ಅಂದಾಜು 650 ಎಕರೆ ಪ್ರದೇಶದಲ್ಲಿ ಜೀನ್ಸ್ ಪಾರ್ಕ್ ಅಭಿವೃದ್ಧಿಪಡಿಸುತ್ತಿದೆ. ಮೊದಲ ಹಂತದಲ್ಲಿ 154.7 ಎಕರೆ ಭೂಮಿಯನ್ನು ಅಭಿವೃದ್ಧಿಪಡಿಸುತ್ತಿದೆ.
ಈ ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಅಳತೆಗಳಲ್ಲಿ ಅಂದರೆ, ಕಾಲು ಎಕರೆ ವಿಸ್ತೀರ್ಣದ 75 ನಿವೇಶನ, ಅರ್ಧ ಎಕರೆಯ 47, ಒಂದು ಎಕರೆಯ 3, ಒಂದೂವರೆ ಎಕರೆಯ -45, ಐದು ಎಕರೆಯ 2, 10 ಎಕರೆಯ 1 ನಿವೇಶನ ಸೇರಿ ಒಟ್ಟು 173 ಕೈಗಾರಿಕಾ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಹಿಂದೆ ಒಂದು ಎಕರೆ ವಿಸ್ತೀರ್ಣದ ಜಾಗಕ್ಕೆ ₹1.35 ಕೋಟಿ ದರ ನಿಗದಿಪಡಿಸಲಾಗಿತ್ತು. ಉದ್ಯಮಿಗಳಿಂದ ಉತ್ತಮ ಬೇಡಿಕೆ ಬರಬಹುದು ಎಂಬ ನಿರೀಕ್ಷೆಯಿತ್ತು. ಸ್ಥಳೀಯ ಹೂಡಿಕೆದಾರರಿಂದಲೂ ಹೆಚ್ಚಿನ ಸ್ಪಂದನೆ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಅಲ್ಲದೆ, ದರ ಇಳಿಸಬೇಕು ಎಂದು ಸ್ಥಳೀಯ ಉದ್ದಿಮೆದಾರರು ಕೋರಿದ್ದರು ಎನ್ನಲಾಗಿದೆ.
ನಿರೀಕ್ಷಿತ ಬೇಡಿಕೆ ಬಾರದಿರುವುದು, ದರ ಇಳಿಸಲು ಒತ್ತಾಯ ಮತ್ತು ಕಡಿಮೆ ದರದಲ್ಲಿ ನಿವೇಶನಗಳನ್ನು ನೀಡಿ, ಉದ್ದಿಮೆಗಳನ್ನು ಆಕರ್ಷಿಸುವ ಕ್ರಮವಾಗಿ ಸರ್ಕಾರ ಈಗ ಕೈಗಾರಿಕಾ ನಿವೇಶನಗಳ ದರವನ್ನು ಶೇ 50ರಷ್ಟು ಕಡಿತ ಮಾಡಿದೆ. ಈಗ ₹67.50 ಲಕ್ಷಕ್ಕೆ ಒಂದು ಎಕರೆ ವಿಸ್ತೀರ್ಣದ ಕೈಗಾರಿಕಾ ನಿವೇಶನ ಸಿಗಲಿದೆ.
ಸ್ಥಳೀಯ ದರ್ಜಿಗಳು, ಸಣ್ಣ ವಾಷಿಂಗ್ ಘಟಕಗಳನ್ನು ಆಕರ್ಷಿಸಲು ಕಾಲು ಎಕರೆ ಅಳತೆ ಹೆಚ್ಚಿನ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪರಿಷ್ಕೃತ ದರದಂತೆ ಕನಿಷ್ಠ ₹22.50 ಲಕ್ಷಕ್ಕೆ ಈಗ ಜೀನ್ಸ್ ಪಾರ್ಕ್‌ನಲ್ಲಿ ನಿವೇಶನ ಲಭ್ಯವಾಗಲಿದೆ.
ಬೃಹತ್ ಉದ್ದಿಮೆಗಳ ಆಕರ್ಷಣೆ: ಬಾಂಗ್ಲಾದೇಶದಲ್ಲಿ ಸದ್ಯದ ಅಶಾಂತಿ ಕಾರಣಕ್ಕೆ ಅಲ್ಲಿನ ಜೀನ್ಸ್ ತಯಾರಿಕೆ ಉದ್ಯಮ ತತ್ತರಿಸಿದೆ. ಇದರ ಲಾಭ ಪಡೆದು, ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಉದ್ದಿಮೆ ಬೆಳೆಸುವ ಇರಾದೆ ಇದೆ.
ಆ ಗುರಿಯೊಂದಿಗೆ ಬಳ್ಳಾರಿಯ ಸಂಜೀವರಾಯನ ಕೋಟೆಯಲ್ಲೇ ಪ್ರತ್ಯೇಕ 487 ಎಕರೆ ಜಮೀನನ್ನೂ ಸರ್ಕಾರ ಸ್ವಾಧೀನಪಡಿಸಿಕೊಂಡಿದೆ ಎಂದು ಕೈಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಉದ್ದಿಮೆದಾರರನ್ನು ಆಕರ್ಷಿಸಲು ನಿವೇಶನಗಳ ಬೆಲೆ ಇಳಿಸಲಾಗಿದೆ. ಎಲ್ಲ ಸವಲತ್ತು ನೀಡಲಾಗುತ್ತಿದೆ. ಪಾರ್ಕ್ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಿದ್ದು ಆಗಮಿಸುವ ನಿರೀಕ್ಷೆ ಇದೆ.ಎಂ.ಬಿ.ಪಾಟೀಲ ವಾಣಿಜ್ಯ ಮತ್ತು ಕೈಗಾರಿಕೆಗಳು ಮೂಲಸೌಕರ್ಯ ಸಚಿವ ಸರ್ಕಾರ
ನೀರು ಸಿಇಟಿಪಿ ಭರವಸೆ
ಜೀನ್ಸ್ ಉದ್ದಿಮೆಗೆ ಪ್ರಮುಖವಾಗಿ ನೀರು ಮತ್ತು ಕಲುಷಿತ ನೀರು ಸಂಸ್ಕರಣಾ ಸಾಮಾನ್ಯ ಘಟಕ (ಸಿಇಟಿಪಿ) ಬೇಕು. ಈ ಕಾರಣಗಳಿಗಾಗಿ ಉದ್ದಿಮೆ ಹೊಡೆತ ತಿಂದಿದೆ. ಪ್ರತಿ ಬೇಸಿಗೆಯಲ್ಲಿ ಉದ್ದಿಮೆ ಬಂದ್ ಆಗುವುದು ಸಾಮಾನ್ಯವಾಗಿದೆ. ಇವೆರಡರ ಲಭ್ಯತೆ ಖಾತರಿ ಆಗದೇ ಜೀನ್ಸ್ ಪಾರ್ಕ್‌ಗೆ ಬರುವುದಿಲ್ಲ ಎಂದು ಸ್ಥಳೀಯ ಉದ್ದಿಮೆದಾರರು ಪಟ್ಟುಹಿಡಿದಿದ್ದಾರೆ. ಸರ್ಕಾರವೂ ಐದು ಎಂಎಲ್‌ಡಿ ನೀರು ಒದಗಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದೆ. ಸಿಇಟಿಪಿಗೆ ಡಿಪಿಆರ್ ಸಿದ್ಧಪಡಿಸಿರುವುದಾಗಿ ಇಲಾಖೆ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.