ಹಗರಿಬೊಮ್ಮನಹಳ್ಳಿ: ‘ಹಣ ಕೊಡೋರು ತುಂಬಾ ಜನ ರಾಜಕಾರಣಿಗಳು ಇದ್ದಾರೆ. ಆದರೆ ವೇದಿಕೆಗಳ ಮೇಲೆ ಹಿಂದೂ ಧರ್ಮದ ಪರವಾಗಿ ಎದೆಗಾರಿಕೆಯಿಂದ ಮಾತನಾಡುವ ಜೈಶ್ರೀರಾಮ್ ಎನ್ನುವ ನಿಜಯವಾದ ನಾಯಕರು ಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದಲ್ಲಿ ಹಿಂದೂ ಮಹಾ ಗಣಪತಿ ಸಮಿತಿಯಿಂದ ಗುರುವಾರ ಏರ್ಪಡಿಸಿದ್ದ 12ನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಚುನಾವಣೆಯಲ್ಲಿ ನನಗೆ ನಿರ್ದಿಷ್ಟ ಧರ್ಮವೊಂದರ ಮತಗಳು ಬೇಡ. ಗಣಪತಿ ಕೂಡಿಸಲು, ಡಿಜೆ ಮೆರವಣಿಗೆಗೆ ನೂರೆಂಟು ಕಾನೂನುಗಳು, ಆದರೆ ಮುಸ್ಲಿಮರು ಪ್ರತಿದಿನ ಐದಾರು ಬಾರಿ ಆಜಾನ್ ಕೂಗುವುದಕ್ಕೆ ಯಾವುದೇ ನಿಯಮಗಳಿಲ್ಲ. ಸನಾತನ ಧರ್ಮದ ಎಲ್ಲ ದೇವರ ಪೂಜೆ ಮಾಡಲು ಗಣಪತಿ ಪೂಜೆ ಮೊದಲು ಮಾಡಬೇಕು. ಆದರೆ ಗಣಪತಿ ಪ್ರತಿಷ್ಠಾಪಿಸಲು ಸರ್ಕಾರದ ಅನುಮತಿ ಬೇಕು’ ಎಂದು ಲೇವಡಿ ಮಾಡಿದರು.
‘ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗಲೂ ಯಾವುದೇ ಹಿಂದೂಪರವಾಗಿ ಕ್ರಮ ಕೈಗೊಳ್ಳಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕೇವಲ ಗಾಂಧಿ, ನೆಹರು ಅವರಿಂದ ಸ್ವಾತಂತ್ರ್ಯ ಸಿಕ್ಕಿಲ್ಲ. ಭಗತ್‍ಸಿಂಗ್, ಚಂದ್ರಶೇಖರ್ ಆಜಾದ್, ನೇತಾಜಿ ಸುಭಾಷ್‍ಚಂದ್ರ ಬೋಸ್ ಅವರಿಂದಲೂ ಸ್ವಾತಂತ್ರ್ಯ ದೊರೆತಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದೆಲ್ಲಾ ಈಗ ನಿಜವಾಗುತ್ತಿದೆ. ದೇಶ ಇಬ್ಬಾಗವಾಗುವುದಕ್ಕೆ ಅಂಬೇಡ್ಕರ್ ಅವರ ಸಮ್ಮತಿ ಇರಲಿಲ್ಲ, ಯಾರನ್ನೋ ಪ್ರಧಾನಮಂತ್ರಿ ಮಾಡಲು ದೇಶ ಒಡೆಯಿತು’ ಎಂದರು.
‘ಈಚೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಚಾಮುಂಡೇಶ್ವರಿ ಸರ್ಕಾರದ್ದೆಂದು ಹೇಳಿದ್ದಾರೆ. ಹಾಗಾದರೆ ವಕ್ಫ್ ಆಸ್ತಿ ಎಲ್ಲ ಹಿಂದೂಗಳದೇ’ ಎಂದು ಪ್ರಶ್ನೆ ಮಾಡಿದರು.
‘ರಾಜ್ಯದಲ್ಲಿ ವಿವಿಧ ಪಕ್ಷಗಳಿಂದ ಉಚ್ಛಾಟಿತರಾದ ಮೂರು ಜನ ಮುಖ್ಯಮಂತ್ರಿಯಾಗಿದ್ದಾರೆ. 2028ಕ್ಕೆ ಬಿಜೆಪಿ ಪಕ್ಷದಿಂದ ಉಚ್ಛಾಟಿತರಾದವರು ಸಿಎಂ ಆಗುತ್ತಾರೆ. ಕೇವಲ ಒಂದೇ ಕುಟುಂಬದವರೆ ಮುಖ್ಯಮಂತ್ರಿಯಾಗಬೇಕೆ’ ಎಂದು ಪ್ರಶ್ನಿಸಿದರು.
