ಪ್ರಾತಿನಿಧಿಕ ಚಿತ್ರ
ಬಳ್ಳಾರಿ: ಬೇಸಿಗೆ ಮತ್ತು ಕಡುಬೇಸಿಗೆಗೆ ಹೆಸರುವಾಸಿಯಾದ ಬಳ್ಳಾರಿಯಲ್ಲಿ ಕಳೆದ ಮೂರು ವರ್ಷಗಳಲ್ಲೇ ಆಗಸ್ಟ್ ತಿಂಗಳಲ್ಲಿ ಅತ್ಯಧಿಕ ಮಳೆ ಸುರಿದಿದೆ. ಇದರ ಜತೆಗೆ, 15 ದಿನಗಳಿಂದ ಆವರಿಸಿರುವ ದಟ್ಟ ಮೋಡ, ಸೂರ್ಯನನ್ನು ಇಣುಕಲು ಬಿಡದೇ, ಜಿಲ್ಲೆಯನ್ನು ಮಲೆನಾಡಿನಂತಾಗಿಸಿದೆ.
ಈ ಆಗಸ್ಟ್‌ನಲ್ಲಿ ಇಡೀ ಜಿಲ್ಲೆಯಲ್ಲಿ ಸರಾಸರಿ 4.9 ಸೆಂ.ಮೀ ಮಳೆಯಾಗಬೇಕಾಗಿತ್ತು. ಆದರೆ, 10.4 ಸೆಂ.ಮೀ.ನಷ್ಟು ಮಳೆ ಸುರಿದಿದೆ. ಕಳೆದ ವರ್ಷ (2024) ಆ. 19ರ ಹೊತ್ತಿಗೆ ಜಿಲ್ಲೆಯಲ್ಲಿ 6.97 ಸೆಂ.ಮೀ ಮಳೆ ಸುರಿದಿತ್ತು. ಇನ್ನು 2023ರಲ್ಲಿ ಕೇವಲ 0.99 ಸೆಂ.ಮೀ ಮಳೆಯಾಗಿ ಬರದ ಛಾಯೆ ಮೂಡಿಸಿತ್ತು.
ಮಳೆಯಿಂದಾಗಿ ಜಿಲ್ಲೆಯ ಎಲ್ಲ ಹಳ್ಳಕೊಳ್ಳಗಳು ತುಂಬಿ ತುಳುಕುತ್ತಿವೆ. ಹಗರಿ ನದಿಯೂ ಮೈದುಂಬಿ ಹರಿಯುತ್ತಿದ್ದರೆ, ನಾರಿಹಳ್ಳ ಜಲಾಶಯವೂ ತುಂಬಿ ನದಿಗೆ ನೀರು ಹರಿಯುತ್ತಿದೆ. ದರೋಜಿ ಕೆರೆಯೂ ತುಂಬಿದ್ದು, ಕೋಡಿಬಿದ್ದಿದೆ. ಇದೇ ಹೊತ್ತಿಗೆ, ತುಂಗಭದ್ರಾ ಜಲಾಶಯದಿಂದಲೂ ಭಾರಿ ಪ್ರಮಾಣದ ನೀರಿ ಹರಿಯುತ್ತಿದ್ದು, ನಾಲೆಗಳಲ್ಲೂ ಸಮೃದ್ಧ ನೀರು ಹರಿಯುತ್ತಿದೆ.
ವೇಗದ ಬಿತ್ತನೆ: ಬಳ್ಳಾರಿಯಲ್ಲಿ ಜೂನ್ ಮತ್ತು ಜುಲೈ ತಿಂಗಳಲ್ಲಿ ಮುಂಗಾರು ಕೈಕೊಟ್ಟಿತ್ತು. ಹೀಗಾಗಿ ಬಿತ್ತನೆ ಕುಂಟುತ್ತಾ ಸಾಗಿತ್ತು. ಈ ತಿಂಗಳ ಆರಂಭದವರೆಗೆ ನಿಗದಿತ ಗುರಿಗೆ ಪ್ರತಿಯಾಗಿ ಶೆ 50ರಷ್ಟು ಮಾತ್ರವೇ ಬಿತ್ತನೆಯಾಗಿತ್ತು. ಆದರೆ, ಯಾವಾಗ ಆಗಸ್ಟ್ ಮೊದಲ ವಾರದಲ್ಲಿ ಮುಂಗಾರು ಚುರುಗೊಂಡಿತೋ, ಅದರ ಪರಿಣಾಮವಾಗಿ ಈಗ ಶೇ 84ರಷ್ಟು ಬಿತ್ತನೆ ಪೂರ್ಣಗೊಂಡಿದೆ.
ಹಸಿರು ಉಟ್ಟ ಭೂರಮೆ: ಜಿಲ್ಲೆಯಲ್ಲಿ ಶೇ 84ರಷ್ಟು ಬಿತ್ತನೆ ಪೂರ್ಣಗೊಂಡಿದೆ. 15 ದಿನಗಳಿಂದ ಹದವಾದ ಮಳೆ ಸುರಿಯುತ್ತಿರುವುದುರಿಂದ ಬೆಳೆ ಸಮೃದ್ಧವಾಗಿ ಬೆಳೆದಿದ್ದು, ಭೂರಮೆಗೆ ಹಸಿರ ಸೀರೆ ಉಡಿಸಿದಂತೆ ಕಾಣುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿರುವ ಬೆಟ್ಟಗುಡ್ಡಗಳು ಹಸಿರಿನಿಂದ ಆವೃತವಾಗಿದ್ದು, ಮಲೆನಾಡು ನೆನಪಿಸುವ ಸನ್ನಿವೇಶ ಸೃಷ್ಟಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.