ADVERTISEMENT

ಬಳ್ಳಾರಿ | ಹಿರಿತನ, ಸಾಮಾಜಿಕ ನ್ಯಾಯಕ್ಕೆ ‘ಗಾದಿ’

ಪ್ರಭಂಜನ್‌ ಕುಮಾರ್‌ಗೆ ಮತ್ತೆ ಕೈತಪ್ಪಿದ ಅವಕಾಶ; ಗಾದೆಪ್ಪ ಮೇಯರ್‌, ಮುಬೀನಾ ಉಪಮೇಯರ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 3:08 IST
Last Updated 16 ನವೆಂಬರ್ 2025, 3:08 IST
ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಅವರು ಮೇಯರ್ ಸ್ಪರ್ಧೆಗಿಳಿದಿದ್ದ ಪ್ರಭಂಜನ್‌ ಅವರೊಂದಿಗೆ ಚರ್ಚೆ ನಡೆಸಿದರು
ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಅವರು ಮೇಯರ್ ಸ್ಪರ್ಧೆಗಿಳಿದಿದ್ದ ಪ್ರಭಂಜನ್‌ ಅವರೊಂದಿಗೆ ಚರ್ಚೆ ನಡೆಸಿದರು   

ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್‌ ಆಗಿ ಯಾದವ ಸಮುದಾಯದ ಪಿ. ಗಾದೆಪ್ಪ ಅವರು ಶನಿವಾರ ಆಯ್ಕೆಯಾದರು. ಈ ಮೂಲಕ ಕಾಂಗ್ರೆಸ್‌ ಪಕ್ಷವು ‘ತನ್ನೊಳಗಿನ’ ‘ಹಿರಿಯ ಸದಸ್ಯ’ರೊಬ್ಬರಿಗೆ ‘ಸಾಮಾಜಿಕ ನ್ಯಾಯ’ ಕಲ್ಪಿಸಿದೆ. 

ಉಪ ಮೇಯರ್‌ ಸ್ಥಾನಕ್ಕೆ ಮುಬೀನಾ ಬೀ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ಮೇಯರ್‌ ಸ್ಥಾನವನ್ನು ಮುಸ್ಲಿಂ ಸಮುದಾಯಕ್ಕೇ ನೀಡಬೇಕೆಂಬ ಬೇಡಿಕೆ ಇತ್ತು. ಉಪ ಮೇಯರ್‌ ಸ್ಥಾನ ನೀಡುವ ಮೂಲಕ ಬೇಡಿಕೆ ಈಡೇರಿಸಲಾಗಿದೆ.  

ಪಾಲಿಕೆಯಲ್ಲಿ ಕಾಂಗ್ರೆಸ್‌ ಗೆದ್ದ ಬಳಿಕ ಮೇಯರ್‌ ಚುನಾವಣೆ ಪ್ರತಿ ಬಾರಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಡುತ್ತಿದೆ. ಅದೇ ಪರಿಪಾಠ ಈ ಬಾರಿಯೂ ಮುಂದುವರಿಯಿತು. ಮೇಯರ್‌ ಸ್ಥಾನಕ್ಕೆ ಗಾದೆಪ್ಪ ಅವರ ಜತೆಗೆ ಕಾಂಗ್ರೆಸ್‌ನವರೇ ಆದ ಆಸೀಫ್‌ ಮತ್ತು ಪ್ರಭಂಜನ ಕುಮಾರ್‌ ಸ್ಪರ್ಧೆ ಮಾಡಿದ್ದರಿಂದ ಚುನಾವಣಾ ಕಣ ರಂಗೇರಿತ್ತು. 

ADVERTISEMENT

ಮುಸ್ಲಿಮರಿಗೆ ಅವಕಾಶ ನೀಡಬೇಕು ಎಂಬುದರ ಆಧಾರದ ಮೇಲೆ ಆಸೀಫ್‌ ಸ್ಪರ್ಧೆ ಮಾಡಿದ್ದರೆ, ಯುವಕರಿಗೆ, ಪಕ್ಷನಿಷ್ಠರಿಗೆ ಅವಕಾಶ ನೀಡಬೇಕೆಂದು ಪ್ರಭಂಜನ್‌ ಸ್ಪರ್ಧೆ ಮಾಡಿದ್ದರು. ಪಕ್ಷೇತರರಾಗಿ ಗೆದ್ದಿದ್ದರೂ, ಕಾಂಗ್ರೆಸ್‌ನೊಂದಿಗಿನ ತಮ್ಮ ನಂಟು ಪ್ರಶ್ನಾತೀತ ಎಂದು ಪ್ರಭಂಜನ್‌ ಪ್ರತಿಪಾದಿಸಿದ್ದರು. 

