ADVERTISEMENT

ಹೂವಿನಹಡಗಲಿ: ಬಾವಿಹಳ್ಳಿ ಶಾಲೆಗೆ ಹೊಸ ಮೆರುಗು

ಮಕ್ಕಳ ಕೈಬೀಸಿ ಕರೆಯುತ್ತಿರುವ ಗೋಡೆಗಳ ಮೇಲಿನ ಚಿತ್ರ ಬರಹ

ಕೆ.ಸೋಮಶೇಖರ
Published 19 ಜೂನ್ 2021, 10:09 IST
Last Updated 19 ಜೂನ್ 2021, 10:09 IST
ಶಾಲೆಯ ಗೋಡೆ ಮೇಲೆ ಚಿತ್ರ ಬಿಡಿಸುತ್ತಿರುವುದು
ಶಾಲೆಯ ಗೋಡೆ ಮೇಲೆ ಚಿತ್ರ ಬಿಡಿಸುತ್ತಿರುವುದು   

ಹೂವಿನಹಡಗಲಿ: ದುಃಸ್ಥಿತಿಯಲ್ಲಿದ್ದ ತಾಲ್ಲೂಕಿನ ಬಾವಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸ ಮೆರುಗು ಬಂದಿದೆ.

ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಣಪ್ರೇಮಿಗಳ ನೆರವಿನಿಂದ ಎಲ್ಲರೂ ಅಚ್ಚರಿ ಪಡುವಂತೆ ಶಾಲೆ ಬದಲಾಗಿದೆ. ಹೊಸ ಶೈಕ್ಷಣಿಕ ವರ್ಷ ಪ್ರಾರಂಭಕ್ಕೆ ಸಜ್ಜುಗೊಂಡಿದೆ. ಈ ಶಾಲೆಯಲ್ಲಿ ಓದಿ ಶಿಕ್ಷಕರಾಗಿರುವ ಕೊಟ್ರೇಶ ಹಿರೇಮಠ, ಆರ್.ಬಿ.ಗುರುಬಸವರಾಜ, ಕನ್ನಿಹಳ್ಳಿ ಇಸ್ಮಾಯಿಲ್ ಹಾಗೂ ಗೆಳೆಯರ ಕಾಳಜಿ, ಭಿನ್ನ ಯೋಚನೆಯಿಂದ ಶಾಲೆ ಬದಲಾಗಿದೆ. ಗ್ರಾಮಸ್ಥರು ಶಾಲೆಯ ಅಂದ ಹೆಚ್ಚಿಸಲು ಉದಾರ ದೇಣಿಗೆ ನೀಡಿದ್ದಾರೆ. ಸದ್ಯ ₹1.50 ಲಕ್ಷ ಸಂಗ್ರಹವಾಗಿದ್ದು, ಶಾಲೆಯ ಚಿತ್ರಣ ಬದಲಾಗಿದ್ದನ್ನು ಕಂಡು ಕೆಲವರು ಸ್ವಯಂ ಪ್ರೇರಣೆಯಿಂದ ದೇಣಿಗೆ ಕೊಡಲು ಮುಂದಾಗಿದ್ದಾರೆ.

ಶಾಲೆಯ ಹೊರ ಗೋಡೆಗಳ ಮೇಲೆ ಬಳ್ಳಾರಿ, ವಿಜಯನಗರ ಜಿಲ್ಲೆಗೆ ಸೇರಿದ ಸಾಂಸ್ಕೃತಿಕ ನಾಯಕರು, ಪಾರಂಪರಿಕ ಸ್ಥಳಗಳನ್ನು ಚಿತ್ರಿಸಲಾಗಿದೆ. ಮೇರು ಸಾಧನೆ ಮಾಡಿರುವ ಮಲ್ಲಿಗೆ ನಾಡಿನ ಸಾಹಿತಿಗಳು, ಐತಿಹಾಸಿಕ ಸ್ಥಳಗಳ ಚಿತ್ರಗಳನ್ನು ಬಿಡಿಸಿದ್ದಾರೆ. ಗ್ರಾಮೀಣ ಕ್ರೀಡೆ, ಹಬ್ಬ, ಗ್ರಾಮ ನೈರ್ಮಲ್ಯದ ಚಿತ್ರಗಳೂ ಗಮನ ಸೆಳೆಯುತ್ತಿವೆ.

ADVERTISEMENT

ಮೊದಲ ಮಹಡಿಯ ಮೇಲಿನ ಹೊರ ಗೋಡೆಗಳಲ್ಲಿ ಕರ್ನಾಟಕ ರತ್ನರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರನ್ನು ಆಕರ್ಷಿಕವಾಗಿ ಚಿತ್ರಿಸಲಾಗಿದೆ. ಪರಿಸರ, ವಿಜ್ಞಾನ, ತಂತ್ರಜ್ಞಾನದ ಸಾಧನೆಗಳು ಗೋಡೆಯ ಮೇಲೆ ಅನಾವರಣಗೊಂಡಿವೆ.

ಶಾಲಾ ಕಟ್ಟಡವನ್ನು ಬರೀ ಬಾಹ್ಯವಾಗಿ ಅಲಂಕಾರಗೊಳಿಸಿಲ್ಲ. ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ರೀತಿಯಲ್ಲಿ ತರಗತಿ ಕೋಣೆಗಳನ್ನು ಪಠ್ಯ ವಿಷಯ ಹಾಗೂ ಚಿತ್ರಪಟಗಳಿಂದ ವಿಶೇಷವಾಗಿ ಸಜ್ಜುಗೊಳಿಸಲಾಗಿದೆ. ವ್ಯಾಕರಣದಿಂದ ಹಿಡಿದು ಪಠ್ಯದ ಎಲ್ಲ ವಿಷಯಗಳು ಗೋಡೆಯ ಮೇಲೆ ಬಿತ್ತರಗೊಂಡಿವೆ. ಸಾಮಾನ್ಯ ಜ್ಞಾನ ಹೆಚ್ಚಿಸುವ ಬರಹಗಳು ಗೋಡೆಯಲ್ಲಿ ಜಾಗ ಪಡೆದಿವೆ. ಕಲಾವಿದರಾದ ಚಮನ್ ಸಾಬ್, ಹನುಮಂತು ಸಂಗಡಿಗರು ಅದ್ಭುತವಾಗಿ ಚಿತ್ರ ಬಿಡಿಸಿದ್ದಾರೆ.

‘ನಾವು ಓದಿದ ಶಾಲೆಯ ಬೆಳವಣಿಗೆಗಾಗಿ ಗೆಳೆಯರೆಲ್ಲ ಸೇರಿ ಪ್ರತಿವರ್ಷವೂ ಒಂದೊಂದು ಕೊಡುಗೆ ನೀಡುತ್ತಿದ್ದೇವೆ. ಕಳೆದ ವರ್ಷ ಇಂಗ್ಲಿಷ್ ಮತ್ತು ಕಂಪ್ಯೂಟರ್ ಬೋಧನೆಗೆ ಒಬ್ಬ ಅತಿಥಿ ಶಿಕ್ಷಕರನ್ನು ನೇಮಿಸಿದ್ದೆವು. ಈ ಬಾರಿ ಶಾಲೆಯ ಅಂದ ಚೆಂದ ಹೆಚ್ಚಿಸಿದ್ದೇವೆ’ ಎಂದು ಶಿಕ್ಷಕ ಕೊಟ್ರೇಶ್‌ ಹಿರೇಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.