
ಬಳ್ಳಾರಿ: ‘ರಸ್ತೆಗಳನ್ನು ದುರಸ್ತಿಪಡಿಸಿ ಸಾರ್ವಜನಿಕರ ಸರಾಗ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಅಪಘಾತ ತಪ್ಪಿಸಲು ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಜನರಲ್ಲಿ ರಸ್ತೆ ಅಪಘಾತಗಳ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು’ ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅಧಿಕಾರಿಗಳಿಗೆ ಸೂಚಿಸಿದರು.
ನಗರದ ನೂತನ ಜಿಲ್ಲಾಡಳಿತ ಭವನದ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ನಗರದ ಹೊರವಲಯದಲ್ಲಿ ಸರ್ವೀಸ್ ರಸ್ತೆಗಳ ರಿಪೇರಿಯಾಗಬೇಕಿದೆ. ರಸ್ತೆಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಕೈಗೊಳ್ಳಬೇಕು’ ಎಂದು ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
‘ನಗರದ ವಿವಿಧೆಡೆ ಬಸ್ ಬೇ ನಿರ್ಮಿಸಲು ಪೊಲೀಸ್ ಅಧಿಕಾರಿಗಳು ಕೋರಿದ್ದಾರೆ. ಪಾಲಿಕೆ ಅಧಿಕಾರಿಗಳು ಇದಕ್ಕೆ ಸಹಕಾರ ನೀಡಬೇಕು. ಜಿಲ್ಲೆಯಲ್ಲಿನ ಆಸ್ಪತ್ರೆ ಮತ್ತು ಶಾಲೆಗಳ ಮುಂಭಾಗ ವೇಗದ ಮಿತಿಯ ಅಧಿಸೂಚನೆ ಹೊರಡಿಸಲು ಮತ್ತು ವೇಗದ ಮಿತಿಯ ಬಗ್ಗೆ ಸೂಚನಾ ಫಲಕ ಅಳವಡಿಸಲು ಸ್ಥಳ ಗುರುತಿಸಬೇಕು’ ಎಂದು ಅಧಿಕಾರಿಗಳಿಗೆ ತಿಳಿಸಿದರು.
‘ಬಳ್ಳಾರಿ ನಗರದಲ್ಲಿ ಅತಿಕ್ರಮಣ ಮಾಡಿರುವ ಫುಟ್ ಪಾತ್‌ಗಳನ್ನು ಕಾಲಮಿತಿಯೊಳಗೆ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಇದಕ್ಕೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ’ ಎಂದು ಜಿಲ್ಲಾಧಿಕಾರಿಯವರು ಎಚ್ಚರಿಸಿದರು.
‘ನಗರದಿಂದ ಹೊರ ಹೋಗುವ ಹಾಗೂ ಒಳ ಬರುವ ವಾಹನಗಳ ಮೇಲೆ ನಿಗಾವಹಿಸಬೇಕು. ನಗರದಲ್ಲಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧವಿದೆ. ಅಂತಹ ವಾಹನಗಳು ಕಂಡುಬಂದಲ್ಲಿ ತಪಾಸಣೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.
‘ಆಟೋ ಚಾಲಕರು, ತಮಗೆ ಅನುಕೂಲವಾಗುವ ಕಡೆಗಳಲ್ಲಿ ತಾವೇ ಜಾಗ ಗುರುತಿಸಿಕೊಂಡು, ಆಟೊ ಸ್ಟ್ಯಾಂಡ್‌ಗಳನ್ನು ಮಾಡಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಆಟೋ ಚಾಲಕ ಸಂಘದವರೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಬೇಕು’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಹೇಳಿದರು.
‘ಜಿಲ್ಲೆಯಲ್ಲಿ ರಸ್ತೆ ಬದಿ ವಿದ್ಯುತ್ ಕಂಬ ಮತ್ತು ಗಿಡ ನೆಡುವ ಕಾರ್ಯಕ್ಕೆ ಮತ್ತು ರಸ್ತೆ ಅಗೆಯುವ ಕಾರ್ಯಕ್ಕೆ ಕಡ್ಡಾಯವಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ಅನುಮತಿ ಪಡೆಯಲೇಬೇಕು’ ಎಂದು ಅವರು ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನವೀನ್ ಕುಮಾರ್, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಖಲೀಲ್ ಸಾಬ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು, ಮಹಾನಗರ ಪಾಲಿಕೆಯ ಅಧಿಕಾರಿಗಳು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.