ADVERTISEMENT

ಪ್ರವಾಸೋದ್ಯಮ ನೀತಿ: ಬಳ್ಳಾರಿ, ವಿಜಯನಗರ ಜಿಲ್ಲೆಯ 60 ಪ್ರವಾಸಿ ತಾಣಗಳಿಗೆ ಮಾನ್ಯತೆ

ಬಳ್ಳಾರಿಯಲ್ಲಿ 18, ವಿಜಯನಗರ ಜಿಲ್ಲೆಯಲ್ಲಿ 42 ಪ್ರವಾಸಿ ಸ್ಥಳಗಳು ಗುರುತು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:12 IST
Last Updated 13 ಸೆಪ್ಟೆಂಬರ್ 2025, 6:12 IST
ಬಳ್ಳಾರಿ ಹೊರವಲಯದಲ್ಲಿರುವ ಮಿಂಚೇರಿ ಗುಡ್ಡದ ಮೇಲಿರುವ ಜಡ್ಜ್‌ ಬಂಗ್ಲೊ
ಬಳ್ಳಾರಿ ಹೊರವಲಯದಲ್ಲಿರುವ ಮಿಂಚೇರಿ ಗುಡ್ಡದ ಮೇಲಿರುವ ಜಡ್ಜ್‌ ಬಂಗ್ಲೊ   

ಬಳ್ಳಾರಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪ್ರವಾಸೋದ್ಯಮ ನೀತಿ 2024-29ರಲ್ಲಿ ಅಖಂಡ ಬಳ್ಳಾರಿ (ವಿಜಯನಗರ) ಜಿಲ್ಲೆಯ ಒಟ್ಟು 60 ಪ್ರವಾಸಿ ತಾಣಗಳಿಗೆ ಮಾನ್ಯತೆ ಸಿಕ್ಕಿದೆ. 

ಹೊಸ ನೀತಿಯಲ್ಲಿ ರಾಜ್ಯದ ಒಟ್ಟು 1275 ತಾಣಗಳಿಗೆ ಮಾನ್ಯತೆ ನೀಡಲಾಗಿದೆ. 2020–26ರ ನೀತಿಯಲ್ಲಿ 810 ಸ್ಥಾನಗಳಿಗಷ್ಟೇ ಸ್ಥಾನ ಸಿಕ್ಕಿತ್ತು. ಬಳ್ಳಾರಿಯಲ್ಲಿ ಈ ಹಿಂದೆ 6 ಪ್ರವಾಸಿ ತಾಣಗಳಿಗೆ ಮಾತ್ರವೇ ಮಾನ್ಯತೆ ನೀಡಲಾಗಿತ್ತು. ಈಗ ಆ ಸಂಖ್ಯೆ 18ಕ್ಕೆ ಏರಿದೆ. ವಿಜಯನಗರ ಜಿಲ್ಲೆಯ ಪ್ರವಾಸಿ ತಾಣಗಳ ಸಂಖ್ಯೆ 13ರಿಂದ 42ಕ್ಕೆ ಏರಿಕೆಯಾಗಿದೆ. ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಏಪ್ರಿಲ್‌ನಲ್ಲಿ ಸಲ್ಲಿಸಿದ್ದ ಪ್ರಸ್ತಾವನೆ ಆಧರಿಸಿ ಸರ್ಕಾರವೂ ಪಟ್ಟಿ ಸಿದ್ಧಪಡಿಸಿದೆ. 

ದೇಶೀಯ, ವಿಶ್ವ ಪ್ರವಾಸಿಗರ ಆಕರ್ಷಣೆ, ಉದ್ಯೋಗ, ಆರ್ಥಿಕ, ಉದ್ಯಮಶೀಲತೆ, ಪ್ರಾದೇಶಿಕ, ಪ್ರವಾಸೋದ್ಯಮ ಹೂಡಿಕೆ, ಕೌಶಲ ಅಭಿವೃದ್ಧಿ, ಪರಿಚಿತವಲ್ಲದ ಪ್ರೇಕ್ಷಣೀಯ ಸ್ಥಳನ್ನು ಹೊರ ಜಗತ್ತಿಗೆ ತಿಳಿಸುವುದು, ಪ್ರವಾಸಿ ಮಾರ್ಗದರ್ಶಕರನ್ನು ಪ್ರೋತ್ಸಾಹಿಸುವುದು, ಸ್ಥಳೀಯ–ಸಾಂಪ್ರದಾಯಿಕ ಕರಕುಶಲತೆ, ಪಾಕಪದ್ಧತಿ, ಸಂಸ್ಕೃತಿಯ ಪ್ರಚಾರ ನೀಡುವುದು ಹೊಸ ಪ್ರವಾಸೋದ್ಯಮ ನೀತಿಯ ಧ್ಯೇಯೋದ್ದೇಶಗಳಾಗಿವೆ.  