‘ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ವಾಲ್ಮೀಕಿ ಮತ್ತು ಭೋವಿ ಅಭಿವೃದ್ಧಿ ನಿಗಮದಲ್ಲಿ ಭಾರಿ ಹಗರಣ ನಡೆದಿದೆ. ಇವರಿಂದ ದಲಿತರ ಉದ್ಧಾರ ಸಾದ್ಯವಿಲ್ಲ. ವಿರೋಧ ಪಕ್ಷವೂ ಹೊಂದಾಣಿಕೆ ರಾಜಕೀಯದಲ್ಲಿ ತೊಡಗಿಕೊಂಡಿದೆ, ಪರಸ್ಪರ ರಾಜೀ ಆಡಳಿತ ನಡೆಯುತ್ತಿದೆ’ ಎಂದು ಆರೋಪಿಸಿದರು.
ಶಾಸಕ ಕೆ.ನೇಮರಾಜನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದೂ ಧರ್ಮವು ಎಲ್ಲರ ಜೀವನ ಪದ್ದತಿ ಮತ್ತು ಸಂಸ್ಕೃತಿಯಾಗಿದೆ. ಇದರ ಮೂಲ ತತ್ವಗಳು ಆಳವಾಗಿವೆ. ಸಾವಿರಾರು ವರ್ಷಗಳ ಇತಿಹಾಸವಿದೆ ಎಂದರು.
ಯತ್ನಾಳ್ ಅವರು ಹಿಂದುತ್ವದ ಪ್ರತಿಪಾದನೆಯ ಕೇಂದ್ರ ಬಿಂದು ಆಗಿದ್ದಾರೆ. ಹಿಂದೂಧರ್ಮ ಮಹಿಳೆಯರಿಗೆ ಉನ್ನತ ಸ್ಥಾನ ನೀಡಿದೆ. ಹೇಡಿ ಪಾಕಿಸ್ತಾನಕ್ಕೆ ಉಪ್ಪು ನೀರು ಕುಡಿಸಿದ ಹಿರಿಮೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ಹಿಂದೂ ಧರ್ಮಕ್ಕೆ ಚ್ಯುತಿ ತರುವ ರೀತಿಯಲ್ಲಿ ಎಡಪಂಥದ ಚಿಂತನೆಯ ಕೆಲವರು ಶಬರಿಮಲೈ, ಶನಿಸಿಂಗ್ನಾಪುರ ಸೇರಿದಂತೆ ಧಾರ್ಮಿಕ ಕ್ಷೇತ್ರಗಳ ಮೇಲೆ ಅವ್ಯಾಹತವಾಗಿ ದಾಳಿ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ರಾಜ್ಯದಲ್ಲಿ ಏನೇ ಘಟನೆ ನಡೆದರೂ ರಾಜ್ಯದ ಗೃಹಮಂತ್ರಿ ಏನೂ ಗೊತ್ತಿಲ್ಲ ಎನ್ನುತ್ತಾರೆ’ ಎಂದು ಹಾಲವೀರಪ್ಪಜ್ಜ ಸ್ವಾಮೀಜಿ ಲೇವಡಿ ಮಾಡಿದರು.
ಪುರಸಭೆ ಸದಸ್ಯ ಬಿ.ಗಂಗಾಧರ, ದೀಪಕ್ ಸಾ ಮಠಾರೆ, ನಾಗರಾಜ ಜನ್ನು, ಉಲುವತ್ತಿ ಪಿಕೆಪಿಎಸ್ ಅಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ್, ನಾಣ್ಯಾಪುರ ಕೃಷ್ಣಮೂರ್ತಿ, ಬಾದಾಮಿ ಮೃತ್ಯುಂಜಯ, ಸಮಿತಿಯ ಚಂದ್ರಶೇಖರ್, ಸಂತೋಷ್ ಪೂಜಾರ್, ಬಿ.ವಿ.ನಾಗರಾಜ್, ಕೊಟ್ರೇಶ್ ಶೆಟ್ಟರ್, ಕೊಳ್ಳಿ ಪ್ರಕಾಶ್, ಮಂಜುನಾಥ್ ಹುಲ್ಮನಿ, ಶಿವಶಂಕರಯ್ಯ, ಪರಶುರಾಮ ಧಲಭಂಜನ್, ಸಂದೀಪ್ ಶಿವಮೊಗ್ಗ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.