ಬಳ್ಳಾರಿ: ಈ ಬಾರಿಯ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಬಳ್ಳಾರಿಯನ್ನು ಕಡೆಗಣಿಸಿರುವುದಕ್ಕೆ ಜಿಲ್ಲಾ ಕಲಾವಿದರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಕಲಾವದರು ಅಕಾಡೆಮಿಯ ಧೋರಣೆ ಖಂಡಿಸಿ ಈ ವಾರಾಂತ್ಯದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಹಾಗೂ ಕಾರ್ಯದರ್ಶಿ ಎಚ್.ತಿಪ್ಪೇಸ್ವಾಮಿ ಮುದ್ದಟನೂರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಬಾರಿ ನಾಟಕ ಅಕಾಡೆಮಿಯು 33 ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಆದರೆ, ಬಳ್ಳಾರಿ ಜಿಲ್ಲೆಯಿಂದ ಯಾರೊಬ್ಬರಿಗೂ ಪ್ರಶಸ್ತಿ ಬಂದಿಲ್ಲ’ ಎಂದರು.
‘ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಹೆಚ್ಚಿನ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರಿಗೆ 13 ಪ್ರಶಸ್ತಿಗಳನ್ನು ನೀಡುವ ಬದಲು ಬಳ್ಳಾರಿ ಜಿಲ್ಲೆಯನ್ನು ಪರಿಗಣಿಸಬಹುದಾಗಿತ್ತು. ಆದರೆ, ಅಕಾಡೆಮಿಯ ಅಧ್ಯಕ್ಷರು ತಮಗಿಷ್ಟ ಬಂದಂತೆ ನಿರ್ಧಾರ ಕೈಗೊಂಡಿರುವುದು ಸ್ಪಷ್ಟವಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಬಗ್ಗೆ ಈ ಹಿಂದಿನಿಂದಲೂ ವಿವಿಧ ಅಕಾಡೆಮಿಗಳು ನಿರ್ಲಕ್ಷ್ಯ ವಹಿಸುತ್ತಲೇ ಬಂದಿವೆ’ ಎಂದು ಟೀಕಿಸಿದರು.
‘ಸರ್ಕಾರದ 13 ಅಕಾಡೆಮಿಗಳಲ್ಲಿ ಬಳ್ಳಾರಿ ಜಿಲ್ಲೆಯ ಪ್ರಾತಿನಿಧ್ಯ ಇಲ್ಲ. ಕಳೆದ ವರ್ಷ ಅಕಾಡೆಮಿಯಿಂದ ಮೂರು ವರ್ಷಗಳ ಪ್ರಶಸ್ತಿಯನ್ನು 90 ಜನರಿಗೆ ನೀಡಲಾಯಿತು. ಈ ಪೈಕಿ ಬಳ್ಳಾರಿ ಜಿಲ್ಲೆಯಿಂದ ಒಬ್ಬ ಕಲಾವಿದರನ್ನು ಆಯ್ಕೆ ಮಾಡಲಾಯಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹ ಬಳ್ಳಾರಿಗೆ ಬರಲಿಲ್ಲ. ಹೀಗೆ ವಿವಿಧ ಅಕಾಡೆಮಿಗಳು ಹಾಗೂ ಸರ್ಕಾರ ಬಳ್ಳಾರಿ ಜಿಲ್ಲೆಯ ಬಗ್ಗೆ ಅತ್ಯಂತ ನಿರ್ಲಕ್ಷ್ಯ ವಹಿಸುತ್ತಿದೆ. ಈ ಎಲ್ಲ ಬೆಳವಣಿಗೆ ನೋಡಿದರೆ ರಾಜ್ಯ ಸರ್ಕಾರ ಹಾಗೂ ಅಕಾಡೆಮಿಗಳು ಬಳ್ಳಾರಿಯ ಬಗ್ಗೆ ಯಾವ ಧೋರಣೆ ಹೊಂದಿವೆ ಎಂಬುದು ಗೊತ್ತಾಗುತ್ತದೆ’ ಎಂದು ಟೀಕಿಸಿದರು.
‘ನಾಟಕ ಅಕಾಡೆಮಿಯ ನಿರ್ಲಕ್ಷ್ಯ ಹಾಗೂ ಅಧ್ಯಕ್ಷರ ಧೋರಣೆಯನ್ನು ಖಂಡಿಸಿ ಶೀಘ್ರದಲ್ಲಿಯೇ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಈ ಸಂಬಂಧ ಕಲಾವಿದರ ಸಭೆ ನಡೆಸಲಾಗುವುದು’ ಎಂದರು.
ಹಿರಿಯ ಕಲಾವಿದೆ ಜಯಶ್ರೀ ಪಾಟೀಲ್, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಖಜಾಂಚಿ ರಮಣಪ್ಪ ಭಜಂತ್ರಿ, ಎಚ್.ಎಂ.ಅಮರೇಶ್ ಹಚ್ಚೊಳ್ಳಿ, ಹುಲುಗಪ್ಪ, ವೀರೇಶ್ ದಳವಾಯಿ, ಸುಬ್ಬಣ್ಣ, ನಾಗನಗೌಡ ಸುದ್ದಿಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.