ADVERTISEMENT

ಬಳ್ಳಾರಿ: ಸೂಕ್ತ ಪರಾಮರ್ಶೆ ನಡೆಸುವುದೇ ‘ದಿಶಾ’?

ಸಂಸದ ತುಕಾರಾಂ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆ | ಕೇಂದ್ರ ಕಾರ್ಯಕ್ರಮಗಳ ‘ಸೂಕ್ತ’ ಪರಾಮರ್ಶೆ ನಿರೀಕ್ಷೆ

ಆರ್. ಹರಿಶಂಕರ್
Published 13 ಅಕ್ಟೋಬರ್ 2025, 4:46 IST
Last Updated 13 ಅಕ್ಟೋಬರ್ 2025, 4:46 IST
<div class="paragraphs"><p>ಕಡತ</p></div>

ಕಡತ

   

(ಸಾಂದರ್ಭಿಕ ಚಿತ್ರ)

ಬಳ್ಳಾರಿ: ‘ಜಿಲ್ಲಾ ಅಭಿವೃದ್ಧಿ ಸಮನ್ವಯ ಉಸ್ತುವಾರಿ ಸಮಿತಿ–ದಿಶಾ’ದ ದ್ವಿತೀಯ ತ್ರೈಮಾಸಿಕ ಸಭೆ ಇಂದು ನಡೆಯಲಿದೆ. ಕೇಂದ್ರದ ಕಾರ್ಯಕ್ರಮಗಳ ಪರಾಮರ್ಶೆ ನಡೆಸುವ ಈ ಸಭೆಯಲ್ಲಾದರೂ, ಇಲಾಖೆಗಳ ಕಾರ್ಯವೈಖರಿಯ ಸೂಕ್ತ ವಿಮರ್ಶೆ ನಡೆಯುವುದೇ ಎಂಬ ಪ್ರಶ್ನೆ ಎದುರಾಗಿದೆ.  

ADVERTISEMENT

ಇತ್ತೀಚೆಗಷ್ಟೇ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್‌ ಜಮೀರ್‌ ಅಹಮದ್‌ ಖಾನ್‌ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿಯ ಕೆಡಿಪಿ ಸಭೆ ನಡೆಯಿತು. ವರ್ಷದ ಬಳಿಕ, ನಡೆದ ಈ ಸಭೆಯಲ್ಲಿ ಜಿಲ್ಲೆಯ ವಿವಿಧ ವಿಷಯಗಳು ಚರ್ಚೆಯಾಗಲಿವೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಹಾಗೆ ಆಗಲೇ ಇಲ್ಲ.

ಹಲವು ತಾಸುಗಳ ವಿಳಂಬದ ಬಳಿಕ ನಾಮಕಾವಸ್ಥೆಗೆ ಎಂಬಂತೆ ನಡೆದ ಕೆಡಿಪಿ ಸಭೆಗೆ ಪೊಲೀಸ್‌ ಅಧಿಕಾರಿಯೊಬ್ಬರ ಹಠಾತ್‌ ಸಾವಿನ ಸೂತಕ ಆವರಿಸಿತು. ಸಭೆಯು ಅರ್ಧಕ್ಕೇ  ಮೊಟಕುಗೊಂಡಿತ್ತು. ಹೀಗಾಗಿ, ಕೆಡಿಪಿ ಸಭೆಯಲ್ಲಿ ಆಗದ ಪರಾಮರ್ಶೆ ದಿಶಾದಲ್ಲಾದರೂ ಆಗಬಹುದೇ ಎಂಬ ನಿರೀಕ್ಷೆ ಇದೆ. 

ದಿಶಾ ಉದ್ದೇಶ ಈಡೇರಲಿ:  ದಿಶಾ ಸಮಿತಿಯು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯಾಗಿದ್ದು, ಜಿಲ್ಲಾ ಮಟ್ಟದಲ್ಲಿ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಮತ್ತು ಅನುಷ್ಠಾನಕ್ಕೆ ತರಲು ರಚಿಸಲಾಗಿದೆ. ಜಿಲ್ಲೆಯ ಸಂಸತ್ ಸದಸ್ಯರ ಅಧ್ಯಕ್ಷತೆಯಲ್ಲಿ, ಪರಿಣಾಮಕಾರಿ ಮತ್ತು ಸಕಾಲಿಕ ಅಭಿವೃದ್ಧಿ ಯೋಜನೆಗಳಿಗಾಗಿ ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಸಮನ್ವಯವನ್ನು ಸುಧಾರಿಸುವುದು ಇದರ ಉದ್ದೇಶ. ಈ ತ್ರೈಮಾಸಿಕ ಸಭೆಗಳು ಎಲ್ಲಾ ಅಭಿವೃದ್ಧಿ ಚಟುವಟಿಕೆಗಳ ವಿಮರ್ಶೆ ಮತ್ತು ಅನುಷ್ಠಾನ ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕು.  

