ಕರಡಿ
–
ಬಳ್ಳಾರಿ: ಸೋಮವಾರ ರಾತ್ರಿ ಬಳ್ಳಾರಿ ನಗರ ಪ್ರವೇಶಿಸಿ, ಕೋಟೆಯಲ್ಲಿ ಅಡಗಿದ್ದ ಕರಡಿಯನ್ನು ಮಂಗಳವಾರ ಮಧ್ಯರಾತ್ರಿ ಸೆರೆ ಹಿಡಿದಿರುವುದಾಗಿ ಬಳ್ಳಾರಿ ಪ್ರಾದೇಶಿಕ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಬಸವರಾಜ ಕೆ.ಎನ್ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ‘ಸೋಮವಾರ ರಾತ್ರಿಯೇ ಬಳ್ಳಾರಿ ಕೋಟೆ ಹತ್ತಿ ಕರಡಿ ಅಡಗಿಕೊಂಡಿತ್ತು. ಅದನ್ನು ಹಿಡಿಯಲು ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಿಂದ ಪಶುವೈದ್ಯಕೀಯ ತಂಡವನ್ನು ಕರೆಸಲಾಗಿತ್ತು. ಕರಡಿ ಕೋಟೆ ಪ್ರವೇಶಿಸಿದ್ದರಿಂದ ಕಾರ್ಯಾಚರಣೆ ನಿಲ್ಲಿಸಿ, ಅದರ ಮೇಲೆ ನಿಗಾ ವಹಿಸಲಾಗಿತ್ತು. ಮಂಗಳವಾರ ರಾತ್ರಿ 8.30ರಿಂದ 9ರ ಸುಮಾರಿಗೆ ಕೋಟೆಯಿಂದ ಕೆಳಗೆ ಇಳಿಯಲು ಆರಂಭಿಸಿತು. ಆಗ ಮತ್ತೆ ಸೆರೆ ಕಾರ್ಯಾಚರಣೆ ಆರಂಭಿಸಲಾಯಿತು. ರಾತ್ರಿ ಇಡೀ ಕಾರ್ಯಾಚರಣೆ ನಡೆಸಿ ಬೆಳಗಿನಜಾವ 3ರ ಹೊತ್ತಿಗೆ ಅದನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಯಿತು’ ಎಂದು ತಿಳಿಸಿದ್ದಾರೆ.
‘ಅಂದಾಜು ಐದು ವರ್ಷದ ಹೆಣ್ಣು ಕರಡಿ ಇದಾಗಿದೆ. ಪ್ರಾಥಮಿಕ ಪರೀಕ್ಷೆ, ಚಿಕಿತ್ಸೆ, ಮೈಕ್ರೋ ಚಿಪ್ ಅಳವಡಿಕೆಗಾಗಿ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಕರಡಿಯನ್ನು ಕಳುಹಿಸಲಾಗಿದೆ’ ಎಂದು ಬಸವರಾಜ ತಿಳಿಸಿದ್ದಾರೆ.
‘ಪೊಲೀಸ್ ಹಾಗೂ ಪುರಾತತ್ವ ಇಲಾಖೆಯ ಸಹಕಾರದೊಂದಿಗೆ, ಬಳ್ಳಾರಿ ವಲಯ ಅರಣ್ಯಾಧಿಕಾರಿ ಗಿರೀಶ್ ಕುಮಾರ್ ಡಿ.ಕೆ ನೇತೃತ್ವದ ತಂಡ ಕರಡಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.