ADVERTISEMENT

ಜಿಲ್ಲಾಡಳಿತ ಪ್ರತಾಪ ರೆಡ್ಡಿ ಕೈಗೊಂಬೆಯೇ?: ಹೋರಾಟಗಾರರು ಪ್ರಶ್ನೆ

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡರ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 5:53 IST
Last Updated 17 ಜನವರಿ 2026, 5:53 IST
ಕರಿಯಪ್ಪ ಗುಡಿಮನಿ 
ಕರಿಯಪ್ಪ ಗುಡಿಮನಿ    

ಬಳ್ಳಾರಿ: ‘ಕೌಲ್‌ಬಜಾರ್‌ನ ದಾನಪ್ಪ ಬೀದಿ ಮತ್ತು ಬಂಡಿಹಟ್ಟಿ ಪ್ರದೇಶದಲ್ಲಿ ದಶಕಗಳ ಹಿಂದೆ  ಬಡಜನರಿಗೆ ಸರ್ಕಾರದಿಂದ ಮಂಜೂರಾಗಿದ್ದ ನೂರಾರು ಎಕರೆ ಭೂಮಿಯನ್ನು ಬುಡಾ ಮಾಜಿ ಅಧ್ಯಕ್ಷ  ಪ್ರತಾಪ್‌ ರೆಡ್ಡಿ ಎಂಬುವವರು ಮತ್ತೆ ವಶಪಡಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ’ ಎಂದು ದಲಿತ ಸಂಘಟನೆಗಳು ಆರೋಪಿಸಿವೆ.

ಪ್ರತಾಪ ರೆಡ್ಡಿ ಕಾನೂನುಬಾಹಿರವಾಗಿ ನಡೆದುಕೊಳ್ಳುತ್ತಿದ್ದರೂ, ಜಿಲ್ಲಾಡಳಿತ ಅದನ್ನು ನೋಡಿಕೊಂಡು ಸುಮ್ಮನಿದೆ. ಜಿಲ್ಲಾಡಳಿತ ಪ್ರತಾಪ ರೆಡ್ಡಿ ಅವರ ಕೈಗೊಂಬೆಯೇ, ಅವರಿಂದ ಏನನ್ನಾದರೂ ಪಡೆದುಕೊಂಡಿದೆಯೇ, ಅವರ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತವನ್ನು ಕಟ್ಟಿ ಹಾಕುತ್ತಿರುವುದು ಏನು, ಜಿಲ್ಲಾಡಳಿತಕ್ಕೆ ಇರುವ ಬೆದರಿಕೆ ಏನು ಎಂದು ಹೋರಾಟಗಾರರು ಪ್ರಶ್ನೆ ಮಾಡಿದ್ದಾರೆ.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡ  ಕುಮಾರ್‌ ಸಮತಲ ಮಾತನಾಡಿ, ‘70ರ ದಶಕದಲ್ಲಿ ಭೂಮಿ ಬಡವರಿಗೆ ಮಂಜೂರಾಗಿತ್ತು. 40 ವರ್ಷಗಳ ಕಾಲ ಬಡವರು ಈ ಭೂಮಿಯಲ್ಲಿ ಬದುಕು ಕಟ್ಟಿಕೊಂಡಿದ್ದರು. ಭೂ ನ್ಯಾಯಮಂಡಳಿಯೇ ಈ ಭೂಮಿ ಮಂಜೂರು ಮಾಡಿದೆ. ಪಹಣಿ ಜನರ ಹೆಸರಲ್ಲೇ ಬರುತ್ತಿದೆ. 2003ರಲ್ಲಿ ಮಧ್ಯಪ್ರವೇಶ ಮಾಡಿದ ಪ್ರತಾಪ್‌ ರೆಡ್ಡಿ ಭೂಮಿ ನಮ್ಮದು ಎಂದು ತಗಾದೆ ತೆಗೆದರು. ತಾವು ಖರೀದಿ ಮಾಡುವುದಾಗಿ ಹೇಳುತ್ತಿದ್ದಾರೆ. ಸುಳ್ಳು ದಾಖಲೆ ಸೃಷ್ಟಿ ಮಾಡಿದ್ದಾರೆ. 2015ರಲ್ಲಿ ರಾಜ್ಯದ ಸಂಘಟನೆಗಳೆಲ್ಲವೂ ಹೋರಾಟ ಮಾಡಿ ಜನರಿಗೆ ಭೂಮಿ ಉಳಿಸಿಕೊಟ್ಟವು. ಈ ನಡುವೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ವಿಚಾರಣೆಗಳು ನಡೆದಿವೆ. ಈಗ ಅದೇ ಭೂಮಿಯಲ್ಲಿ ಜನರನ್ನು ತೆರವು ಮಾಡಿ, ಎಲ್ಲವನ್ನೂ ಒಡೆದು ಹಾಕಿ ಭೂಮಿಯನ್ನು ವಶಕ್ಕೆ ಪಡೆಯುವ ಪ್ರಯತ್ನವನ್ನು ಪ್ರತಾಪ ರೆಡ್ಡಿ ಮತ್ತೆ ಆರಂಭಿಸಿದ್ದಾರೆ’ ಎಂದು ಆರೋಪಿಸಿದರು. 