ಆದರೆ, ಈ ಸಭೆಗಳು ಕೆಲವೇ ಅಧಿಕಾರಿಗಳನ್ನು ಹೊಗಳುವ, ಕೆಲವೇ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ಗುರಿಪಡಿಸುವ ಕಾರ್ಯಕ್ರಮಗಳಾಗಿ ರೂಪುಗೊಳ್ಳುತ್ತಿರುವ ಆರೋಪಗಳಿವೆ. ಸಭೆ ಇಂಥವಕ್ಕೆ ಸೀಮಿತವಾಗದೇ ನಿರ್ದಿಷ್ಟ ಕಾರ್ಯಕ್ರಮಗಳ ಪರಾಮರ್ಶೆ, ವಿಮರ್ಶೆಗೆ ವೇದಿಕೆಯಾಗಬೇಕು ಎಂಬ ಮಾತುಗಳು ಕೇಳಿ ಬಂದಿವೆ. ಇದರ ಜತೆಗೆ, ದಿಶಾ ವ್ಯಾಪ್ತಿಗೆ ಒಳಪಡದ ವಿಚಾರಗಳು ಚರ್ಚೆಯಿಂದ ದೂರವಿರಬೇಕು ಎಂಬ ಅಭಿಪ್ರಾಯಗಳಿವೆ.   

‘ಪ್ರಧಾನ ಮಂತ್ರಿ ಗ್ರಾಮ ಸಡಕ್ , ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ,  ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ, ಪ್ರಧಾನ ಮಂತ್ರಿ ಫಸಲ್ ಭೀಮಾ , ರಾಷ್ಟ್ರೀಯ ಕೃಷಿ ವಿಕಾಸ, ರಾಷ್ಟ್ರೀಯ ಆರೋಗ್ಯ ಮಿಷನ್, ಗ್ರಾಮೀಣ ಕುಡಿಯುವ ನೀರು, ಸ್ವಚ್ಛ ಭಾರತ್, ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ್, ಸಮಗ್ರ ಶಿಶು ಅಭಿವೃದ್ಧಿ ಯೋಜನೆಗಳ ಕುರಿತು ಸರಿಯಾದ ಮಾಹಿತಿಯೇ ಇಲ್ಲವಾಗಿದೆ. ಇವುಗಳ ಆಳ–ಅಗಲವನ್ನು ಸಭೆಯಲ್ಲಿ ಒರೆಗೆ ಹಚ್ಚಬೇಕು’ ಎಂಬ ಕೂಗು ಇದೆ.  

ಸರಿಯಾದ ಸಮಯಕ್ಕೆ ಆರಂಭವಾಗಲಿ: ಜಿಲ್ಲೆಯಲ್ಲಿ ಯಾವ ಸರ್ಕಾರಿ ಕಾರ್ಯಕ್ರಮಗಳೂ ಇತ್ತೀಚೆಗೆ ಸಮಯಕ್ಕೆ ಸರಿಯಾಗಿ ಆರಂಭವಾದ ಉದಾಹರಣೆಗಳೇ ಇಲ್ಲ. ಸಂಸದ ತುಕಾರಾಂ ಅವರಾದರೂ, ನಿಗದಿತ ಸಮಯಕ್ಕೆ ಸರಿಯಾಗಿ ಸಭೆ ಆರಂಭಿಸಲಿ ಎಂಬುದು ನಾಗರಿಕರು ಮತ್ತು ಮುಖ್ಯವಾಗಿ ಅಧಿಕಾರಿಗಳ ಒತ್ತಾಯವೂ ಆಗಿದೆ.

ಅಹವಾಲು ಸ್ವೀಕಾರ ಇಂದು

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಸಂಸದ ಈ.ತುಕಾರಾಮ್ ಅವರು ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಹಾಗೂ ಇತರೆ ಯೋಜನೆಗಳ ಕುರಿತಂತೆ ಅ.13 ರಂದು ಬೆಳಿಗ್ಗೆ 9.30 ಗಂಟೆಗೆ ನಗರದ ಕೋಟೆ ಪ್ರದೇಶದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಅಹವಾಲುಗಳಿರುವ ಸಾರ್ವಜನಿಕರು ಲಿಖಿತವಾಗಿ ಮನವಿ ಸಲ್ಲಿಸಬಹುದು.

ಬೆಳಿಗ್ಗೆ 10.30ಕ್ಕೆ ನಗರದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ‘ದಿಶಾ’ ಸಮಿತಿಯ ದ್ವಿತೀಯ ತ್ರೈಮಾಸಿಕ ಸಭೆ ನಿಗದಿಯಾಗಿದೆ.

ಸಭೆಗೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಅಗತ್ಯಪೂರ್ಣ ಮಾಹಿತಿಯೊಂದಿಗೆ ತಪ್ಪದೇ ಹಾಜರಿರಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ದಿಶಾ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ ಮಹಮ್ಮದ್ ಹ್ಯಾರೀಸ್ ಸುಮೈರ್ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.