
ಬಳ್ಳಾರಿ: ಬಳ್ಳಾರಿ ನಗರದಲ್ಲಿ ಮರಳಿಗೆ ಮತ್ತೆ ಅಭಾವ ಉಂಟಾಗಿದ್ದು, ನಿರ್ಮಾಣ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿವೆ. ಇದರಿಂದ ಒಂದೆಡೆ, ಕೂಲಿ ಕಾರ್ಮಿಕರ ದುಡಿಮೆಗೆ ತೊಂದರೆಯಾಗಿದ್ದರೆ, ಸಾಲ ಮಾಡಿ ಮನೆ ಕಟ್ಟುತ್ತಿರುವವರ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ.
ಈ ವರ್ಷದ ಮೇ ತಿಂಗಳಲ್ಲಿಯೂ ಮರಳಿಗೆ ಅಭಾವ ಉಂಟಾಗಿತ್ತು. ಆಗಲೂ ರಾಜಕಾರಣಿಗಳು, ಅಧಿಕಾರಿಗಳು, ಪಟ್ಟಭದ್ರರ ಹಿತಾಸಕ್ತಿಗಳ ಕಾರಣಕ್ಕೆ ಮರಳು ಪೂರೈಕೆ ಸ್ಥಗಿತವಾದ ಆರೋಪ ಕೇಳಿಬಂದಿತ್ತು. ಈಗಲೂ ಅದೇ ಕಾರಣಗಳು ಚರ್ಚೆಯಾಗುತ್ತಿವೆ.
ಕಳೆದ ಒಂದೂವರೆ ತಿಂಗಳಿಂದಲೂ ಮರಳಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಮಳೆಯ ಕಾರಣದಿಂದ ಗುತ್ತಿಗೆ ಪ್ರದೇಶಗಳಲ್ಲಿ ಮರಳು ಗಣಿಗಾರಿಕೆಯನ್ನು ಗುತ್ತಿಗೆದಾರರು ನಿಲ್ಲಿಸಿದ್ದರು. 15 ದಿನಗಳಿಂದ ಈಚೆಗೆ ಮರಳು ಗಣಿಗಾರಿಕೆ ಆರಂಭವಾಗಿದೆಯಾದರೂ, ಪೂರೈಕೆ ಸಾಧ್ಯವಾಗುತ್ತಿಲ್ಲ.
‘ಭಾರೀ ವಾಹನ ಸಂಚಾರ ಸಂಬಂಧ 2023ರಲ್ಲಿ ಅಂದಿನ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನೇ ಆಸ್ತ್ರ ಮಾಡಿಕೊಂಡಿರುವ ಪೊಲೀಸ್ ಇಲಾಖೆ, ನಗರಕ್ಕೆ ಮರಳು ಲಾರಿಗಳು ಬರುವುದನ್ನೇ ತಡೆಯುತ್ತಿದೆ’ ಎಂದು ಮರಳು ಉದ್ದಿಮೆದಾರರು ಆರೋಪಿಸುತ್ತಿದ್ದಾರೆ.
‘ನಗರದಲ್ಲಿ ಭಾರೀ ವಾಹನಗಳ ಓಡಾಟದಿಂದ ಟ್ರಾಫಿಕ್, ಅಪಘಾತಗಳು ಉಂಟಾಗುತ್ತಿವೆ. ಒಂದು ಟ್ರಿಪ್ ಶೀಟ್‌ನಲ್ಲಿ ಹಲವು ಬಾರಿ ಮರಳು ಸಾಗಣೆ ನಡೆಯುತ್ತಿದೆ. ಇದರಿಂದ ಅನಗತ್ಯ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ 2023ರ ಆದೇಶದ ಪ್ರಕಾರ ನಾವು ವಾಹನಗಳನ್ನು ತಡೆಯುತ್ತಿದ್ದೇವೆ. ಮರಳು ಉದ್ದಿಮೆದಾರರು ಈ ಆದೇಶವನ್ನು ತಿದ್ದುಪಡಿ ಮಾಡಿಸಿದರೆ, ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗುತ್ತದೆ’ ಎಂದು ಪೊಲೀಸ್ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಅದರೆ, ಮರಳಿನ ಲಾರಿಗಳ ಓಡಾಟಕ್ಕೆ ಇಷ್ಟು ದಿನ ಇಲ್ಲದ 2023ರ ಆದೇಶದ ಅಂಕುಶ ಈಗ ಹೇಗೆ ಬಂತು, ಅದೇಶ ಪಾಲನೆ ಈಗ ಮಾತ್ರ ಬಿಗಿಯಾಗಿದ್ದು ಏಕೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.
