ಕಂಪ್ಲಿ: ತಾಲ್ಲೂಕಿನ ರಾಮಸಾಗರ ಗ್ರಾಮ ಹೊರವಲಯದ ಕಣಿವಿತಿಮ್ಮಲಾಪುರ ರಸ್ತೆ ವ್ಯಾಪ್ತಿಯಲ್ಲಿರುವ ಕಬ್ಬಿನ ಗದ್ದೆಗಳಿಗೆ ಮೂರು ಕರಡಿಗಳು ನಿರಂತರವಾಗಿ ದಾಳಿ ನಡೆಸಿ ಬೆಳೆ ಹಾಳು ಮಾಡುತ್ತಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ.
‘ಒಂದು ತಿಂಗಳಿಂದ ರಾತ್ರಿ ವೇಳೆ ಮೂರು ಕರಡಿಗಳು ದಾಳಿ ನಡೆಸುತ್ತಿವೆ. ಈ ಸಂದರ್ಭದಲ್ಲಿ ಗದ್ದೆ ವ್ಯಾಪ್ತಿಯ ಕೆಲ ಅಡಿ ಅಂತರದಲ್ಲಿ ಬೆಂಕಿ ಹಾಕಿ ಕುಳಿತರೂ, ಪಟಾಕಿ ಸಿಡಿಸಿದರೂ ಕರಡಿಗಳು ಹೆದರುತ್ತಿಲ್ಲ’ ಎಂದು ರೈತರಾದ ಗೆಣೆಕೆಹಾಳು ಭೀಮಲಿಂಗನಗೌಡ, ಬಿ. ಮಂಜುನಾಥ, ವೀರನಗೌಡ, ಬೇವಿನಹಳ್ಳಿ ವಿರುಪಾಕ್ಷಿ, ಕಾಟಂಬ್ಲಿ ಯಂಕಣ್ಣ, ರಾಮರೆಡ್ಡಿ, ಮೇಷ್ಟ್ರು ರೇಣುಕಪ್ಪ ಬೇಸರ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆಯವರು ಕರಡಿಗಳನ್ನು ಸೆರೆಹಿಡಿದು ದೂರ ಸಾಗಿಸುವಂತೆ ರೈತರು ಒತ್ತಾಯಿಸಿದರು.
ಅರಣ್ಯ ರಕ್ಷಕ ರಾಘವೇಂದ್ರ ಮಾತನಾಡಿ, ‘ರೈತರ ಮನವಿ ಮೇರೆಗೆ ಅರಣ್ಯ ವೀಕ್ಷಕ ನಾಗರಾಜ, ವನಪಾಲಕ ನಾಗರಾಜ ಅವರೊಡನೆ ಕರಡಿ ದಾಳಿ ನಡೆಸಿದ ಕಬ್ಬಿನ ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಕರಡಿಗಳಿಂದ ಕಬ್ಬಿನ ಬೆಳೆ ನಷ್ಟ ಉಂಟಾದ ರೈತರು ಪರಿಹಾರಕ್ಕೆ ಹೊಸಪೇಟೆಯ ಪ್ರಾದೇಶಿಕ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಬೇಕು’ ಎಂದು ಸ್ಪಷ್ಟಪಡಿಸಿದರು.
ಜನವಸತಿ ಅಲ್ಲದ ಪ್ರದೇಶವಾಗಿರುವುದರಿಂದ ಕರಡಿಗಳ ಸೆರೆಗೆ ಬೋನ್ ಅಳವಡಿಸಲು ಬರುವುದಿಲ್ಲ ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.