ADVERTISEMENT

ದಲಿತ ಮುಖಂಡ ಕರಿಯಪ್ಪ ಗುಡಿಮನಿ ಮಾತನಾಡಿ, ‘ದಾಖಲೆಗಳನ್ನು ಕೊಟ್ಟರೂ, ಜನರು ನೋವು ಹೇಳಿಕೊಂಡರೂ ಜಿಲ್ಲಾಡಳಿತ ಸುಮ್ಮನೆ ಕುಳಿತಿದೆ. ಇದು ಅನುಮಾನಗಳಿಗೆ ಕಾರಣವಾಗಿದೆ. ಕಂದಾಯ ಇಲಾಖೆಯೇ ನೀಡಿರುವ ದಾಖಲೆಗಳನ್ನು ಜಿಲ್ಲಾಡಳಿತ ಒಪ್ಪಿಕೊಳ್ಳುತ್ತದೆಯೋ, ಪ್ರತಾಪ್‌ ರೆಡ್ಡಿ ಸೃಷ್ಟಿ ಮಾಡಿರುವ ನಕಲಿ ದಾಖಲೆಗಳನ್ನು ಒಪ್ಪಿಕೊಳ್ಳುತ್ತದೆಯೋ’ ಎಂದು ಅವರು ಪ್ರಶ್ನೆ ಮಾಡಿದರು. 

‘ಪ್ರತಾಪ್‌ ರೆಡ್ಡಿ ಅವರ ದೌರ್ಜನ್ಯವನ್ನು ಪೊಲೀಸ್‌ ಇಲಾಖೆ ತಡೆಯಬೇಕಿತ್ತು. ಅವರೂ ಕಣ್ಣುಮುಚ್ಚಿಕುಳಿತಿದ್ದಾರೆ. ಗ್ರಾಮೀಣ ಪೊಲೀಸ್‌ ಠಾಣೆ ಸಿಪಿಐಗೆ ದೂರು ನೀಡಿದ್ದರೂ ಅವರು ಅಸಹಾಯಕರಾಗಿದ್ದಾರೆ. ಎಪಿಎಂಸಿ ಠಾಣೆಯ ಪೊಲೀಸರು ಪ್ರತಾಪ್‌ ರೆಡ್ಡಿಗೆ ನೆರವು ನೀಡುತ್ತಿದ್ದಾರೆ’ ಎಂದು ಆರೋಪಿಸಿದರು. 

‘ಸರ್ಕಾರ ಎಲ್ಲ ದಾಖಲೆಗಳನ್ನು ಪರಿಶೀಲಿಸಬೇಕು. ತನಿಖೆಗೆ ಆದೇಶ ನೀಡಬೇಕು. ನ್ಯಾಯಾಂಗ ತನಿಖೆ ಅಥವಾ ಸಿಬಿಐಗೆ ತನಿಖೆ ವಹಿಸಬೇಕು’ ಎಂದು ಆಗ್ರಹಿಸಿದರು.

ದಲಿತ ಮುಖಂಡರಾದ ಈರೇಶ್‌, ವಸಂತ ರಾಜ್‌ ಕಹಳೆ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.