ADVERTISEMENT

ಬಳ್ಳಾರಿ | ಅನ್ಯರಾಜ್ಯ ನೋಂದಣಿ ವಾಹನಗಳ ವಿರುದ್ಧ ಕ್ರಮ: ಸಾರಿಗೆ ಇಲಾಖೆ ಉಪ ಆಯುಕ್ತ

ಸಾರಿಗೆ ಇಲಾಖೆ ಉಪ ಆಯುಕ್ತ ಹಾಲಸ್ವಾಮಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 7:28 IST
Last Updated 19 ಅಕ್ಟೋಬರ್ 2025, 7:28 IST
ಹಾಲಸ್ವಾಮಿ 
ಹಾಲಸ್ವಾಮಿ    

ಬಳ್ಳಾರಿ: ‘ಕರ್ನಾಟಕದಲ್ಲಿ ನೆಲೆಸಿದ್ದೂ, ತೆರಿಗೆ ಉಳಿಸಲು ವಾಹನಗಳನ್ನು ಅನ್ಯ ರಾಜ್ಯಗಳಲ್ಲಿ ನೋಂದಣಿ ಮಾಡಿಕೊಳ್ಳುವುದನ್ನು ವಾಹನ ಮಾಲೀಕರು ನಿಲ್ಲಿಸಬೇಕು’ ಎಂದು ಸಾರಿಗೆ ಇಲಾಖೆಯ ಉಪ ಆಯುಕ್ತ ಹಾಲಸ್ವಾಮಿ ತಿಳಿಸಿದ್ಧಾರೆ.  

ಸುದ್ದಿಗೋಷ್ಟಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ರಾಜ್ಯದಲ್ಲಿ ನೆಲೆಸಿ, ಇಲ್ಲೇ ವ್ಯಾಪಾರ ವ್ಯವಹಾರ ಮಾಡುತ್ತಾ, ಇಲ್ಲಿನ ರಸ್ತೆಗಳನ್ನೇ ಬಳಸುತ್ತಾ ವಾಹನಗಳನ್ನು ಮಾತ್ರ ತಮಿಳುನಾಡು, ಗೋವಾ, ಆಂಧ್ರ ಪ್ರದೇಶ, ಪುದುಚೇರಿಗಳಲ್ಲಿ ನೋಂದಣಿ ಮಾಡಿಸಿಕೊಳ್ಳುವ ಪರಿಪಾಠ ಇತ್ತೀಚೆಗೆ ಹೆಚ್ಚುತ್ತಿದೆ. ಇಂಥ ವಾಹನಗಳನ್ನು ಯಾವುದೇ ಮುಲಾಜಿಲ್ಲದೇ  ಜಫ್ತಿ ಮಾಡಿ ದಂಡ ವಿಧಿಸಲಾಗುವುದು’ ಎಂದು ಅವರು ಹೇಳಿದರು. 

‘ಬೇರೆ ರಾಜ್ಯಕ್ಕೆ ತೆರಿಗೆ ಪಾವತಿ ಮಾಡಿ, ನಮ್ಮ ರಾಜ್ಯದಲ್ಲಿ ವಾಹನಗಳನ್ನು ಓಡಿಸುವುದು ಅಪರಾಧ.  ರಾಜ್ಯದಾದ್ಯಂತ ಇದರ ಪರಿಶೀಲನೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಕಲಬುರಗಿ ಮತ್ತು ಬೆಳಗಾವಿ ವಲಯಗಳಲ್ಲಿ ಪ್ರತ್ಯೇಕ ತಂಡಗಳನ್ನೇ ರಚನೆ ಮಾಡಲಾಗಿದ್ದು, ಒಂದು ವರ್ಷದಲ್ಲಿ 250ಕ್ಕೂ ಅಧಿಕ ವಾಹನಗಳನ್ನು ಜಫ್ತಿ ಮಾಡಿ, ₹8 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ’ ಎಂದು ತಿಳಿಸಿದರು.  

ADVERTISEMENT

‘ಈಗಾಗಲೇ ಬೇರೆ ರಾಜ್ಯಗಳಲ್ಲಿ ನೋಂದಣಿ ಮಾಡಿಸಿಕೊಂಡವರು, ಕೂಡಲೇ ನಿಗದಿತ ದಂಡ ಪಾವತಿಸಿ, ಕರ್ನಾಟಕದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಹೀಗೆ ಮಾಡಿಸಿಕೊಂಡರೆ ಈ ಹಿಂದಿನ ನೋಂದಣಿ ರದ್ದಾಗಿ ಅಲ್ಲಿ ಪಾವತಿಸಿರುವ ತೆರಿಗೆ ಹಣವು ಮರು ಪಾವತಿ ಆಗಲಿದೆ’ ಎಂದರು. 

‘ಪುದುಚೇರಿ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಬೇರೆಲ್ಲ ರಾಜ್ಯಗಳಿಗೆ ಹೋಲಿಸಿದರೆ ಅಲ್ಲಿ ವಾಹನಗಳ ಮೇಲೆ ಕಡಿಮೆ ತೆರಿಗೆ ವಿಧಿಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು. 

ಸಂಡೂರಿನಲ್ಲಿ ವಾಹನಗಳ ನಿರಂತರ ಪರಿಶೀಲನೆ 

‘ಸಂಡೂರು ತಾಲೂಕಿನಲ್ಲಿ ಗಣಿ ಲಾರಿಗಳ ಓಡಾಟ ಅಧಿಕವಾಗಿದ್ದು, ಲಾರಿಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಹೆಚ್ಚು ಲೋಡ್‌ ಮಾಡಿದ ವಾಹನಗಳಿಗೆ ದಂಡ ವಿಧಿಸಲಾಗುತ್ತಿದೆ. ಸಂಡೂರಿನಲ್ಲಿ ಪ್ರತ್ಯೇಕ ಆರ್‌ಟಿಒ ಕಚೇರಿ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು. 

ಬಳ್ಳಾರಿ ನಗರದ ಆಟೋಗಳಲ್ಲಿ ನಿಗದಿತ ಪ್ರಯಾಣಿಕರಿಗಿಂತಲೂ ಹೆಚ್ಚಿನ ಪ್ರಯಾಣಿಕರನ್ನು ತುಂಬುತ್ತಿರುವುದರ ಕುರಿತು ಗಮನಸೆಳೆದಾಗ, ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಿವಾಸಗಿರಿ ಅವರಿಗೆ ತಾಕೀತು ಮಾಡಿದರು. 

‘ಖಾಸಗಿ ಬಸ್‌ಗಳು ಟಿಕೆಟ್ ದರವನ್ನು ಹಬ್ಬದ ಸಂದರ್ಭದಲ್ಲಿ ಹೆಚ್ಚಳ ಮಾಡುವಂತಿಲ್ಲ. ಹಾಗೇನಾದರೂ ಮಾಡಿದ್ದರೆ ದಂಡ ವಿಧಿಸಲಾಗುವುದು’ ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.