ADVERTISEMENT

ಬಳ್ಳಾರಿ | ಲೋಕ ಅದಾಲತ್: 3.51 ಲಕ್ಷ ಪ್ರಕರಣ ಇತ್ಯರ್ಥ

2025ರ ಕೊನೆಯ ಲೋಕ ಅದಾಲತ್‌ ಸಮಾಪ್ತಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 5:16 IST
Last Updated 15 ಡಿಸೆಂಬರ್ 2025, 5:16 IST
ಬಳ್ಳಾರಿ ನಗರದ ತಾಳೂರು ರಸ್ತೆಯ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ವ್ಯಾಜ್ಯವೊಂದನ್ನು ಪರಿಹರಿಸಿಕೊಂಡ ಸಾರ್ವಜನಿಕರೊಂದಿಗೆ ನ್ಯಾಯಾಧೀಶೆ ಶಾಂತಿ ಸಮಾಲೋಚನೆ ನಡೆಸಿದರು. ನ್ಯಾಯಾಧೀಶ ರಾಜೇಶ ಹೊಸಮನೆ ಪಾಲ್ಗೊಂಡಿದ್ದರು
ಬಳ್ಳಾರಿ ನಗರದ ತಾಳೂರು ರಸ್ತೆಯ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ವ್ಯಾಜ್ಯವೊಂದನ್ನು ಪರಿಹರಿಸಿಕೊಂಡ ಸಾರ್ವಜನಿಕರೊಂದಿಗೆ ನ್ಯಾಯಾಧೀಶೆ ಶಾಂತಿ ಸಮಾಲೋಚನೆ ನಡೆಸಿದರು. ನ್ಯಾಯಾಧೀಶ ರಾಜೇಶ ಹೊಸಮನೆ ಪಾಲ್ಗೊಂಡಿದ್ದರು   

ಬಳ್ಳಾರಿ: ನಗರದ ತಾಳೂರು ರಸ್ತೆಯ ಜಿಲ್ಲಾ ನ್ಯಾಯಾಲಯದ ವಿವಿಧ ಪೀಠಗಳಲ್ಲಿ ಆಯೋಜಿಸಿದ್ದ 2025ರ ಕೊನೆಯ ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಒಟ್ಟು 3,51,116 ವ್ಯಾಜ್ಯ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳು ಇತ್ಯರ್ಥಗೊಂಡಿವೆ. 

ಇತ್ಯರ್ಥಗೊಂಡ ಎಲ್ಲ ಪ್ರಕರಣಗಳಿಂದ ಒಟ್ಟು ₹185 ಕೋಟಿ ಪರಿಹಾರ ಮೊತ್ತ ವಸೂಲಿ ಮಾಡಲಾಗಿದೆ.  

ಬಳ್ಳಾರಿಯ 13 ಪೀಠಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್‌ ಅನ್ನು ಪರಿಶೀಲಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ‘ಪ್ರತಿದಿನ ವ್ಯಾಜ್ಯಗಳೊಂದಿಗೆ ಸೆಣಸುವ ಬದಲು ಮುತುವರ್ಜಿ ವಹಿಸಿ ಉದಾರ ಮನಸ್ಸಿನಿಂದ ಪ್ರಕರಣಗಳನ್ನು ರಾಜಿ ಸಂಧಾನ ಮೂಲಕ ಇತ್ಯರ್ಥ ಮಾಡಿಕೊಳ್ಳುವುದೇ ಬುದ್ಧಿವಂತಿಕೆ’ ಎಂದು ಹೇಳಿದರು. 

ADVERTISEMENT

‘ಬಳ್ಳಾರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ದೊಡ್ಡ ಪ್ರಮಾಣದ ಬಾಕಿ ಮತ್ತು ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಮತ್ತು ಸಂಧಾನದ ಮೂಲಕ ಇತ್ಯರ್ಥಪಡಿಸುವುದು ಅದಾಲತ್‌ನ ಮುಖ್ಯ ಉದ್ದೇಶವಾಗಿತ್ತು’ ಎಂದರು.

ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ರಕರಣಗಳಿಗೂ ಪರಿಹಾರ ದೊರಕಿದೆ. ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿದವರಿಗೆ ಸಂಪೂರ್ಣ ನ್ಯಾಯಾಲಯ ಶುಲ್ಕ ಮರುಪಾವತಿ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗು ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ರಾಜೇಶ್.ಎನ್ ಹೊಸಮನೆ ಸೇರಿದಂತೆ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ಅಧಿಕಾರಿಗಳು ಇದ್ದರು.

ಒಂದಾದ 9 ದಂಪತಿ: ಜಿಲ್ಲೆಯಲ್ಲಿನ 9 ಕೌಟುಂಬಿಕ ಪ್ರಕರಣಗಳಲ್ಲಿನ ವಿವಾದಗಳನ್ನು ಬಗೆಹರಿಸಿ ದೂರ-ದೂರ ಇದ್ದ ಪತಿ-ಪತ್ನಿಯನ್ನು ಒಂದು ಮಾಡಿ ಒಟ್ಟಿಗೆ ಜೀವನ ಮಾಡುವಂತೆ ಸಂಧಾನ ಮಾಡಲಾಯಿತು.

ಸುಮಾರು 85 ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿ ಮುಖಾಂತರ ಸಂಧಾನ ಮಾಡಿ ಸುಮಾರು ₹2,48,41,056 ಗಳನ್ನು ಪರಿಹಾರವಾಗಿ ನೀಡಲಾಯಿತು.

ಲೋಕ್ ಅದಾಲತ್‌ ಅಂಕಿ ಅಂಶ  

ಇತ್ಯರ್ಥಗೊಂಡ ಬಾಕಿ ಪ್ರಕರಣಗಳು: 7354 

ವಸೂಲಾದ ಪರಿಹಾರ ಮೊತ್ತ: ₹169982418 

ಇತ್ಯರ್ಥಗೊಂಡ ವ್ಯಾಜ್ಯ ಪೂರ್ವ ಪ್ರಕರಣಗಳು: 343762

ವಸೂಲಾದ ಪರಿಹಾರ: ₹1683795909 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.