ADVERTISEMENT

ಬಳ್ಳಾರಿ ಘರ್ಷಣೆ: ಸಿಬಿಐ ತನಿಖೆಗೆ ಆಗ್ರಹಿಸಿ ಇಂದು ಬಿಜೆಪಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 23:41 IST
Last Updated 16 ಜನವರಿ 2026, 23:41 IST
<div class="paragraphs"><p> ಬಿಜೆಪಿ</p></div>

ಬಿಜೆಪಿ

   

ಬಳ್ಳಾರಿ: ಬಳ್ಳಾರಿ ಘರ್ಷಣೆ ಪ್ರಕರಣದ ಸಂಬಂಧ ಶಾಸಕ ನಾರಾ ಭರತ್ ರೆಡ್ಡಿ, ಅವರ ಬೆಂಬಲಿಗರನ್ನು ಬಂಧಿಸಬೇಕು ಮತ್ತು ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಶನಿವಾರ (ಜನವರಿ 17) ನಗರದಲ್ಲಿ ಬಹಿರಂಗ ಸಮಾವೇಶ ಹಮ್ಮಿಕೊಂಡಿದೆ.

‘ಎಪಿಎಂಸಿ ಪ್ರಾಂಗಣದಲ್ಲಿ ಸಮಾವೇಶ ನಡೆಯಲಿದ್ದು, 30 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ’ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಅಹಿತಕರ ಘಟನೆಗೆ ಆಸ್ಪದವಾಗದಂತೆ ನಿಗಾ ವಹಿಸಲು 2,500 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ADVERTISEMENT

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ, ಮುಖಂಡರಾದ ಆರ್‌. ಅಶೋಕ, ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಸಂಸದರಾದ ಗೋವಿಂದ ಕಾರಜೋಳ, ಜಗದೀಶ ಶೆಟ್ಟರ್‌ ಮತ್ತಿತರರು ಭಾಗವಹಿಸುವರು’ ಎಂದು ಶಾಸಕ ಜನಾರ್ದನ ರೆಡ್ಡಿ ತಿಳಿಸಿದ್ದಾರೆ. 

ಇಬ್ಬರು ಅಂಗರಕ್ಷಕರ ಬಂಧನ: 

ಘರ್ಷಣೆ ಮತ್ತು ಹತ್ಯೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಶುಕ್ರವಾರ ಶಾಸಕ ಭರತ್‌ ರೆಡ್ಡಿ ಕಡೆಯವರ ಬಲ್ಜೀತ್ ಸಿಂಗ್ ಮತ್ತು ಮಹೇಂದ್ರ ಸಿಂಗ್ ಎಂಬ ಅಂಗರಕ್ಷಕರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರನ್ನೂ ಬ್ರೂಸ್‌ಪೇಟೆಯ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಒಳಪಡಿಸಿ, ನಂತರ ಬೆಂಗಳೂರಿಗೆ ಕರೆದೊಯ್ಯಲಾಯಿತು ಎಂದು ಮೂಲಗಳು ಹೇಳಿವೆ.

ಪ್ರಕರಣ ಸಂಬಂಧ ಗುರುಚರಣ್‌ ಸಿಂಗ್‌ ಎಂಬ ಖಾಸಗಿ ಅಂಗರಕ್ಷಕನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಭರತ್‌ ರೆಡ್ಡಿ ಕಡೆಯ ಅಂಗರಕ್ಷಕರು ಆತ್ಮರಕ್ಷಣೆಗಾಗಿ ಜಮ್ಮು ಕಾಶ್ಮೀರದಿಂದ ಬಂದೂಕು ಪರವಾನಗಿ ಪಡೆದಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.