ADVERTISEMENT

ಅಖಂಡ ಬಳ್ಳಾರಿ ಜಿಲ್ಲೆ ಕೇವಲ ಬಿಸಿಲು, ಬಯಲು ಸೀಮೆ, ಗಣಿಗಾರಿಕೆ, ಕಬ್ಬಿಣದ ಕಾರ್ಖಾನೆಗಳಿಗೆ ಮಾತ್ರ ಸೀಮಿತವಲ್ಲ. ಬದಲಿಗೆ ನೈಸರ್ಗಿಕವಾಗಿ ಸಂಪದ್ಭರಿತವಾದ, ಐತಿಹಾಸಿಕ ಮಾನ್ಯತೆ ಪಡೆದ ತಾಣಗಳು, ಧಾರ್ಮಿಕ ಮಂದಿರಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ಈ ಮೂಲಕ ವಿಶ್ವದ ಪ್ರವಾಸಿಗಳನ್ನು ತನ್ನತ್ತ ಸೆಳೆಯುತ್ತಿದೆ.

ಇದಕ್ಕೆ ಪೂರಕವಾಗಿ 2024–29ರ ಪ್ರವಾಸೋದ್ಯಮ ನೀತಿಯಲ್ಲಿ ಅಖಂಡ ಜಿಲ್ಲೆಯ ಹೆಚ್ಚಿನ ಪ್ರವಾಸಿ ತಾಣಗಳಿಗೆ ಆದ್ಯತೆ ಕೊಡಲಾಗಿದೆ. ಬಳ್ಳಾರಿಯ ಮಿಂಚೇರಿ ಗುಡ್ಡದಲ್ಲಿರುವ ಬಂಗಲೆ, ಆರ್ಥರ್‌ ವೆಲ್ಲೆಸ್ಲಿ ಬಂಗಲೆ, ಟರ್ಕಿ ಹುತಾತ್ಮರ ಸಮಾಧಿಗಳಿಗೂ ಹೊಸ ನೀತಿಯಲ್ಲಿ ಸ್ಥಾನ ಸಿಕ್ಕಿದೆ. ಇದರ ಜತೆಗೆ, ಬಳ್ಳಾರಿ ನಗರದ ಕನಕದುರ್ಗೆ ದೇಗುಲವನ್ನೂ ಪ್ರವಾಸೋದ್ಯಮ ನೀತಿಯಲ್ಲಿ ಪರಿಗಣಿಸಲಾಗಿದೆ.

ಇನ್ನು ವಿಜಯನಗರ ಜಿಲ್ಲೆಯಲ್ಲಿ ಈ ಹಿಂದೆ ಇದ್ದ 13 ಪ್ರವಾಸಿ ತಾಣಗಳಿಗೆ ಬದಲಾಗಿ 42 ತಾಣಗಳಿಗೆ ಮಾನ್ಯತೆ ನೀಡಲಾಗಿದೆ. ಹೊಸದಾಗಿ ಸೇರ್ಪಡೆಯಾಗಿರುವ ತಾಣಗಳ ಪೈಕಿ ದೇಗುಲಗಳೇ ಅಧಿಕವಾಗಿರುವುದು ವಿಶೇಷ. ಈ ಮೂಲಕ ಧಾರ್ಮಿಕ ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ನೀತಿಯಲ್ಲಿದೆ.  

ಸದ್ಯ ಎರಡೂ ಜಿಲ್ಲೆಗಳಲ್ಲಿ ಗುರುತಿಸಿರುವ ಪ್ರದೇಶಗಳು ಮೂಲಸೌಕರ್ಯದ ದೃಷ್ಟಿಯಿಂದ ಮತ್ತಷ್ಟು ಅಭಿವೃದ್ಧಿಯಾಗಬೇಕಾದ ಅಗತ್ಯವಿದ್ದು, ಸರ್ಕಾರ ಗಮನಿಸಬೇಕಾದ ಅಗತ್ಯವೂ ಇದೆ.

ಹೊಸ ನೀತಿಯಲ್ಲಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಹೆಚ್ಚಿನ ತಾಣಳಿಗೆ ಮಾನ್ಯತೆ ಸಿಕ್ಕಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಪೂರಕವಾಗಲಿದೆ.
– ಪ್ರಭುಲಿಂಗ ತಳಕೇರಿ, ಉಪ ನಿರ್ದೇಶಕರು ಪ್ರವಾಸೋದ್ಯಮ ಇಲಾಖೆ