ಈ ಎಲ್ಲವನ್ನೂ ಬದಿಗೆ ಸರಿಸಿದ ಪಕ್ಷದ ವರಿಷ್ಠರು, ಗಾದೆಪ್ಪ ಅವರನ್ನು ಆಯ್ಕೆ ಮಾಡಿತು. ಇದು ಪಕ್ಷನಿಷ್ಠ, ಹಿರಿತನಕ್ಕೆ ದೊರೆತ ಆದ್ಯತೆ ಎನ್ನಲಾಗಿದೆ. ಇದರ ಜತೆಗೆ, ಹಿಂದುಳಿದ ವರ್ಗಕ್ಕೆ ಅವಕಾಶ ನೀಡುವ ಮೂಲಕ ಸಾಮಾಜಿಕ ನ್ಯಾಯವನ್ನೂ ಪರಿಪಾಲಿಸಲಾಗಿದೆ. 

ಗಾದೆಪ್ಪ ಅವರು ಕಾಂಗ್ರೆಸ್‌ನ ಹಿರಿಯ ಸದಸ್ಯರಲ್ಲಿ ಒಬ್ಬರು. ಕಷ್ಟದ ಸಂದರ್ಭಗಳಲ್ಲೂ ಪಕ್ಷದ ಜತೆಗೆ ನಿಂತಿದ್ದರು. ತಮಗೆ ಅವಕಾಶ ನೀಡುವ ಮೂಲಕ ಹಿಂದುಳಿದ ಸಮುದಾಯವೊಂದಕ್ಕೆ ಅವಕಾಶ ಕಲ್ಪಿಸಬೇಕೆಂದು ಗಾದೆಪ್ಪ ಅವರೂ  ಪ್ರತಿಪಾದಿಸಿದ್ದರು.  

ಬಂಡಾಯ ಶಮನ ಮಾಡಿದ ನಾಯಕರು: ಮೇಯರ್‌ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ಸಿಗರೇ ಆದ ಆಸೀಫ್‌ ಮತ್ತು ಪ್ರಭಂಜನ ಅವರ ಉಮೇದುವಾರಿಕೆ ಹಿಂಪಡೆಯಲು ಶಾಸಕರಾದ ನಾಗೇಂದ್ರ, ಭರತ್‌ ರೆಡ್ಡಿ, ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಹರಸಾಹಸಪಟ್ಟರು. ಕಣದಿಂದ ಹಿಂದೆ ಸರಿಯಲು ಒಪ್ಪದ ಪ್ರಭಂಜನ ಅವರ ಮನವೊಲಿಸಲು ನಾಯಕರು ತೀವ್ರ ಕಷ್ಟಪಡಬೇಕಾಯಿತು. ಸತತ ಪ್ರಯತ್ನದ ಬಳಿಕ ಪ್ರಭಂಜನ ಕಣದಿಂದ ಹಿಂದೆ ಸರಿದರು. 

ಮತ ಹಾಕದ ಪ್ರಭಂಜನ: ಪಾಲಿಕೆ ಸದಸ್ಯ ಪ್ರಭಂಜನ ಅವರು ಮೇಯರ್‌ ಚುನಾವಣಾ ಕಣದಿಂದ ಹಿಂದೆ ಸರಿದರಾದರೂ, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ನಿರಾಕರಿಸಿದರು. ಬಿಜೆಪಿ ಅಭ್ಯರ್ಥಿಗೂ ಅವರು ಮತ ಹಾಕಲಿಲ್ಲ. ತಟಸ್ಥರಾಗಿ ಉಳಿದರು. ಕಾಂಗ್ರೆಸ್‌ ಜತೆಗೆ ಗುರುತಿಸಿಕೊಂಡಿದ್ದರೂ, ತಮ್ಮ ಪಕ್ಷೇತರ ಮನಸ್ಥಿತಿ ಪ್ರದರ್ಶಿಸಿದ್ದರಿಂದ ಭವಿಷ್ಯದಲ್ಲಿ ಮತ್ತೆ ಅವರಿಗೆ ಸಮಸ್ಯೆಯಾಗಬಹುದು ಎಂಬ ಮಾತುಗಳು ಕೇಳಿಬಂದಿವೆ. 

ಮೇಯರ್ ಸ್ಥಾನ ಪಡೆಯಲು ಈಗಾಗಲೇ ಎರಡು ವಿಫಲ ಯತ್ನ ನಡೆಸಿರುವ ಪ್ರಭಂಜನ್‌ ಅವರಿಗೆ ಮುಳ್ಳಾಗಿರುವುದು ಅವರ ಪಕ್ಷೇತರ ಹಿನ್ನೆಲೆ. ಈ ಬಾರಿಯೂ ಅದು ಮುಂದುವರಿದಂತೆ ಕಾಣುತ್ತಿದೆ. 

