ADVERTISEMENT

ಕಂಪ್ಲಿ | ಬಿರುಗಾಳಿಗೆ ನೆಲಕಚ್ಚಿದ ಬಾಳೆ: ಮಾರುಕಟ್ಟೆಯಲ್ಲಿ ದರ ಕುಸಿತ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 15:27 IST
Last Updated 22 ಏಪ್ರಿಲ್ 2025, 15:27 IST
ಕಂಪ್ಲಿ ತಾಲ್ಲೂಕು ಅರಳಿಹಳ್ಳಿ ತಾಂಡಾ ಬಳಿಯ ಕಾಕರ್ಲ ಭಾಸ್ಕರರಾವ್ ಅವರಿಗೆ ಸೇರಿದ  ಜಿ-9ತಳಿ ಬಾಳೆ ಬಿರುಗಾಳಿಗೆ ನೆಲಕಚ್ಚಿದೆ
ಕಂಪ್ಲಿ ತಾಲ್ಲೂಕು ಅರಳಿಹಳ್ಳಿ ತಾಂಡಾ ಬಳಿಯ ಕಾಕರ್ಲ ಭಾಸ್ಕರರಾವ್ ಅವರಿಗೆ ಸೇರಿದ  ಜಿ-9ತಳಿ ಬಾಳೆ ಬಿರುಗಾಳಿಗೆ ನೆಲಕಚ್ಚಿದೆ   

ಕಂಪ್ಲಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಬೆಳೆದಿದ್ದ ಸುಗಂಧಿ, ಏಲಕ್ಕಿ, ಜಿ-9 ತಳಿ ಬಾಳೆ ಫಸಲು ಭಾನುವಾರ ರಾತ್ರಿ ಬೀಸಿದ ಬಿರುಗಾಳಿ ರಭಸಕ್ಕೆ ನೆಲಕ್ಕೊರಗಿದೆ.

ಅರಳಿಹಳ್ಳಿ ತಾಂಡಾ, ಶಂಕರಸಿಂಗ್ ಕ್ಯಾಂಪ್, ನೆಲ್ಲೂಡಿ ಕೊಟ್ಟಾಲು ಭಾಗದಲ್ಲಿ ಬೆಳೆದಿದ್ದ ಜಿ-9ತಳಿ ಬಾಳೆ ಪ್ರಥಮ(ಕನ್ಯಾ) ಫಲ ನೆಲಕಚ್ಚಿದ್ದು, ರೈತರಿಗೆ ಅಪಾರ ನಷ್ಟ ಉಂಟಾಗಿದೆ.

‘8 ಎಕರೆ ಏಲಕ್ಕಿ, 12 ಎಕರೆ ಜಿ-9ತಳಿ ಬಾಳೆ ಬೆಳೆದಿದ್ದೆ. ಅದರಲ್ಲಿ ಎಕರೆಗೆ ಅಂದಾಜು 300 ಬಾಳೆಕಂಬಗಳು ಬಿದ್ದಿವೆ. ಈ ಮುನ್ನ ಸುಗಂಧಿ ಬಾಳೆ ಕೆ.ಜಿಗೆ ₹18ರಿಂದ ₹20, ಏಲಕ್ಕಿ ಬಾಳೆ ₹50ರಿಂದ ₹60ಕ್ಕೆ ಮಾರಾಟವಾಗುತ್ತಿತ್ತು. ಆದರೆ, ಈಗ ಬಾಳೆ ನೆಲಕಚ್ಚಿದ್ದರಿಂದ ಮಾರುಕಟ್ಟೆಯಲ್ಲಿ ಕ್ರಮವಾಗಿ ಕೆ.ಜಿಗೆ ₹13, ₹36ಕ್ಕೆ ಕುಸಿದಿದೆ’ ಎಂದು ಬಾಳೆ ಬೆಳೆಗಾರ ಕಾಕರ್ಲ ಭಾಸ್ಕರರಾವ್ ಬೇಸರ ವ್ಯಕ್ತಪಡಿಸಿದರು.

ADVERTISEMENT

‘1,500 ಹೆಕ್ಟೇರ್‌ನಲ್ಲಿ ಬಾಳೆ ಬೆಳೆಯಲಾಗಿದ್ದು, ಅದರಲ್ಲಿ ಶೇ 20ರಷ್ಟು ಹಾನಿಯಾಗಿದೆ. ಕೂಡಲೇ ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ನಷ್ಟ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು’ ಎಂದು ರೈತರಾದ ಚಲ್ಲಾ ರಂಗಯ್ಯ ಮತ್ತು ಅಯ್ಯೋದಿ ವೆಂಕಟೇಶ ಒತ್ತಾಯಿಸಿದರು.

‘ಬಾಳೆ ಬೆಳೆ ಹಾನಿ ಬಗ್ಗೆ ಪ್ರಾಥಮಿಕ ವರದಿ ಸಲ್ಲಿಸುವಂತೆ ಸಹಾಯಕ ತೋಟಗಾರಿಕೆ ಅಧಿಕಾರಿಗೆ ಸೂಚಿಸಿದ್ದೇನೆ. ವರದಿ ಬಂದ ಬಳಿಕ ಮುಂದಿನ ಕ್ರಮಕ್ಕಾಗಿ ಹಿರಿಯ ಅಧಿಕಾರಿಗಳಿಗೆ ರವಾನಿಸುತ್ತೇನೆ’ ಎಂದು  ಹಿರಿಯ ತೋಟಗಾರಿಕೆ ನಿರ್ದೇಶಕರಾದ ರತ್ನಪ್ರಿಯ ಎರಗಲ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.