ಬಳ್ಳಾರಿ: ‘ಬಳ್ಳಾರಿ ಹೊರವಲಯದ ಕಪ್ಪಗಲ್ಲು ಪ್ರದೇಶದಲ್ಲಿ 8 ಸಾವಿರ ಕೋಳಿಗಳ ಸಾಮೂಹಿಕವಾಗಿ ಸಾವಿಗೆ ಹಕ್ಕಿಜ್ವರವೇ ಕಾರಣ’ ಎಂದು ಭೋಪಾಲ್‌ನ ರಾಷ್ಟ್ರೀಯ ಉನ್ನತ ಭದ್ರತಾ ಪ್ರಾಣಿ ರೋಗಗಳ ಸಂಸ್ಥೆ ದೃಢಪಡಿಸಿದೆ.
ಕೋಳಿಗಳ ಮಾದರಿಗಳನ್ನು ಪರೀಕ್ಷಿಸಿದ ಸಂಸ್ಥೆಯ ತಜ್ಞರು ಈ ಕುರಿತಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ವರದಿಯನ್ನು ಸಲ್ಲಿಸಿದ್ದಾರೆ.
ಹಕ್ಕಿಜ್ವರ ದೃಢಪಟ್ಟ ಹಿನ್ನೆಲೆಯಲ್ಲಿ ಅಧಿಕಾರಿಗಳು, ಮುಂಜಾಗ್ರತೆ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಮುಂದಾಗಿದ್ದಾರೆ. ನಿರ್ದಿಷ್ಟ ಕೋಳಿ ಫಾರಂನಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲ ಕೋಳಿಗಳನ್ನು ವೈಜ್ಞಾನಿಕವಾಗಿ ವಧೆ ಮಾಡುವ ಕಾರ್ಯ ನಡೆದಿದೆ.
ಕಪ್ಪಗಲ್ಲು ಕೋಳಿ ಫಾರಂನಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿ 305 ಹಿತ್ತಲ (ನಾಟಿ) ಕೋಳಿಗಳು, ಫಾರಂನಲ್ಲಿ 1,000 ಬ್ರಾಯ್ಲರ್ ಕೋಳಿಗಳಿವೆ. ಎಲ್ಲವನ್ನು ವಧೆ ಮಾಡಲಿದ್ದೇವೆ. ನಂತರ ಗುಂಡಿ ಅಗೆದು ಉಪ್ಪು, ಸುಣ್ಣ ಸಮೇತ ಹೂಳಲಾಗುವುದು ಎಂದು ತಿಳಿಸಿದ್ದಾರೆ.
‘ನಾಟಿಕೋಳಿಗಳ ವಧೆಗೆ ಜನ ನಿರಾಕರಿಸುತ್ತಾರೆ. ಆದರೆ, ಮಾರ್ಗಸೂಚಿ ಅನ್ವಯ ವಧೆ ಮಾಡಲೇಬೇಕು. ಈಗಾಗಲೇ ಜನರಿಗೆ ಮಾಹಿತಿ ನೀಡಲಾಗಿದೆ. ಬುಧವಾರ ಎಷ್ಟು ಸಾಧ್ಯವೋ, ಅಷ್ಟು ಕೋಳಿಗಳನ್ನು ಸಾಯಿಸುತ್ತೇವೆ’ ಎಂದು ಇಲಾಖೆಯ ಉಪನಿರ್ದೇಶಕ ಹನುಮಂತ ನಾಯ್ಕ ಕಾರಬಾರಿ ‘ಪ್ರಜಾವಾಣಿ’ ತಿಳಿಸಿದರು.
ಆಂಧ್ರಪ್ರದೇಶದ ಗಡಿಯಿಂದ ಬಳ್ಳಾರಿಗೆ ಕೋಳಿಗಳನ್ನು ತರುವುದನ್ನು ತಡೆಯಲು ಚೆಕ್ ಪೋಸ್ಟ್ ಆರಂಭಿಸಲಾಗಿದೆ. ಹಕ್ಕಿಜ್ವರ ಹಿನ್ನೆಲೆಯಲ್ಲಿ ಬಿಗಿ ತಪಾಸಣೆ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.