ಶಾಸ್ತ್ರಕ್ಕೆಂಬಂತೆ ಸ್ಪರ್ಧಿಸಿದ ಬಿಜೆಪಿ: ತನ್ನ ಬಳಿ ಸಂಖ್ಯಾಬಲ ಇಲ್ಲದಿದ್ದರೂ, ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕೆ ಇಳಿಸಿ ಅದೃಷ್ಟ ಪರೀಕ್ಷೆ ಮಾಡಿತು. ಮೇಯರ್‌ ಸ್ಥಾನಕ್ಕೆ ತಿಲಕ್‌ ಕುಮಾರ್‌, ಉಪಮೇಯರ್‌ ಸ್ಥಾನಕ್ಕೆ ಕಲ್ಪನಾ ಸ್ಪರ್ಧಿಸಿದ್ದರಾದರೂ, ಇಬ್ಬರಿಗೂ 13 ಮತಗಳಷ್ಟೇ ದೊರೆತವು.  

ಬಳ್ಳಾರಿಯಲ್ಲಿ ಮೇಯರ್‌ ಪಿ. ಗಾದೆಪ್ಪ ಮತ್ತು ಉಪಮೇಯರ್‌ ಮುಬೀನ್‌ ಅವರನ್ನು ಶಾಸಕರಾದ ನಾಗೇಂದ್ರ ಭರತ್‌ ರೆಡ್ಡಿ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್‌ ಅಭಿನಂದಿಸಿದರು

ಯಾರು ಏನಂದರು? 

ಗಾದೆಪ್ಪ ಹಿರಿಯ ನಾಯಕರು. ಪಾಲಿಕೆಯಲ್ಲಿ ಸಭಾ ನಾಯಕರಾಗಿ ಅವರು ಕೆಲಸ ಮಾಡಿದ್ದಾರೆ. ಅವರು ಹಿಂದುಳಿದ ವರ್ಗಕ್ಕೆ ಸೇರಿದವರು ಪಕ್ಷನಿಷ್ಠತೆ ಹಿರಿತನ ನೋಡಿ ಅವರಿಗೆ ಕಾಂಗ್ರೆಸ್‌ ಅವಕಾಶ ಕಲ್ಪಿಸಿದೆ. ನಾಸಿರ್‌ ಹುಸೇನ್‌ ರಾಜ್ಯಸಭಾ ಸದಸ್ಯ  ಪಕ್ಷ ಎಂದ ಮೇಲೆ ಸಮಸ್ಯೆಗಳಿರುತ್ತವೆ. ಆದರೆ ಅವೆಲ್ಲವನ್ನೂ ಮೀರಿ ಒಗ್ಗಟ್ಟಾಗಿ ಯಾವುದೇ ಗೊಂದಲಗಳಿಗೆ ಆಸ್ಪದವಿಲ್ಲದಂತೆ ನಾವೆಲ್ಲರೂ ಮೇಯರ್‌ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ. 

 - ಬಿ. ನಾಗೇಂದ್ರ ಗ್ರಾಮಾಂತರ ಶಾಸಕ 

ಬಳ್ಳಾರಿ ಜಿಲ್ಲೆಯ ಎಲ್ಲ ನಾಯಕರೂ ಸಮಾಲೋಚನೆ ಮಾಡಿ ಒಮ್ಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ. ನಗರದ ಅಭಿವೃದ್ಧಿಗೆ ಗಾದೆಪ್ಪ ಶ್ರಮಿಸಲಿ ಎಂದು ಹಾರೈಸುತ್ತೇನೆ.  ನಾರಾ ಭರತ್‌ ರೆಡ್ಡಿ ನಗರ ಶಾಸಕ  ಪಕ್ಷದ ಮಾರ್ಗದರ್ಶನದಲ್ಲಿ ಎಲ್ಲರ ಸಲಹೆ–ಸೂಚನೆಗಳಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುತ್ತೇನೆ. 

- ಪಿ. ಗಾದೆಪ್ಪ ಮೇಯರ್‌   

ಯಾರಿಗೆ ಎಷ್ಟು ಮತ  ಮೇಯರ್‌ ಅಭ್ಯರ್ಥಿ ಕಾಂಗ್ರೆಸ್‌ನ ಗಾದೆಪ್ಪ 28 ಮತಗಳನ್ನು ಪಡೆದರೆ ಬಿಜೆಪಿಯ ತಿಲಕ್‌ ಕುಮಾರ್‌ 13 ಮತಗಳನ್ನು ಪಡೆದರು.  ಉಪಮೇಯರ್‌ ಕಾಂಗ್ರೆಸ್‌ ಅಭ್ಯರ್ಥಿ ಮುಬಿನ್‌ ಬೀ 28 ಮತ ಕಲ್ಪನಾ 13 ಮತ ಪಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.