
ಬಳ್ಳಾರಿ: ಬಳ್ಳಾರಿ ಅಭಿವೃದ್ಧಿ ಪ್ರಾಧಿಕಾರ (ಬುಡಾ)ದ ವಾಣಿಜ್ಯ ಸಂಕೀರ್ಣದಲ್ಲಿ ನ.17ರಂದು ನಡೆದಿದ್ದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಬೇಧಿಸಿರುವ ಎಪಿಎಂಸಿ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಮೊಳಕಾಲ್ಮೂರಿನ ಎಂ.ಅತೇಶ ಅಲಿಯಾಸ್ ಸತೀಶ (19) ಬಂಧಿತ. ಮೃತನನ್ನು ಅಂದ್ರಾಳುವಿನ ಶಿವ (25) ಎಂದು ಗುರುತಿಸಲಾಗಿದೆ.
ಬುಡಾ ಕಟ್ಟಡದಲ್ಲಿ ನ. 18ರಂದು ಮೃತ ದೇಹ ಪತ್ತೆಯಾಗಿತ್ತು. ಗುರುತು ಗೊತ್ತಾಗಿರಲಿಲ್ಲ. ಬಳಿಕ ಆತನ ಗುರುತು ಪತ್ತೆ ಮಾಡುವಲ್ಲಿ ಪೊಲೀಸರು ಸಫಲರಾಗಿದ್ದರು. ಆರೋಪಿಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖಾ ತಂಡ ರಚನೆ ಮಾಡಿದ್ದರು.
ಸಿಸಿ ಕ್ಯಾಮೆರಾವೊಂದರಲ್ಲಿ ಆರೋಪಿ ಸತೀಶನ ಮತ್ತು ಮೃತ ಶಿವು ಒಟ್ಟಿಗೆ ಇದ್ದದ್ದು ಕಂಡು ಬಂದಿತ್ತು. ಈ ಜಾಡು ಹಿಡಿದು ಆರೋಪಿ ಸತೀಶನನ್ನು ನಗರದ ರೇಣುಕಾ ಹೋಟೆಲ್ ಬಳಿ ಬಂಧಿಸಲಾಗಿತ್ತು. ಆತನನ್ನು ವಿಚಾರಣೆ ಮಾಡಿದಾಗ ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದ್ದಾರೆ.
ಚಿಂದಿಯಿಂದ ಬಂದ ಹಣಕ್ಕೆ ಕೊಲೆ: ಸತೀಶ ಮತ್ತು ಶಿವ ಚಿಂದಿ ಆದು ಜೀವನ ನಡೆಸುತ್ತಿದ್ದರು. ನ. 17ರಂದು ಇಬ್ಬರಿಗೂ ಒಂದು ಅಲ್ಯುಮಿನಿಯಂ ಫ್ರೇಂ ಸಿಕ್ಕಿತ್ತು. ಅದನ್ನು ₹1500ಕ್ಕೆ ಮಾರಾಟ ಮಾಡಿದ್ದರು. ಮೃತ ಶಿವನು ಸತೀಶನಿಗೆ ಕೇವಲ ₹300 ಮಾತ್ರ ಕೊಟ್ಟಿದ್ದ. ಇದು ಸತೀಶನಿಗೆ ಕೋಪ ತರಿಸಿತ್ತು. ಸಂಜೆ ಬುಡಾ ಸಂಕೀರ್ಣದಲ್ಲಿ ಕುಡಿಯಲೆಂದು ಇಬ್ಬರೂ ಒಟ್ಟಿಗೆ ಕುಳಿತಿದ್ದ ವೇಳೆ ಈ ವಿಚಾರ ಪ್ರಸ್ತಾಪವಾಗಿತ್ತು. ಕೋಪದಲ್ಲಿ ಸತೀಶನು ಶಿವನ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದ. ಬಳಿಕ ಕಟ್ಟಡದ ಮೇಲಿಂದ ತಳ್ಳಿ ಕೊಂದಿದ್ದ ಎಂದು ಶೋಭಾರಾಣಿ ತಿಳಿಸಿದರು.
ಸಿಸಿ ಕ್ಯಾಮೆರಾ ಅಳವಡಿಸಲು ಸೂಚನೆ ಬುಡಾ ಕಾಂಪ್ಲೆಕ್ಸ್‌ನಲ್ಲಿ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಕುರಿತು ಬುಡಾ ಅಧಿಕಾರಿಗಳು ಮತ್ತು ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ಸಿಸಿ ಕ್ಯಾಮೆರಾ ಅಳವಡಿಕೆಗೆ ಸೂಚಿಸಿದ್ದೇನೆ ಎಂದು ಎಸ್‌ಪಿ ಶೋಭಾರಣಿ ತಿಳಿಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆ ಈಗ ವಿಸ್ತಾರಗೊಂಡಿದೆ. ಹೀಗಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಹೆಚ್ಚಿನ ಸಿಬ್ಬಂದಿಯನ್ನು ಠಾಣೆಗೆ ಒದಗಿಸಲಾಗಿದೆ. ಅಗತ್ಯವಿದ್ದರೆ ಹೆಚ್ಚಿನ ಸಿಬ್ಬಂದಿ ಕೊಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.