ಸಂಡೂರು: ಶಿಕ್ಷಕರ ದಿನಾಚರಣೆಯ ತಾಲ್ಲೂಕು ಮಟ್ಟದ ಕಾರ್ಯಕ್ರಮವನ್ನು ಪ್ರಾಥಮಿಕ ಶಾಲಾಶಿಕ್ಷಕರು ಬಹಿಷ್ಕರಿಸಿ ಕಪ್ಪುಪಟ್ಟಿ ಧರಿಸುವುದರ ಮೂಲಕ ಶಾಲಾಹಂತದಲ್ಲೇ ಆಚರಿಸಲು ನಿರ್ಧರಿಸಿದ್ದಾರೆ.
ಈ ಕುರಿತು ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎಲ್.ಎಚ್. ತಮ್ಮಪ್ಪ ಮಾತನಾಡಿ, ‘2017 ರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಮಾಡಿದಾಗ ನಿಯಮಗಳನ್ನು ಶಿಕ್ಷಕರಿಗೆ ಪೂರ್ವಾನ್ವಯಗೊಳಿಸಲಾಗಿದೆ. ಈ ರೀತಿ ಯಾವುದೇ ಇಲಾಖೆಗೂ ತಿದ್ದುಪಡಿಯನ್ನು ಪೂರ್ವಾನ್ವಯಗೊಳಿಸಿರುವುದಿಲ್ಲ. ಆದರೆ ನಮಗೆ ಮಾತ್ರ ಇದು ಅನ್ವಯ ಆಗಿಸುವುದರ ಉದ್ದೇಶ ಏನು ? ಅಲ್ಲದೆ ಶಿಕ್ಷಕರು ನೇಮಕಾತಿ ಆದಾಗ 1 ರಿಂದ 7 ಅಥವಾ 1 ರಿಂದ 8 ನೇ ತರಗತಿಗೆ ನೇಮಕಾತಿ ಆಗಿದ್ದರು. ಈ ತಿದ್ದುಪಡಿ ಮೂಲಕ 1 ರಿಂದ 5 ನೇ ತರಗತಿ ಎಂದು ಸೀಮಿತಗೊಳಿಸಿ ಹಿಂಬಡ್ತಿ ನೀಡಲಾಗಿದೆ. ಈ ಅನ್ಯಾಯದ ವಿರುದ್ಧ ಪ್ರತಿರೋಧ ವ್ಯಕ್ತಪಡಿಸಲು ತಾಲ್ಲೂಕಿನ ಪ್ರಾಥಮಿಕ ಶಾಲಾಶಿಕ್ಷಕರು ಕಪ್ಪುಪಟ್ಟಿ ಧರಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ತಮ್ಮ ಈ ಹೋರಾಟಕ್ಕೆ ಕರ್ನಾಟಕರಾಜ್ಯ ಸರ್ಕಾರಿ ನೌಕರರ ಸಂಘ,ಪದವಿಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ, ಬಡ್ತಿ ಮುಖ್ಯ ಗುರುಗಳ ಸಂಘಗಳು ಬೆಂಬಲಿಸಲಿವೆ ಎಂದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಕೊಟ್ರೇಶ್, ಮಧುಕುಮಾರಿ, ಪ್ರತಾಪ್, ವೆಂಕಟಪ್ಪ, ಕರ್ನಾಟಕರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಪರಶುರಾಮ್‌ಚೌಗಳಿ, ಪದವಿಧರ ಶಾಲಾ ಶಿಕ್ಷಕರ ಸಂಘದ ದಕ್ಷಿಣ ಮೂರ್ತಿ, ಪ್ರಕಾಶ್ ಕೆ.ಬಿ, ಸಾವಿತ್ರಿಬಾಯಿ ಪುಲೆ ಶಿಕ್ಷಕರ ಸಂಘದ ಪ್ರೇಮಾ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.