2024–29ರ ನೀತಿಯಲ್ಲಿ ಪಟ್ಟಿ ಮಾಡಿರುವ ತಾಣಗಳು

ಬಳ್ಳಾರಿ: ಬಳ್ಳಾರಿ ಕೋಟೆ ಟರ್ಕಿ ಹುತಾತ್ಮರ ಸಮಾಧಿ ಬೂದಿದಿಬ್ಬ ಸಂಗನಕಲ್ಲು ಮಿಂಚೇರಿ ಬೆಟ್ಟ ಮೋಕಾ ವೃಕ್ಷೋದ್ಯಾನ ನಲ್ಲಚೆರವು ಕನಕದುರ್ಗೆ ದೇಗುಲ ಆರ್ಥರ್‌ ವೆಲ್ಲೆಸ್ಲಿ ಬಂಗ್ಲೆ ಸಂಡೂರಿನ ರಾಮಗಢ ಭೀಮತೀರ್ಥ ಸಂಡೂರು ವೀವ್‌ ಪಾಯಿಂಟ್‌ ನಾರಿಹಳ್ಳ ಜಲಾಶಯ ಕುಮಾರಸ್ವಾಮಿ ದೇಗುಲ ಕೆಂಚನಗುಡ್ಡ ಕಂಪ್ಲಿ ಕೋಟೆ ಸೋಮಪ್ಪ ಕೆರೆ ಕುರುಗೋಡು ದೊಡ್ಡಬಸವೇಶ್ವರ ದೇಗುಲ.

ವಿಜಯನಗರ ಜಿಲ್ಲೆ: ಹಂಪಿ ಸ್ಮಾರಕ ತುಂಗಭದ್ರಾ ಜಲಾಶಯ ದರೋಜಿ ಕರಡಿಧಾಮ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ ಜಂಬುನಾಥೇಶ್ವರ ದೇಗುಲ ಜೋಳದರಾಶಿ ಗುಡ್ಡ ರಂಗನಾಥ ದೇಗುಲ ಗಾಳೆಮ್ಮ ದೇವಸ್ಥಾನ ಹೊಸೂರಮ್ಮ ದೇವಸ್ಥಾನ ವಡಕರಾಯನ ಗುಡಿ ಲಕ್ಷ್ಮೀನಾರಾಯಣ– ಆಂಜನೇಯ ಸ್ವಾಮಿ ದೇವಸ್ಥಾನ ಗುಡ್ಡದ ತಿಮ್ಮಪ್ಪನ ಗುಡಿ ಏಳು ಎಡೆ ನಾಗಪ್ಪನ ದೇಗುಲ ಮಲ್ಲಿಕಾರ್ಜುನ ದೇವಸ್ಥಾನ ಹಾಗೂ ಅನಂತಶಯನ ಗುಡಿ ಕುರುವತ್ತಿ ಬಸವೇಶ್ವರ ದೇವಸ್ಥಾನ ಮೈಲಾರಲಿಂಗೇಶ್ವರ ಕಲ್ಲೇಶ್ವರ ದೇಗುಲ ಹೂವಿನ ಹಡಗಲಿ ಅನಂತಶಯನ ಗುಡಿ ಆಂಜನೇಯ ದೇವಸ್ಥಾನ ಸೋಗಿ ವೀರಭದ್ರೇಶ್ವರ ದೇವಸ್ಥಾನ ಸೋಗಿ ಬೆಟ್ಟದ ಮಲ್ಲೇಶ್ವರ ದೇವಸ್ಥಾನ ಯಲ್ಲಮ್ಮ ದೇವಿ ದೇವಸ್ಥಾನ ಗುರು ಕೊಟ್ಟೂರೇಶ್ವರ ದೇವಸ್ಥಾನ ಚಿರಿಬಿ ಮೂಗಬಸವೇಶ್ವರ ದೇವಸ್ಥಾನ ಗಾಣಘಟ್ಟಿ ಮಾಯಮ್ಮ ಮರುಳಸಿದ್ದೇಶ್ವರ ದೇವಸ್ಥಾನ ಗುಡೇಕೋಟೆ ಕರಡಿಧಾಮ ಜರಿಮಲೆ ಕೋಟೆ ಕೂಡ್ಲಿಗಿ ಅನಂತಶಯನಗುಡಿ ವೇಣುಗೋಪಾಲ ಸ್ವಾಮಿ ದೇವಸ್ಥಾನ ಅಂಕಸಮುದ್ರ ಪಕ್ಷಿಧಾಮ ಬಂಡೆರಂಗನಾಥ ದೇವಸ್ಥಾನ ಬೆಣಕಲ್ಲು ಗುರುಬಸವೇಶ್ವರ ದೇವಸ್ಥಾನ ಬೆಣಕಲ್ಲು ಗುರುಬಸವೇಶ್ವರ ದೇವಸ್ಥಾನ ದುರ್ಗಾಂಬಿಕಾ ದೇವಸ್ಥಾನ ಬಾಗಳಿ ಕಲ್ಲೇಶ್ವರ ದೇವಸ್ಥಾನ ಉಚ್ಚಂಗಿದುರ್ಗ ಕೋಟೆ ಹರಪನಹಳ್ಳಿ ಗೋಕರ್ಣೇಶ್ವರ ದೇವಸ್ಥಾನ ನೀಲಗುಂದ ಭೀಮೇಶ್ವರ ದೇವಸ್ಥಾನ ಚಿಗಟೇರಿ ನಾರದಮುನಿ ದೇವಸ್ಥಾನ ವೇಣುಗೋಪಾಲಸ್ವಾಮಿ ದೇವಸ್ಥಾನ ಗೋಣಿ ಬಸವೇಶ್ವರ ದೇವಸ್ಥಾನ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.