ಈ ಪ್ರಶ್ನೆಗಳಿಗೆ ಹಲವರಿಂದ ಹಲವು ಉತ್ತರಗಳು ಸಿಕ್ಕಿವೆ. ಕೆಲ ಅಧಿಕಾರಿಗಳಂತೂ ‘ನೀವು ಕೇಳಲೂ ಬಾರದು, ನಾವು ಹೇಳಲೂ ಬಾರದು’ ಎನ್ನುತ್ತಾರೆ. ವಿಚಾರವನ್ನು ಮತ್ತಷ್ಟು ಬಗೆದಾಗ ‘ಮಾಮೂಲಿ’ ವಿಚಾರಗಳು ಬಯಲಾಗಿದೆ.
ಬಳ್ಳಾರಿ ಹೊರವಲಯದ ಅಸುಂಡಿ, ವಣೇನೂರು, ಯಾಳ್ಪಿ ಎಂಬಲ್ಲಿ ಮರಳು ಗುತ್ತಿಗೆ ಪ್ರದೇಶಗಳಿವೆ. ಇವುಗಳಿಂದಲೇ ನಗರಕ್ಕೆ ಮರಳು ಪೂರೈಕೆಯಾಗುತ್ತದೆ. ಹೀಗೆ ಪೂರೈಕೆಯಾಗುವ ಮರಳಿನ ಒಂದು ಲೋಡ್ (18 ಟನ್) ಬೆಲೆ ಇತ್ತೀಚೆಗೆ ₹32 ಸಾವಿರ ದಾಟಿದೆ. ಇದರಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಪೊಲೀಸರು, ಪಟ್ಟಭದ್ರರಿಗೆ ಪಾಲು ಇದೆ ಎಂಬ ಆರೋಪ ಕೇಳಿ ಬಂದಿದೆ.
ಇದೇ ಕಾರಣಗಳನ್ನೇ ಮುಂದಿಟ್ಟು ಮರಳು ಮಾರಾಟಗಾರರು ದುಬಾರಿ ಬೆಲೆಗೆ ಮರಳು ಮಾರಿಕೊಳ್ಳುತ್ತಿದ್ದಾರೆ. ಭಾರೀ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಇದೆ. ಹೀಗಾಗಿಯೇ ಕೆಲವರು ತಮ್ಮ ‘ಮಾಮೂಲಿ’ ಬೆಲೆಯನ್ನು ಗಗನಕ್ಕೆ ಬೆಳೆಸಿದ್ದಾರೆ. ಅದನ್ನು ಕೊಡಲು ನಿರಾಕರಿಸಿದಾಗ 2023ರ ಆದೇಶಗಳನ್ನು ಮುನ್ನೆಲೆಗೆ ತರಲಾಗಿದೆ ಎಂದು ಗೊತ್ತಾಗಿದೆ.
ಇನ್ನೊಂದೆಡೆ, ನಿಗದಿತ ಗಣಿ ಗುತ್ತಿಗೆ ಪ್ರದೇಶಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡುವ ಗುರಿ ತಲುಪಲು ಮರಳು ಉದ್ದಿಮೆದಾರರು, ಕಳೆದ 15 ದಿನಗಳಿಂದ ಭಾರೀ ಪ್ರಮಾಣದಲ್ಲಿ ಉತ್ಪಾದನೆಯಲ್ಲಿ ತೊಡಗಿದ್ದಾರೆ ಎಂದೂ ಹೇಳಲಾಗುತ್ತಿದೆ.
ಸಮಸ್ಯೆ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ., ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ತರಿಸಿಕೊಂಡು, ಬಳಿಕ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ.
ಒಂದು ಟ್ರಿಪ್‌ಶೀಟ್‌ನಲ್ಲಿ ಒಂದೇ ಲೋಡ್ ಸಾಗಣೆಯಾಗಬೇಕೆಂದು ಗಣಿ ಅಧಿಕಾರಿಗೆ ತಿಳಿಸಿದ್ದೇನೆ. ಇದನ್ನು ಪರಿಶೀಲಿಸಲು ಅಗತ್ಯ ಸಿಬ್ಬಂದಿ ಕೊಡುತ್ತೇನೆ. 2023ರ ಆದೇಶದ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ಮಾಡಲಾಗುವುದು.ಶೋಭಾರಾಣಿ ವಿ.ಜೆ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.